ನವದೆಹಲಿ, ಅ 17: ಪಶ್ಚಿಮ ಸೌದಿ ಅರೇಬಿಯಾದಲ್ಲಿ ಸಂಭವಿಸಿದ ಬಸ್ ಅಪಘಾತದಲ್ಲಿ ಮೃತಪಟ್ಟ 35 ಜನರ ಸಾವಿಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಸೌದಿ ಅರೇಬಿಯಾದ ಮೆಕ್ಕಾ ಬಳಿಯ ಬಸ್ ಅಪಘಾತದ ಸುದ್ದಿಯಿಂದ ಆಘಾತವಾಗಿದೆ. ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಸಂತಾಪವಿದ್ದು, ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದ ಪ್ರಾರ್ಥಿಸುತ್ತೇನೆ ಎಂದು ಪ್ರಧಾನಿ ಮೋದಿ ಗುರುವಾರ ಟ್ವೀಟ್ ಮಾಡಿದ್ದಾರೆ. ಪಶ್ಚಿಮ ಸೌದಿ ಅರೇಬಿಯಾದಲ್ಲಿ ನಡೆದ ಬಸ್ ಅಪಘಾತದಲ್ಲಿ ಕನಿಷ್ಠ 35 ಮಂದಿ ಸಾವನ್ನಪ್ಪಿದ್ದು ನಾಲ್ವರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಮದೀನಾ ಪ್ರದೇಶದ ಅಲ್ ಅಖಾಲ್ ವಸಾಹತು ಪ್ರದೇಶದಲ್ಲಿ ಬುಧವಾರ ಬಸ್ ಭಾರಿ ವಾಹನಕ್ಕೆ ಡಿಕ್ಕಿ ಹೊಡೆದಿತ್ತು. ಈ ಬಸ್ ನಲ್ಲಿ ಅರಬ್ ಮತ್ತು ಏಷ್ಯಾದ ಹಲವು ನಾಗರಿಕರಿದ್ದರು ಎಂದು ಹೇಳಲಾಗಿದೆ.