ಮುಂಬೈನಿಂದ ಸವಣೂರಿಗೆ ಬಂದಿದ್ದ 40 ವರ್ಷದ ವ್ಯಕ್ತಿಗೆ ಸೋಂಕು ದೃಢ: ಡಿಸಿ

ಹಾವೇರಿ: ಮೇ 05: ಮುಂಬೈನಿಂದ ಸವಣೂರಿಗೆ ಬಂದಿದ್ದ ಎರಡನೇ ವ್ಯಕ್ತಿಗೆ  ಕರೋನಾ ಸೋಂಕು ದೃಢಪಟ್ಟಿದೆ. ನಿನ್ನೆ ಪತ್ತೆಯಾದ ಕ-639 ಸೋಂಕಿತನ ಸಂಪರ್ಕದ 40 ವರ್ಷ ವಯೋಮಾನ ಕ -672 ಪುರುಷನಿಗೆ ಕೋವಿಡ್ ದೃಢಗೊಂಡಿದ್ದು, ಇದು ಜಿಲ್ಲೆಯ ಎರಡನೇ ಪ್ರಕರಣವಾಗಿದೆ ಎಂದು  ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ತಿಳಿಸಿದ್ದಾರೆ.

ಸದರಿ ಸೋಂಕಿತನು ನಿನ್ನೆ ಪತ್ತೆಯಾದ ಕ-639 ಸೋಂಕಿತನ ಸಂಪರ್ಕ ಹೊಂದಿರುತ್ತಾನೆ. ಕ -639 ಸೋಂಕಿತನ ಸಹೋದರನಾದ 40 ವರ್ಷ ವಯೋಮಾನದ ಕ-672 ತನ್ನ ಮಗ ಹಾಗೂ ತಮ್ಮನೊಂದಿಗೆ ಮುಂಬೈಯಿಂದ ಲಾರಿಯ ಮೂಲಕ ಏ.28ರಂದು ರಾತ್ರಿ  11-00 ಗಂಟೆಗೆ ಸವಣೂರಿಗೆ ಬಂದು ನೇರವಾಗಿ ಮನೆಗೆ ತೆರಳಿರುತ್ತಾನೆ. ದಿನಾಂಕ 29-04-2020 ರಂದು ಸ್ಥಳೀಯರು ನೀಡಿದ ಮಾಹಿತಿಯ ಮೇರೆಗೆ ಒಟ್ಟು ಮೂರು ಜನರ ಸ್ವಾಬ್ ಟೆಸ್ಟ್ ನಡೆಸಲಾಗಿತ್ತು. 

 ಮೇ.04ರಂದು ಮುಂಜಾನೆ ಸದರಿ  ವ್ಯಕ್ತಿಗೆ  ಸೋಂಕಿರುವ ಬಗ್ಗೆ  ದೃಡಪಟ್ಟಿದ್ದರೂ ಸಹ, ನಿಯಮಾನುಸಾರ ಮರು ಪರೀಕ್ಷೆ ನಡೆಸಲಾಯಿತು. ಅದರ ವರದಿ ಇಂದು ಮಧ್ಯಾಹ್ನ ಸದರಿ  ವ್ಯಕ್ತಿಯ ಕೋವಿಡ್ 19 ಸೋಂಕಿತನೆಂದು ದೃಢಪಟ್ಟಿರುತ್ತದೆ ಮತ್ತು ಆರೋಗ್ಯ ಇಲಾಖೆಯಿಂದ           ಕ -672 ಎಂದು ಗುರುತಿಸಲಾಗಿರುತ್ತದೆ.

ಸದರಿ ಸೋಂಕಿತನ ಪ್ರಯಾಣದ ಇತಿಹಾಸವನ್ನು ಪರಿಶೀಲಿಸಿದಾಗ ಸದರಿ ಸೋಂಕಿತ ಕ -672  ಹಾಗೂ ಅವನ ಕುಟುಂಬ ಹಾಗೂ ಅವನ ಸ್ನೇಹಿತರು ಮತ್ತು ಅವನಿಗೆ ಚಿಕಿತ್ಸೆ ನೀಡಿದ ವೈದ್ಯರ ತಂಡ ಸೇರಿ 23 ಪ್ರಾಥಮಿಕ ಸಂಪರ್ಕ ಹೊಂದಿದವರು ಎಂದು ಗುರುತಿಸಲಾಗಿದೆ. ಅವರೆಲ್ಲರನ್ನು ಕ್ವಾರಂಟೈನ್ ಸೆಂಟರ್ನಲ್ಲಿ ಪ್ರತ್ಯೇಕಿಸಿ ಇಡಲಾಗಿದೆ.

