ಬೆಂಗಳೂರು, ಮೇ 11,ಲಾಕ್ ಡೌನ್ ಹಿನ್ನೆಲೆಯಲ್ಲಿ ಲಂಡನ್ ನಲ್ಲಿ ಸಿಲುಕಿದ್ದ 343 ಕನ್ನಡಿಗರು ಸೋಮವಾರ ನಸುಕಿನ ಜಾವ ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎ) ಬಂದಿಳಿದಿದ್ದಾರೆ. ಐತಿಹಾಸಿಕ ಏರ್ ಲಿಫ್ಟ್ ಕಾರ್ಯಾಚರಣೆಯ ಅಂಗವಾಗಿ ಇವರನ್ನು ಹೊತ್ತ ಏರ್ ಇಂಡಿಯಾ ವಿಮಾನ ಮುಂಜಾನೆ 4.45ಕ್ಕೆ ಬೆಂಗಳೂರಿಗೆ ಬಂದಿಳಿಯಿತು. ಪ್ರತಿಯೊಬ್ಬರಿಗೂ ಥರ್ಮಲ್ ಸ್ಕ್ಯಾನಿಂಗ್ ಮತ್ತಿತರರ ಆರೋಗ್ಯ ತಪಾಸಣೆ ನಡೆಸಿ ಹೋಟೆಲ್ ಮತ್ತು ರೆಸಾರ್ಟ್ ಗಳಿಗೆ ಕ್ವಾರಂಟೈನ್ ಗಾಗಿ ಕಳುಹಿಸಲಾಗುತ್ತಿದೆ.
ಪ್ರತಿ ಪ್ರಯಾಣಿಕರು ವಿಮಾನದಿಂದ ಹೊರಬರುತ್ತಿದ್ದಂತೆಯೇ ಅವರು ಧರಿಸಿದ್ದ ಮಾಸ್ಕ್ ಬದಲಿಸಿ, ಹೊಸ ಮುಖಗವಸುಗಳನ್ನು ನೀಡಲಾಗುತ್ತಿದೆ. ಜೊತೆಗೆ, ಭಾರತದ ಸಿಮ್ ಕಾರ್ಡ್ ಗಳನ್ನು ನೀಡುವುದರ ಜೊತೆಗೆ, ಕ್ವಾರಂಟೈನ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಲು ಸೂಚಿಸಲಾಗುತ್ತಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಬಿಗಿ ಭದ್ರತೆ ನಿಯೋಜಿಸಲಾಗಿದ್ದು, ತಜ್ಞ ವೈದ್ಯರ ಸಮ್ಮುಖದಲ್ಲಿ ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸಲಗುತ್ತಿದೆ. ಪ್ರಯಾಣಿಕರು ಪ್ರವೇಶಿಸುವ ದ್ವಾರದಿಂದ ಅವರು ಇತರ ವಾಹನವನ್ನೇರುವ ಜಾಗದಲ್ಲಿ ಪದೇ ಪದೆ ಸೋಂಕು ನಿವಾರಕವನ್ನು ಸಿಂಪಡಿಸಲಾಗುತ್ತಿದೆ.
ಮೃತನ ಕಳೆಬರವೂ ಆಗಮನ:
ಲಂಡನ್ ನಿಂದ ಆಗಮಿಸಿದ ಪ್ರಯಾಣಿಕರಲ್ಲಿ ಮೂವರು ಮಕ್ಕಳು ಕೂಡ ಇದ್ದಾರೆ. ಓರ್ವ ಗರ್ಭಿಣಿ ಕೂಡ ಇದ್ದು, ಆಕೆಯನ್ನು ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಲಂಡನ್ ನಲ್ಲಿ ಆತ್ಮಹತ್ಯೆ ಗೆ ಶರಣಾಗಿದ್ದ ವ್ಯಕ್ತಿಯ ಶವವನ್ನು ಕೂಡ ತರಿಸಲಾಗಿದ್ದು, ಕುಟುಂಬ ಸದಸ್ಯರಿಗೆ ರವಾನಿಸಿದ್ದೇವೆ ಎಂದು ಈಶಾನ್ಯ ವಲಯ ಡಿಸಿಪಿ ಭೀಮಾಶಂಕರ ಗುಳೇದ ಮಾಹಿತಿ ನೀಡಿದ್ದಾರೆ.
