ಮುಂಬಯಿ, ಜೂ.6ಕಳೆದ ತಿಂಗಳು ಸಿಲ್ವರ್ ಲೇಕ್ ಘೋಷಿಸಿದ್ದ 5,655.75 ಕೋಟಿ ರೂ.ಗಳ ಹೂಡಿಕೆಗೆ ಹೆಚ್ಚುವರಿಯಾಗಿ, ಸಿಲ್ವರ್ ಲೇಕ್ ಹಾಗೂ ಸಹ-ಹೂಡಿಕೆದಾರರು ಜಿಯೋ ಪ್ಲಾಟ್‌ಫಾರ್ಮ್ಸ್‌ನಲ್ಲಿ 4,546.80 ಕೋಟಿ ರೂ.ಗಳ ಹೆಚ್ಚುವರಿ ಹೂಡಿಕೆ ಮಾಡಲಿದ್ದಾರೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ("ರಿಲಯನ್ಸ್ ಇಂಡಸ್ಟ್ರೀಸ್") ಹಾಗೂ ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್ ("ಜಿಯೋ ಪ್ಲಾಟ್‌ಫಾರ್ಮ್ಸ್") ಘೋಷಿಸಿವೆ.
ಈ ಮೂಲಕ ಸಿಲ್ವರ್ ಲೇಕ್ ಹಾಗೂ ಅದರ ಸಹ-ಹೂಡಿಕೆದಾರರು ಒಟ್ಟು 10,202.55 ಕೋಟಿ ರೂ.ಗಳ ಹೂಡಿಕೆ ಮಾಡಿದಂತಾಗಿದೆ. ಸಿಲ್ವರ್ ಲೇಕ್ ಹೂಡಿಕೆಯು ಜಿಯೋ ಪ್ಲಾಟ್‌ಫಾರ್ಮ್ಸ್‌ನ ಈಕ್ವಿಟಿ ಮೌಲ್ಯವನ್ನು 4.91 ಲಕ್ಷ ಕೋಟಿ ರೂ.ಗಳಿಗೆ ಹಾಗೂ ಎಂಟರ್‌ಪ್ರೈಸ್ ಮೌಲ್ಯವನ್ನು 5.16 ಲಕ್ಷ ಕೋಟಿ ರೂ.ಗಳಿಗೆ ಕೊಂಡೊಯ್ಯಲಿದ್ದು, ಫುಲ್ಲಿ ಡೈಲ್ಯೂಟೆಡ್ ಬೇಸಿಸ್‌ನಲ್ಲಿ ಜಿಯೋ ಪ್ಲಾಟ್‌ಫಾರ್ಮ್ಸ್‌ನ ಶೇ.2.08ರಷ್ಟು ಈಕ್ವಿಟಿ ಪಾಲುದಾರಿಕೆಗೆ ಸಮಾನವಾಗಿರಲಿದೆ. ಈ ಹೂಡಿಕೆಯೊಂದಿಗೆ, ಆರು ವಾರಗಳಿಗಿಂತ ಕಡಿಮೆ ಅವಧಿಯಲ್ಲಿ ಮುಂಚೂಣಿ ತಂತ್ರಜ್ಞಾನ ಹೂಡಿಕೆದಾರರಿಂದ ಜಿಯೋ ಪ್ಲಾಟ್‌ಫಾರ್ಮ್ಸ್ 92,202.15 ಕೋಟಿ ರೂ. ಹೂಡಿಕೆ ಪಡೆದುಕೊಂಡಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಜಿಯೋ ಪ್ಲಾಟ್‌ಫಾರ್ಮ್ಸ್, ಭಾರತದಾದ್ಯಂತ ಉನ್ನತ ಗುಣಮಟ್ಟದ ಹಾಗೂ ಕೈಗೆಟುಕುವ ದರದ ಡಿಜಿಟಲ್ ಸೇವೆಗಳನ್ನು ಒದಗಿಸುವತ್ತ ತನ್ನ ಗಮನವನ್ನು ಕೇಂದ್ರೀಕರಿಸಿರುವ ಮುಂದಿನ ತಲೆಮಾರಿನ ತಂತ್ರಜ್ಞಾನ ವೇದಿಕೆಯಾಗಿದ್ದು, ಅದಕ್ಕೆ 388 ದಶಲಕ್ಷಕ್ಕೂ ಹೆಚ್ಚಿನ ಚಂದಾದಾರರಿದ್ದಾರೆ. ಬ್ರಾಡ್‌ಬ್ಯಾಂಡ್ ಸಂಪರ್ಕ, ಸ್ಮಾರ್ಟ್ ಸಾಧನಗಳು, ಕ್ಲೌಡ್ ಮತ್ತು ಎಡ್ಜ್ ಕಂಪ್ಯೂಟಿಂಗ್, ಬಿಗ್ ಡೇಟಾ ಅನಲಿಟಿಕ್ಸ್, ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಇಂಟರ್‌ನೆಟ್ ಆಫ್ ಥಿಂಗ್ಸ್, ಆಗ್ಮೆಂಟೆಡ್ ಮತ್ತು ಮಿಕ್ಸೆಡ್ ರಿಯಾಲಿಟಿ ಹಾಗೂ ಬ್ಲಾಕ್‌ಚೈನ್‌ನಂತಹ ಮುಂಚೂಣಿ ತಂತ್ರಜ್ಞಾನಗಳಿಂದ ಚಾಲಿತವಾಗಿರುವ ತನ್ನ ಡಿಜಿಟಲ್ ಇಕೋಸಿಸ್ಟಂನಾದ್ಯಂತ ಜಿಯೋ ಪ್ಲಾಟ್‌ಫಾರ್ಮ್ಸ್ ಗಮನಾರ್ಹ ಹೂಡಿಕೆಗಳನ್ನು ಮಾಡಿದೆ. ಒಳಗೊಳ್ಳುವ ಬೆಳವಣಿಗೆಯ ಫಲಗಳನ್ನು ಎಲ್ಲರೂ ಆನಂದಿಸುವಂತೆ ಮಾಡಲು, ಸಣ್ಣ ವರ್ತಕರು, ಅತಿಸಣ್ಣ ಉದ್ಯಮಗಳು ಹಾಗೂ ರೈತರೂ ಸೇರಿದಂತೆ ಭಾರತದಾದ್ಯಂತ 1.3 ಶತಕೋಟಿ ಜನರು ಹಾಗೂ ಉದ್ಯಮಗಳಿಗೆ ಡಿಜಿಟಲ್ ಇಂಡಿಯಾವನ್ನು ಸಾಧ್ಯವಾಗಿಸುವುದು ಜಿಯೋದ ದೂರದೃಷ್ಟಿಯಾಗಿದೆ.
ನಿರ್ವಹಣೆ ಮತ್ತು ಬದ್ಧ ಬಂಡವಾಳದ ಅಡಿಯಲ್ಲಿ ಸುಮಾರು $40 ಬಿಲಿಯನ್ ಸಂಯೋಜಿತ ಆಸ್ತಿ, ಹಾಗೂ ಪ್ರಪಂಚದ ಅತ್ಯುತ್ತಮ ತಂತ್ರಜ್ಞಾನ ಮತ್ತು ತಂತ್ರಜ್ಞಾನ-ಸಶಕ್ತ ಅವಕಾಶಗಳತ್ತ ಕೇಂದ್ರೀಕೃತ ಗಮನ ಹೊಂದಿರುವ ಸಿಲ್ವರ್ ಲೇಕ್, ದೊಡ್ಡ ಪ್ರಮಾಣದ ತಂತ್ರಜ್ಞಾನ ಹೂಡಿಕೆಯಲ್ಲಿ ಜಾಗತಿಕ ನಾಯಕತ್ವದ ಸ್ಥಾನದಲ್ಲಿದೆ. ವಿಶ್ವದರ್ಜೆಯ ನಿರ್ವಹಣಾ ತಂಡಗಳ ಜೊತೆ ಪಾಲುದಾರಿಕೆಯಲ್ಲಿ ಅತ್ಯುತ್ತಮ ಸಂಸ್ಥೆಗಳನ್ನು ಕಟ್ಟಿ ಬೆಳೆಸುವುದು ಅದರ ಗುರಿಯಾಗಿದೆ. ಏರ್‌ಬಿಎನ್‌ಬಿ, ಅಲಿಬಾಬ, ಆಂಟ್ ಫೈನಾನ್ಶಿಯಲ್, ಆಲ್ಫಾಬೆಟ್‌ನ ವೆರಿಲಿ ಮತ್ತು ವೇಮೋ ವಿಭಾಗಗಳು, ಡೆಲ್ ಟೆಕ್ನಾಲಜೀಸ್, ಟ್ವಿಟರ್ ಹಾಗೂ ಜಾಗತಿಕ ತಂತ್ರಜ್ಞಾನ ಕ್ಷೇತ್ರದ ಮುಂಚೂಣಿಯಲ್ಲಿರುವ ಇನ್ನಿತರ ಸಂಸ್ಥೆಗಳು ಅದರ ಹೂಡಿಕೆಗಳ ಪಟ್ಟಿಯಲ್ಲಿವೆ.
