ಲಂಡನ್, ಸೆ 16 ಇಲ್ಲಿನ ದಿ ಓವಲ್ ಕ್ರೀಡಾಂಗಣದಲ್ಲಿ ಭಾನುವಾರ ಮುಕ್ತಾಯವಾದ ಐದನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ಗೆದ್ದು ಆ್ಯಷಸ್ ಟೆಸ್ಟ್ ಸರಣಿಯ 2-2 ಅಂತರದಲ್ಲಿ ಸಮಬಲ ಸಾಧಿಸಿತು. ಆ ಮೂಲಕ 47 ವರ್ಷಗಳ ಬಳಿಕ ಇದೇ ಮೊದಲ ಬಾರಿ ಪುರುಷರ ಆ್ಯಷಸ್ ಸರಣಿ ಡ್ರಾನಲ್ಲಿ ಸಮಾಪ್ತಿಯಾಯಿತು.
1972ರಲ್ಲಿ ಇಂಗ್ಲೆಂಡ್ ನೆಲದಲ್ಲಿ ಕೊನೆಯ ಬಾರಿ ಆ್ಯಷಸ್ ಟೆಸ್ಟ್ ಸರಣಿ ಡ್ರಾ ಆಗಿತ್ತು. ಇದಾದ ಬಳಿಕ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಎರಡೂ ತಂಡಗಳ ತಲಾ ಐದು ಬಾರಿ ಜಯ ಸಾಧಿಸಿವೆ.
ಭಾನುವಾರ 399 ರನ್ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ, 77 ಓವರ್ಗಳಿಗೆ 263 ರನ್ಗಳಿಗೆ ಆಲ್ಔಟ್ ಆಗಿ ಸೋಲು ಒಪ್ಪಿಕೊಂಡಿತು. ಆಸ್ಟ್ರೇಲಿಯಾ ಪರ ಕೊನೆಯವರೆಗೂ ಏಕಾಂಗಿ ಹೋರಾಟ ನಡೆಸಿದ ಮ್ಯಾಥ್ಯೂ ವೇಡ್(117 ರನ್) ವೃತ್ತಿ ಜೀವನದ ನಾಲ್ಕನೇ ಶತಕ ಸಿಡಿಸಿದರು. ಇವರಿಗೆ ಮತ್ತೊಂದು ತುದಿಯಲ್ಲಿ ಯಾರೂ ಸಾಥ್ ನೀಡಲೇ ಇಲ್ಲ. ಪ್ರಸ್ತುತ ಸರಣಿಯಲ್ಲಿ ರನ್ ಹೊಳೆ ಹರಿಸಿದ್ದ ಸ್ಟೀವನ್ ಸ್ಮಿತ್ ಈ ಇನಿಂಗ್ಸ್ನಲ್ಲಿ 23 ರನ್ ಗಳಿಗೆ ಸೀಮಿತರಾದರು.
ಇಂಗ್ಲೆಂಡ್ ಪರ ಮಾರಕ ದಾಳಿ ನಡೆಸಿದ ಸ್ಟುವರ್ಟ್ ಬ್ರಾಡ್ ನಾಲ್ಕು ವಿಕೆಟ್ ಕಿತ್ತು ಇಂಗ್ಲೆಂಡ್ ಗೆಲುವಿನಲ್ಲಿ ಪ್ರಧಾನ ಪಾತ್ರವಹಿಸಿದರು. ಐದನೇ ಪಂದ್ಯದ ಸೋಲಿನ ಹೋರತಾಗಿಯು ಆಸ್ಟ್ರೇಲಿಯಾ 2017-18ನೇ ಸಾಲಿನಲ್ಲಿ ಆ್ಯಷಸ್ ಸರಣಿ ಗೆಲುವಿನ ಫಲವಾಗಿ ಪ್ರಸ್ತುತ ಸರಣಿ ಡ್ರಾ ಆದರೂ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಂಡಿತು.
