ಧಾರವಾಡ 05: ನಗರದ ಸಂಗೀತದ ನೆಲ, ದೇಶದಲ್ಲಿಯೇ ಇದಕ್ಕೊಂದು ಮಹತ್ವದ ಸ್ಥಾನವಿದೆ. ಬಹಳ ಶ್ರೀಮಂತ ಸಂಸ್ಕೃತಿ ಹೊಂದಿದ ನಗರ. ದಿನನಿತ್ಯದ ಒತ್ತಡದಿಂದ ಹೊರಬರಲು ಸಂಗೀತ ಸಹಕಾರಿಯಾಗಿದೆ. ಸಿತಾರರತ್ನ ರಹಿಮತ್‌ಖಾನರು, ಪಂ.ಪಂಚಾಕ್ಷರಿ ಗವಾಯಿಗಳು, ಡಾ.ಮಲ್ಲಿಕಾರ್ಜುನ ಮನಸೂರ, ಭೀಮಸೇನ ಜೋಶಿ, ಗಂಗೂಬಾಯಿ ಹಾನಗಲ್, ಡಾ. ಪುಟ್ಟರಾಜ ಗವಾಯಿಗಳಂಥ ಅನೇಕ ದಿಗ್ಗಜರು ತಮ್ಮ ಅಮೋಘ ಸಾಧನೆಯಿಂದ ಈ ನೆಲಕ್ಕೆ ಘನತೆ ತಂದು ಕೊಟ್ಟಿದ್ದಾರೆ ಎಂದು ಹಿರಿಯ ಸ್ತ್ರೀರೋಗತಜ್ಞೆ ಡಾ.ಸೌಭಾಗ್ಯ ಕುಲಕರ್ಣಿ ಹೇಳಿದರು.
ತಬಲಾವಾದಕ ಪಂ. ಶಂಕ್ರಪ್ಪ ಭೀಮಾಬಾಯಿ ಹೂಗಾರ ಸಂಗೀತ ಸಂಘವು ದಿನಾಂಕ: 04.03.2025ರಂದು ಸಂಜೆ ನಗರದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಏರಿ್ಡಸಿದ್ದ ತಬಲಾವಾದಕ ಪಂ. ಶಂಕ್ರಪ್ಪ ಮತ್ತು ಭೀಮಾಬಾಯಿ ಹೂಗಾರ ಇವರ 40ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ ಯುವ ಪೀಳಿಗೆ ಸಂಗೀತದತ್ತ ಒಲವು ತೋರುತ್ತಿರುವುದು ಧನಾತ್ಮಕ ಬೆಳವಣಿಗೆಯಾಗಿದೆ. ಈ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಿರಂತರ ಕಾರ್ಯಕ್ರಮಗಳಾಗಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ರಂಗಕರ್ಮಿ ವೀರಣ್ಣ ಪತ್ತಾರ ಮಾತನಾಡುತ್ತ ಭಾರತೀಯ ಸಂಗೀತ ಪರಂಪರೆಯಲ್ಲಿ ಅನೇಕ ಸಾಧಕರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಆ ಪೈಕಿ ಶಂಕ್ರಪ್ಪ ಹೂಗಾರ ಕೊಡುಗೆ ಅಪಾರ, ಇಂಥ ಸಾಧಕರನ್ನು ಸ್ಮರಿಸುವ ಮೂಲಕ ಪರಂಪರೆಯನ್ನ ಗೌರವಿಸಬೇಕಿದೆ. ಮಕ್ಕಳಿಗೆ ಸಂಗೀತಗಾರರ ಇತಿಹಾಸ ತಿಳಿಸುವ ಕೆಲಸವಾಗಬೇಕಿದೆ. ಸಂಗೀತ ಪರಂಪರೆ ಉಳಿದು ಬೆಳೆಯಬೇಕಾದರೆ, ಕಲಾ ಪೋಷಕರ ಸಹಕಾರ ಅಗತ್ಯ ಎಂದರು.
