ಕನ್ನಡ ಸಾಹಿತ್ಯ ಸಮ್ಮೇಳನದ ಭದ್ರತೆಗೆ 4000 ಪೊಲೀಸರ ನಿಯೋಜನೆ: ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ್

ಕಲಬುರಗಿ,  ಫೆ .3, ಫೆಬ್ರವರಿ 5 ರಿಂದ ನಡೆಯಲಿರುವ ಮೂರು ದಿನಗಳ 85ನೇ 'ಅಖಿಲ ಭಾರತ ಕನ್ನಡ  ಸಾಹಿತ್ಯ ಸಮ್ಮೇಳನ'ದ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು  ನಗರದಲ್ಲಿ 4,000 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ್ ತಿಳಿಸಿದ್ದಾರೆ.ಯುಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ಪ್ರಮುಖ ವೃತ್ತಗಳು, ಚೌಕ್‌ಗಳು, ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ ಅಳವಡಿಸಲಾಗುತ್ತಿದೆ.  10 ಕೆಎಸ್‌ಆರ್‌ಪಿ ತುಕಡಿ, 15 ಡಿಎಎರ್‌ ತುಕಡಿಗಳನ್ನು ಸಮ್ಮೇಳನ ನಡೆಯುವ ಮೈದಾನದಲ್ಲಿ ನಿಯೋಜಿಸಲಾಗುವುದು ಎಂದು ತಿಳಿಸಿದರು.

ನಗರದ ಸುಮಾರು 1,000 ಪೊಲೀಸರಿಗೆ ತರಬೇತಿ ನೀಡಲಾಗಿದ್ದು, ನೆರೆಯ ಜಿಲ್ಲೆಗಳಿಂದ 3,000 ಪೊಲೀಸರನ್ನು ಸಮ್ಮೇಳನ ಭದ್ರತೆಗಾಗಿ ಕರೆಸಲಾಗುವುದು."ಮೂವರು ಪೊಲೀಸ್ ವರಿಷ್ಠಾಧಿಕಾರಿಗಳು ಭದ್ರತೆಯನ್ನು ನೋಡಿಕೊಳ್ಳಲಿದ್ದಾರೆ. ಒಟ್ಟು 15 ಸಹಾಯಕ ಪೊಲೀಸ್ ಆಯುಕ್ತರು, 75 ಇನ್ಸ್‌ಪೆಕ್ಟರ್‌ಗಳು ಮತ್ತು 200 ಸಬ್‌ಇನ್ಸ್‌ಪೆಕ್ಟರ್‌ಗಳನ್ನು ಸಹ ನಿಯೋಜಿಸಲಾಗುವುದು ಎಂದು ಅವರು ವಿವರಿಸಿದರು.ಸಮ್ಮೇಳನ  ಅಧ್ಯಕ್ಷರ ಮೆರವಣಿಗೆಯಲ್ಲಿ ಸುಮಾರು ಒಂದು ಲಕ್ಷ ಜನರು ಭಾಗವಹಿಸುವ ಸಾಧ್ಯತೆಯಿದೆ. ಮೆರವಣಿಗೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕ್ರಮ  ಕೈಗೊಳ್ಳಲಾಗಿದೆ. ಎರಡು ಡ್ರೋನ್ ಕ್ಯಾಮೆರಾ ಮೆರವಣಿಗೆಯ ಮೇಲೆ ನಿಗಾ ಇಡಲಿದೆ.  ಅಲ್ಲದೆ, ಒಂದು ಡ್ರೋನ್ ಕ್ಯಾಮೆರಾ ಮೂರು ದಿನಗಳ ಕಾಲ ಸಮ್ಮೇಳನದ ಮುಖ್ಯ ವೇದಿಕೆಯಲ್ಲಿ ಕಣ್ಗಾವಲಿನಲ್ಲಿರುತ್ತದೆ ಎಂದು ಆಯುಕ್ತರು ತಿಳಿಸಿದರು ಡ್ರೋನ್‌ಗಳನ್ನು ಮೇಲ್ವಿಚಾರಣೆ ಮಾಡಲು ತಂಡವನ್ನು ಸಿದ್ಧಪಡಿಸಲಾಗಿದೆ. ಮೂರು ದಿನಗಳ ಕಾಲ ನಗರದಲ್ಲಿ ಸಂಚಾರವನ್ನು ನಿಯಂತ್ರಿಸಲು ಆದ್ಯತೆ ನೀಡಲಾಗಿದೆ. ವಿವಿಧ ಕಲ್ಯಾಣ ಮಂಟಪ ಮತ್ತು ನಾಗೇನಹಳ್ಳಿ ಪೊಲೀಸ್ ತರಬೇತಿ ಶಾಲೆಗಳಲ್ಲಿ ಪೊಲೀಸರಿಗೆ ವಸತಿ ಕಲ್ಪಿಸಲಾಗಿದೆ ಎಂದು ನಾಗರಾಜ್ ಹೇಳಿದರು.