ಪ್ರಥಮ ಇನಿಂಗ್ಸ್ನಲ್ಲಿ ಆರು ವಿಕೆಟ್ ಕಿತ್ತಿದ್ದ ಇಂಗ್ಲೆಂಡ್ ಯುವ ವೇಗಿ ಜೊಫ್ರಾ ಆರ್ಚರ್ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಲಾಯಿತು. ಪ್ರಸ್ತುತ ಸರಣಿಯಲ್ಲಿ ಅಸಾಧರಣ ಪ್ರದರ್ಶನ ತೋರಿದ ಮಾಜಿ ನಾಯಕ ಸ್ಟೀವನ್ ಸ್ಮಿತ್ 774 ರನ್ ಗಳಿಸಿ ಸರಣಿ ಶ್ರೇಷ್ಠ ಪ್ರಶಸ್ತಿ ತನ್ನದಾಗಿಸಿಕೊಂಡರು. ಅಲ್ಲದೇ, ಒಂದೇ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದ ಭಾರತದ ಸುನೀಲ್ ಗವಾಸ್ಕರ್ ಅವರ ದಾಖಲೆಯನ್ನು ಸರಿಗಟ್ಟಿದರು.
ಸ್ಟೀವನ್ ಸ್ಮಿತ್ ಬಿಟ್ಟರೆ ಸರಣಿಯಲ್ಲಿ ಹೆಚ್ಚು ಆಕರ್ಷಣೆಯಾಗಿದ್ದು ಇಂಗ್ಲೆಂಡ್ ಸ್ಟಾರ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ! ಬ್ಯಾಟ್ನಿಂದ ಸ್ಟೋಕ್ಸ್ 440 ರನ್ ಹಾಗೂ ಬೌಲಿಂಗ್ಲ್ಲಿ ಎಂಟು ವಿಕೆಟ್ ಕಿತ್ತಿದ್ದಾರೆ.
ಬಮರ್ಿಂಗ್ಹ್ಯಾಮ್ನಲ್ಲಿ ನಡೆದಿದ್ದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ 251 ರನ್ಗಳಿಂದ ಜಯ ಸಾಧಿಸಿತ್ತು. ದಿ ಲಾಡ್ರ್ಸ ಅಂಗಳದ ಎರಡನೇ ಪಂದ್ಯ ಡ್ರಾ ಆಗಿತ್ತು. ಹೇಡಿಂಗ್ಲೆಯಲ್ಲಿ ನಡೆದಿದ್ದ ಮೂರನೇ ಪಂದ್ಯದಲ್ಲಿ ಬೆನ್ ಸ್ಟೋಕ್ಸ್ ಅಸಾಧಾರಣ ಪ್ರದರ್ಶನದ ನೆರವಿನಿಂದ ಇಂಗ್ಲೆಂಡ್ ಗೆದ್ದು 1-1 ಸಮಬಲ ಸಾಧಿಸಿತ್ತು.
ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಶಕ್ತಿಯುತವಾಗಿ ಕಣಕ್ಕೆ ಇಳಿದ ಆಸ್ಟ್ರೇಲಿಯಾ 185 ರನ್ ಗಳಿಂದ ಗೆಲುವು ಸಾಧಿಸುವ ಮೂಲಕ ಆ್ಯಷಸ್ ಟ್ರೋಫಿಯನ್ನು ತನ್ನಲ್ಲಿಯೇ ಉಳಿಸಿಕೊಂಡಿತು.
ಆ್ಯಷಸ್ ಟ್ರೋಫಿ ತನ್ನಲ್ಲೆ ಉಳಿಸಿಕೊಂಡ ಸಂತಸದಲ್ಲಿ ತೇಲುತ್ತಿರುವ ಆಸ್ಟ್ರೇಲಿಯಾ ಶ್ರೀಲಂಕಾ ವಿರುದ್ಧ ಮೂರು ಪಂದ್ಯಗಳ ಟಿ-20 ಸರಣಿ ಆಡಲು ಸಜ್ಜಾಗಲಿದೆ. ಇನ್ನು ಆತಿಥೇಯ ಇಂಗ್ಲೆಂಡ್ ತಂಡ ನ್ಯೂಜಿಲೆಂಡ್ ವಿರುದ್ಧ ಐದು ಪಂದ್ಯಗಳ ಟಿ-20 ಸರಣಿ ಹಾಗೂ ಎರಡು ಪಂದ್ಯಗಳ ಟೆಸ್ಟ್ ಸರಣಿ ಆಡಲು ಸಿದ್ಧತೆ ನಡೆಸಲಿದೆ.