134ನೇ ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಆಚರಣೆ
ಕಲಾದಗಿ(ತಾ.ಬಾಗಲಕೋಟೆ) ---ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134 ನೆಯ ಜನ್ಮದಿನವನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಲಾದಗಿಯ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿತ್ತು. ಬಾಬಾ ಸಾಹೇಬರ ಭಾವಚಿತ್ರಕ್ಕೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಮಹಾಂತೇಶ್. ಹೆಚ್. ಬಿ ಪುಷ್ಪಾರ್ಚನೆ ಮಾಡಿ ಉದ್ಘಾಟಿಸಿ, ಮಾತನಾಡುತ್ತಾ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದಮನಿತ ಸಮುದಾಯದ ಪ್ರತಿನಿಧಿಯಾಗಿ, ಅಪಾರಜ್ಞಾನ ಸಂಪತ್ತು ಪಡೆದು, ಸಾಮಾಜಿಕ ಮತ್ತು ಧಾರ್ಮಿಕ ಅನಿಷ್ಠಗಳ ವಿರುದ್ಧವಾಗಿ ದನಿಯೆತ್ತಿದ್ದಾರೆ.
ಸಮಾನತೆಗಾಗಿ ರೂಪಿಸಿದ ಹೋರಾಟ ಅವಿಸ್ಮರಣೀಯ. ಮನುಷ್ಯ ಮನುಷ್ಯನನ್ನಾಗಿ ನೋಡುವ ಮಾನವತವಾದದ ನೆಲೆಗಳನ್ನು ಪ್ರತಿಪಾದಿಸಿದ್ದಾರೆ. ಹಾಗಾಗಿ ಸರ್ವ ಜನಾಂಗಕ್ಕೂ ಬೇಕಾದ ಮೇರು ಚೇತನ. ಅವರ ತತ್ವಾದರ್ಶಗಳು ನಮ್ಮೆಲ್ಲರಲ್ಲೂ ಮೈಗೂಡಲಿ ಎಂದು ಕಿವಿ ಮಾತು ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಡಾ. ಸರೋಜಿನಿ ಎನ್. ಹೊಸಕೇರಿ, ಕು. ಯಂಕಮ್ಮ, ಡಾ. ಎಲ್ಲಪ್ಪ. ಜಿ, ಡಾ. ಬಿಂದು. ಹೆಚ್. ಎ, ಶ್ರೀ. ನಾಗರಾಜ ಕಪ್ಪಲಿ, ಡಾ. ಪುಂಡಲೀಕ ಹುನ್ನಳ್ಳಿ, ಡಾ. ಲೋಕಣ್ಣ ಭಜಂತ್ರಿ ಹಾಗೂ ಸಿಬ್ಬಂದಿ, ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.