ಕೊರೊನಾವೈರಸ್ ಸೋಂಕಿನ 3,143 ಹೊಸ ಪ್ರಕರಣಗಳು, 73 ಹೊಸ ಸಾವು - ಚೀನಾ ವರದಿ

ಬೀಜಿಯೊಂಗ್, ಫೆ 7 ,ಇತ್ತೀಚೆಗೆ ಕಾಣಿಸಿಕೊಂಡಿರುವ ಕೊರೊನಾ ವೈರಾಣು ಸೋಂಕಿನ 3,143 ಹೊಸ ಪ್ರಕರಣಗಳು ದೃಢಪಟ್ಟಿದ್ದು 73 ಜನರು ಈ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಚೀನಾ ವರದಿ ಮಾಡಿದೆ. ಈ ಪೈಕಿ 69 ಹುಬೈ ಪ್ರಾಂತ್ಯದಲ್ಲಿ, ಒಂದು ಜಿಲಿನ್‌ನಲ್ಲಿ, ಹೆನಾನ್‌ನಲ್ಲಿ ಒಂದು, ಗುವಾಂಗ್‌ಡಾಂಗ್‌ನಲ್ಲಿ ಒಂದು ಮತ್ತು ಹೈನಾನ್‌ನಲ್ಲಿ ಒಂದು ಸಾವು ಸಂಭವಿಸಿದೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.

 ಗುರುವಾರ ಇನ್ನೂ 4,833 ಹೊಸ ಶಂಕಿತ ಪ್ರಕರಣಗಳು ವರದಿಯಾಗಿವೆ ಎಂದು ಆಯೋಗ ತಿಳಿಸಿದೆ.  ಗುರುವಾರವೂ 962 ರೋಗಿಗಳು ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರು, ಮತ್ತು ಚೇತರಿಸಿಕೊಂಡ ನಂತರ 387 ಜನರನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗಿದೆ. ಚೀನಾದಲ್ಲಿ ಒಟ್ಟಾರೆ ದೃಢಪಟ್ಟ ಪ್ರಕರಣಗಳು ಗುರುವಾರ ಅಂತ್ಯದ ವೇಳೆಗೆ 31,161 ಕ್ಕೆ ತಲುಪಿವೆ ಎಂದು ಆಯೋಗ ತಿಳಿಸಿದೆ. ಒಟ್ಟು 636 ಜನರು ಈ ಸೋಂಕಿಗೆ ಬಲಿಯಾಗಿದ್ದಾರೆ.

4,821 ರೋಗಿಗಳು ಗಂಭೀರ ಸ್ಥಿತಿಯಲ್ಲಿದ್ದು 26,359 ಜನರು ವೈರಾಣು ಸೋಂಕಿಗೆ ಒಳಗಾಗಿದ್ದಾರೆ ಎಂದು ಶಂಕಿಸಲಾಗಿದೆ ಎಂದು ಆಯೋಗ ಹೇಳಿದೆ.ಚೇತರಿಸಿಕೊಂಡ ನಂತರ ಒಟ್ಟು 1,540 ಜನರನ್ನು ಆಸ್ಪತ್ರೆಯಿಂದ ವಾಪಸ್ ಕಳುಹಿಸಲಾಗಿದೆ. 314,028 ನಿಕಟ ಸಂಪರ್ಕಗಳನ್ನು ಪತ್ತೆಹಚ್ಚಲಾಗಿದೆ ಎಂದು ಆಯೋಗ ಹೇಳಿದೆ. ಅವರಲ್ಲಿ 26,762 ಜನರನ್ನು ಗುರುವಾರ ವೈದ್ಯಕೀಯ ನಿಗಾದಿಂದ ವಾಪಸ್ ಕಳುಹಿಸಲಾಗಿದ್ದು ಇನ್ನೂ 186,045 ಮಂದಿ ಇನ್ನೂ ವೈದ್ಯಕೀಯ ನಿಗಾದಲ್ಲಿದ್ದಾರೆ.  ಗುರುವಾರ ಅಂತ್ಯದ ವೇಳೆಗೆ, ಹಾಂಗ್ ಕಾಂಗ್ ವಿಶೇಷ ಆಡಳಿತ ಪ್ರದೇಶದಲ್ಲಿ (ಎಸ್‌ಎಆರ್) 24 ಪ್ರಕರಣಗಳು ವರದಿಯಾಗಿವೆ, ಇದರಲ್ಲಿ ಒಂದು ಸಾವು, ಮಕಾವೊ ಎಸ್‌ಎಆರ್‌ನಲ್ಲಿ 10 ಮತ್ತು ತೈವಾನ್‌ನಲ್ಲಿ 16 ಪ್ರಕರಣಗಳು ದಾಖಲಾಗಿವೆ.