   ಪ್ರತಿನಿತ್ಯ ವೈದ್ಯಕೀಯ ತಪಾಸಣೆ ನಡೆಸಲಾಗುತ್ತಿದೆ. ಸ್ವಾಬ್ ಮಾದರಿ ತೆಗೆದು ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬರಬೇಕಾಗಿದೆ ಎಂದು ತಿಳಿಸಿದ್ದಾರೆ.

 ಸೋಂಕಿತನ ಜೊತೆ ಸಂಪರ್ಕ ಹೊಂದಿದ ದ್ವಿತೀಯ ಹಂತದ ಸಂಪರ್ಕ ಹೊಂದಿದವರು ಒಟ್ಟು 25 ಜನರನ್ನು ಪತ್ತೆ ಹಚ್ಚಲಾಗಿದ್ದು, ಅವರನ್ನು ಅವರವರ ಗೃಹಗಳಲ್ಲಿ ಪ್ರತ್ಯೇಕಿಸಿ ಇಡಲಾಗಿದೆ. ಸೋಂಕಿತ ವಾಸ ಮಾಡುವ ಪ್ರದೇಶದ ಎರಡು ಬಡಾವಣೆಯಲ್ಲಿ ಒಟ್ಟು 394 ವಾಸದ ಮನೆಗಳಿದ್ದು, 1789 ಜನಸಂಖ್ಯೆ ಹೊಂದಿದ್ದು, ಆ ಪೂರ್ಣ ಪ್ರದೇಶವನ್ನು ಈಗಾಗಲೇ ಸೀಲ್ಡೌನ್ ಮಾಡಲಾಗಿದೆ.  ಸದರಿ ಪ್ರದೇಶಕ್ಕೆ ಒಳಬರುವ ಒಂದು ಮಾರ್ಗ ಮತ್ತು ಹೊರ ಹೋಗುವ ಒಂದು ಮಾರ್ಗ ಮಾತ್ರ ತೆರೆಯಲಾಗಿದೆ. 

        ಇನ್ಸಿಡೆಂಟಲ್ ಕಮಾಂಡರ್ ಆದೇಶದ ವಿನಃ ಯಾರೂ ಒಳ ಹೋಗುವಂತಿಲ್ಲ ಮತ್ತು ಹೊರಬರುವಂತಿಲ್ಲ. ಜನರಿಗೆ ದಿನನಿತ್ಯದ ಎಲ್ಲಾ ವಸ್ತುಗಳನ್ನು ಹಾಗೂ ವೈದ್ಯಕೀಯ ಅವಶ್ಯಕತೆಗಳನ್ನು ಪೂರೈಸಲು ಕಂಟ್ರೋಲ್ ರೂಂ ಸ್ಥಾಪಿಸಲಾಗಿದೆ ಸವಣೂರು ಸಹಾಯಕ ಆಯುಕ್ತರು ಹಾಗೂ ಡಿ.ಎಸ್.ಪಿ. ಅವರು ಅದರ ಮೇಲ್ವಿಚಾರಣೆ ವಹಿಸಿರುತ್ತಾರೆ. ಕೋವಿಡ್-19 ಪರಿಸ್ಥಿತಿಯನ್ನು ನಿಭಾಯಿಸಲು ಜಿಲ್ಲಾ ಮಟ್ಟದಲ್ಲಿ ವಿಪತ್ತು ನಿರ್ವಹಣಾ ತಂಡ ನಿಗಾವಹಿಸಿದೆ. ಎಲ್ಲಾ ತಂಡದ ಮುಖ್ಯಸ್ಥರು ಮತ್ತು ಅಧಿಕಾರಿಗಳು ಪರಿಸ್ಥಿತಿಯನ್ನು ಅವಲೋಕಿಸಿರುತ್ತಾರೆ ಎಂದು ಅವರು ತಿಳಿಸಿದ್ದಾರೆ.