ಸಿಲ್ವರ್ ಲೇಕ್ ತಂದಿರುವ ಒಟ್ಟಾರೆ ಹೂಡಿಕೆಯ ಬಗ್ಗೆ ಪ್ರತಿಕ್ರಿಯೆ ನೀಡುತ್ತ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ, "ಭಾರತೀಯರೆಲ್ಲರ ಪ್ರಯೋಜನಕ್ಕಾಗಿ ಭಾರತದ ಡಿಜಿಟಲ್ ಇಕೋಸಿಸ್ಟಂನ ಬೆಳವಣಿಗೆ ಹಾಗೂ ರೂಪಾಂತರವನ್ನು ಮುಂದುವರೆಸುವಲ್ಲಿ ಸಿಲ್ವರ್ ಲೇಕ್ ಹಾಗೂ ಅದರ ಸಹ-ಹೂಡಿಕೆದಾರರು ನಮ್ಮ ಮೌಲ್ಯಯುತ ಪಾಲುದಾರರಾಗಿದ್ದಾರೆ. ನಾವು ಭಾರತೀಯ ಡಿಜಿಟಲ್ ಸಮಾಜದ ರೂಪಾಂತರಕ್ಕೆ ಚಾಲನೆ ನೀಡುತ್ತಿರುವಾಗ ಅವರ ವಿಶ್ವಾಸ ಮತ್ತು ಬೆಂಬಲ, ಹಾಗೆಯೇ ಜಾಗತಿಕ ತಂತ್ರಜ್ಞಾನ ಹೂಡಿಕೆಯಲ್ಲಿ ಅವರ ನಾಯಕತ್ವದ ಲಾಭ ಮತ್ತು ಅವರ ಮೌಲ್ಯಯುತ ಸಂಬಂಧಗಳ ಜಾಲದ ಪ್ರಯೋಜನವನ್ನು ಪಡೆದುಕೊಳ್ಳಲು ನಮಗೆ ಸಂತೋಷವಾಗಿದೆ. ಕೋವಿಡ್-19 ಜಾಗತಿಕ ಸೋಂಕಿನ ಸಮಯದಲ್ಲಿ, ಐದು ವಾರಗಳ ಅವಧಿಯಲ್ಲೇ, ಜಿಯೋ ಪ್ಲಾಟ್‌ಫಾರ್ಮ್ಸ್‌ನಲ್ಲಿ ಸಿಲ್ವರ್ ಲೇಕ್‌ನ ಹೆಚ್ಚುವರಿ ಹೂಡಿಕೆಯು ಭಾರತೀಯ ಆರ್ಥಿಕತೆಯ ಆಂತರಿಕ ಚೇತರಿಕೆಯ ಬಲವಾದ ಅನುಮೋದನೆಯಾಗಿದೆ ಎಂದು ನಾನು ಒತ್ತಿ ಹೇಳಲು ಬಯಸುತ್ತೇನೆ. ಸಮಗ್ರ ಡಿಜಿಟಲ್ ಸಕ್ರಿಯಗೊಳಿಸುವಿಕೆಯೊಂದಿಗೆ ಇದು ಖಂಡಿತವಾಗಿಯೂ ಇನ್ನಷ್ಟು ದೊಡ್ಡದಾಗಿ ಬೆಳೆಯಲಿದೆ." ಎಂದು ಹೇಳಿದ್ದಾರೆ.