ಬಯಸಿದ ಹೋಟೆಲ್ ಗಳಿಗೆ ರವಾನೆ;
ಕ್ವಾರಂಟೈನ್ ಗಾಗಿ ನಿಗದಿಪಡಿಸಿದ ಹೋಟೆಲ್, ರೆಸಾರ್ಟ್ ಗಳ ಪೈಕಿ ಪ್ರಯಾಣಿಕರು ಬಯಸಿದ ಹೋಟೆಲ್ ಗಳಿಗೆ ಕರೆದೊಯ್ಯಲಾಗುತ್ತಿದೆ. ವಿಮಾನನಿಲ್ದಾಣದಲ್ಲಿ ಕ್ವಾರಂಟೈನ್ ವ್ಯವಸ್ಥೆ ಮಾಡಲು ಸಿದ್ಧವಿರುವ ಹೋಟೆಲ್ ಮತ್ತು ರೆಸಾರ್ಟ್ ಗಳ ಮಾಹಿತಿ ನೀಡಲು ದೇ ಪ್ರತ್ಯೇಕ ಕೌಂಟರ್ ತೆರೆಯಲಾಗಿದೆ.
18 ಪಂಚತಾರಾ ಹೋಟೆಲ್, 26 ಸ್ಟಾರ್ ಹೋಟೆಲ್ ಹಾಗೂ 40 ಸಾಧಾರಣ ಹೋಟೆಲ್ ಗಳ ಎಲ್ಲ ಕೊಠಡಿಗಳನ್ನು ಈ ಪ್ರಯಾಣಿಕರ ಕ್ವಾರಂಟೈನ್ ಗೆ ಮೀಸಲಿಡಲಾಗಿದೆ. ಪಂಚತಾರಾ ಹೋಟೆಲ್ ಗಳು ದಿನಕ್ಕೆ ಒಬ್ಬರಿಗೆ 3,000 ರೂ., ಇಬ್ಬರಿಗೆ 3,700 ರೂ. ಶುಲ್ಕ ನಿಗದಿ ಮಾಡಿವೆ. ಉಳಿದ ಸ್ಟಾರ್ ಹೋಟೆಲ್ ಗಳು ಒಬ್ಬರಿಗೆ, ಒಂದು ಕೋಣೆಗೆ 1,850 ರೂ., ಸಾಧಾರಣ ಹೋಟೆಲ್ ಗಳು 900 ರೂ. ಬಾಡಿಗೆ ದರ ನಿಗದಿ ಮಾಡಿವೆ.
ಲಂಡನ್ ನಿಂದ ಬೆಂಗಳೂರಿಗೆ ಆಗಮಿಸಲು ಪ್ರತಿ ಪ್ರಯಾಣಿಕರಿಗೆ 55 ಸಾವಿರ ರೂ. ವೆಚ್ಚವಾಗಲಿದ್ದು, ಅದನ್ನು ಕೂಡ ಪ್ರಯಾಣಿಕರೇ ಭರಿಸಬೇಕು ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಬಿಎಂಟಿಸಿ ಬಸ್ ನಲ್ಲಿ ರವಾನೆ:
ಇವರನ್ನು ಒಟ್ಟು 16 ಬಿಎಂಟಿಸಿ ಬಸ್ ಗಳ ಮೂಲಕ ಹೋಟೆಲ್ ಮತ್ತು ರೆಸಾರ್ಟ್ ಗಳಿಗೆ ಕಳುಹಿಸಲಾಯಿತು. ಒಂದು ಬಸ್ ನಲ್ಲಿ ತಲಾ 20 ಜನರನ್ನು ಕರೆದೊಯ್ಯಲಾಯಿತು.