ನ್ಯಾಯವಾದಿ ಡಾ.ಉದಯಕುಮಾರ ದೇಸಾಯಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಲಬುರಗಿ ಆಕಾಶವಾಣಿ ನಿಲಯ ಕಲಾವಿದ ಪಂ. ಸಿದ್ಧಣ್ಣ ಹೂಗಾರ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಕೃಷಿ ವಿವಿ ನಿವೃತ್ತ ಪ್ರಾಧ್ಯಾಪಕ ಪಾಂಡುರಂಗ ಶ್ರೀನಿವಾಸ ಕಾವಿ ಇವರನ್ನು ಸನ್ಮಾನಿಸಲಾಯಿತು.
ನಂತರ ಜರುಗಿದ ಸಂಗೀತೋತ್ಸವದಲ್ಲಿ ಸೋಲಾಪುರದ ಪಂ. ಭೀಮಣ್ಣ ಜಾಧವ ಅವರು ಸುಂದರಿವಾದನದಲ್ಲಿ ರಾಗ ಹಂಸಧ್ವನಿ ಪ್ರಸ್ತುತ ಪಡಿಸಿದರು. ಸಹವಾದನದಲ್ಲಿ ಗುರುನಾಥ ಜಾಧವ, ಗೋರಖನಾಥ ಜಾಧವ, ಮಯೂರೇಶ ಜಾಧವ, ವೆಂಕಟೇಶಕುಮಾರ ಜಾಧವ ಇದ್ದರು.
ಡಾ. ಮೋಹಸಿನ್ ಖಾನ್ ಅವರ ಸಿತಾರವಾದನ, ಸದಾಶಿವ ಐಹೊಳೆ ಅವರಿಂದ ಗಾಯನ ಪ್ರಸ್ತುತ ಪಡಿಸಿದರು. ತಬಲಾದಲ್ಲಿ ಪಂ.ಸಾತಲಿಂಗಪ್ಪ ದೇಸಾಯಿ ಕಲ್ಲೂರ, ರಘುನಂದನ ಗೋಪಾಲ ಹಾಗೂ ಸಂವಾದಿನಿಯಲ್ಲಿ ವಿನೋದ ಪಾಟೀಲ ಸಾಥ್ ಸಂಗತ ನೀಡಿದರು. ಸಂಸ್ಥೆಯ ಸಂಗೀತ ವಿದ್ಯಾರ್ಥಿಗಳಿಂದ ಸಮೂಹ ಗಾಯನ ಜರುಗಿತು.
ಮಾಯಾ ರಾಮನ್ ನಿರೂಪಿಸಿದರು. ಮಳೆಮಲ್ಲೇಶ ಹೂಗಾರ ಸ್ವಾಗತಿಸಿದರು. ಉಮೇಶ ಮುನವಳ್ಳಿ ವಂದಿಸಿದರು.
ಕಾರ್ಯಕ್ರಮದಲ್ಲಿ ಗಣ್ಯರಾದ ರಾಘವೇಂದ್ರ ಆಯಿ, ಪಂ. ಬಿ.ಎಸ್.ಮಠ, ಪಂ.ಶ್ರೀಪಾದ ಹೆಗಡೆ, ಉಸ್ತಾದ್ ಛೋಟೆ ರಹಿಮತ್‌ಖಾನ್, ಶರಣಬಸವ ಚೋಳಿನ, ಪಂ.ರಘುನಾಥ ನಾಕೋಡ, ಪಂ.ವಾದಿರಾಜ ನಿಂಬರಗಿ, ಡಾ.ಮಲ್ಲಿಕಾರ್ಜುನ ತರ್ಲಘಟ್ಟಿ, ಉಸ್ತಾದ್ ಶಫಿಕ್‌ಖಾನ್, ಮಲ್ಲಿಕಾರ್ಜುನ ಚಿಕ್ಕಮಠ, ಭಾರತಿದೇವಿ ರಾಜಗುರು, ರಮೇಶ ನಾಡಗೇರ, ಗುರುಪುತ್ರ ಭರಬರಿ, ಡಾ.ಎ.ಎಲ್.ದೇಸಾಯಿ ಉಪಸ್ಥಿತರಿದ್ದರು.