ಹೂಡಿಕೆಯ ಬಗ್ಗೆ ಮಾತನಾಡಿದ ಸಿಲ್ವರ್ ಲೇಕ್ ಜಂಟಿ-ಸಿಇಓ ಮತ್ತು ವ್ಯವಸ್ಥಾಪಕ ಪಾಲುದಾರ ಈಗಾನ್ ಡರ್ಬನ್, "ಉನ್ನತ ಗುಣಮಟ್ಟ ಹಾಗೂ ಕಡಿಮೆ ವೆಚ್ಚದ ಡಿಜಿಟಲ್ ಸೇವೆಗಳ ಶಕ್ತಿಯನ್ನು ಸಾಮಾನ್ಯ ಗ್ರಾಹಕರಿಗೆ ಹಾಗೂ ಸಣ್ಣ ಉದ್ಯಮಗಳಿಗೆ ತಲುಪಿಸುವ ಧ್ಯೇಯದಲ್ಲಿ ಜಿಯೋ ಪ್ಲಾಟ್‌ಫಾರ್ಮ್ಸ್‌ಗೆ ನೀಡುತ್ತಿರುವ ಬೆಂಬಲವನ್ನು ಮುಂದುವರೆಸುವ ಉದ್ದೇಶದಿಂದ, ನಮ್ಮ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಹಾಗೂ ನಮ್ಮ ಸಹ-ಹೂಡಿಕೆದಾರರನ್ನು ಈ ಅವಕಾಶದಲ್ಲಿ ಪಾಲ್ಗೊಳ್ಳುವಂತೆ ಮಾಡಲು ನಾವು ಉತ್ಸುಕರಾಗಿದ್ದೇವೆ. ಜಿಯೋ ಮೇಲಿನ ಹೂಡಿಕೆಯ ರಭಸವು ಅದರ ಸದೃಢ ವ್ಯವಹಾರ ಮಾದರಿಯನ್ನು ಪ್ರಕಟಪಡಿಸುತ್ತದೆ ಮತ್ತು ಮುಖೇಶ್ ಅಂಬಾನಿ, ಅವರ ತಂಡ ಮತ್ತು ವಿಶ್ವದ ಅತ್ಯಂತ ಗಮನಾರ್ಹ ತಂತ್ರಜ್ಞಾನ ಕಂಪನಿಗಳಲ್ಲೊಂದನ್ನು ರಚಿಸುವ ಮತ್ತು ನಿರ್ಮಿಸುವ ಅವರ ಧೈರ್ಯದ ದೃಷ್ಟಿಕೋನದ ಕುರಿತು ನಮ್ಮ ಮೆಚ್ಚುಗೆಯನ್ನು ಒತ್ತಿಹೇಳುತ್ತದೆ." ಎಂದು ಹೇಳಿದ್ದಾರೆ.ಈ ವಹಿವಾಟು, ನಿಯಂತ್ರಕರ ಹಾಗೂ ಮತ್ತಿತರ ಅಗತ್ಯ ಅನುಮೋದನೆಗಳಿಗೆ ಒಳಪಟ್ಟಿರುತ್ತದೆ.ರಿಲಯನ್ಸ್ ಇಂಡಸ್ಟ್ರೀಸ್‌ಗೆ ಹಣಕಾಸು ಸಲಹೆಗಾರರಾಗಿ ಮೋರ್ಗನ್ ಸ್ಟಾನ್ಲಿ ಹಾಗೂ ವಕೀಲರಾಗಿ ಎಜ಼ೆಡ್‌ಬಿ ಆಂಡ್ ಪಾರ್ಟ್‌ನರ್ಸ್ ಹಾಗೂ ಡೇವಿಸ್ ಪೋಲ್ಕ್ ಆಂಡ್ ವಾರ್ಡ್‌ವೆಲ್ ಈ ವಹಿವಾಟಿಗೆ ಸಲಹೆ ನೀಡಿದ್ದಾರೆ. ಲೇಥಮ್ ಆಂಡ್ ವಾಟ್‌ಕಿನ್ಸ್ ಎಲ್‌ಎಲ್‌ಪಿ, ಶಾರ್ದೂಲ್ ಅಮರ್‌ಚಂದ್ ಮಂಗಲ್‌ದಾಸ್ ಆಂಡ್ ಕೋ. ಹಾಗೂ ಸಿಂಪ್ಸನ್ ಥಾಚರ್ ಆಂಡ್ ಬಾರ್ಟ್‌ಲೆಟ್ ಎಲ್‌ಎಲ್‌ಪಿ ಸಂಸ್ಥೆಗಳು ಸಿಲ್ವರ್ ಲೇಕ್‌ನ ವಕೀಲರಾಗಿ ಕಾರ್ಯನಿರ್ವಹಿಸಿವೆ ಎಂದು ಪ್ರಕಟಣೆ ತಿಳಿಸಿದೆ.