ನವದೆಹಲಿ, ಆ 30 ಕಣಿವೆಯಲ್ಲಿ 370ನೇ ವಿಧಿಯನ್ನು ರದ್ದುಪಡಿಸಿ ಕೆಲನಿರ್ಬಂಧ ಹಾಕಿದ ನಂತರ ಕಳೆದ 22 ದಿನಗಳಿಂದ ತಂದೆ,ತಾಯಿ ಜೊತೆ ನನ್ನ ಪತಿ ಮಾತನಾಡಿಲ್ಲ ಎಂಬ ವೇದನೆಯನ್ನು ನಟಿ, ರಾಜಕಾರಣಿ ಊರ್ಮಿಳಾ ಮಾತೋಂಡ್ಕರ್ ಹೊರ ಹಾಕಿದ್ದಾರೆ. ಇಂಟರ್ ನೆಟ್ ನಿರ್ಬಂಧದ ಕಾರಣ ಕಳೆದ 22 ದಿನಗಳಿಂದ ಕಾಶ್ಮೀರದಲ್ಲಿ ವಾಸವಾಗಿರುವ ತನ್ನ ಹೆತ್ತವರೊಂದಿಗೆ ಮಾತನಾಡಲು ಪತಿಗೆ ಸಾಧ್ಯವಾಗುತ್ತಿಲ್ಲ ಎಂದು ನೋವು ತೋಡಿಕೊಂಡಿದ್ದಾರೆ. ರಾಜ್ಯಪಾಲ ಮಲಿಕ್ ವಿದೇಶದಲ್ಲಿ ಇರುವ ಮಗನ ಜೊತೆ ಮಾತನಾಡಲು ಆಗುತ್ತಿಲ್ಲ ಎಂದು ಪತ್ರಿಕೆಯೊಂದಿಗೆ ನೋವು, ಸಂಕಟ ತೋಡಿಕೊಂಡ ಬಳಿಕ ನಟಿಯ ಸಂಕಟವೂ ಹೊರಬಿದ್ದಿದೆ. 370ನೇ ವಿಧಿಯನ್ನು ರದ್ದುಪಡಿಸಿದ ಕ್ರಮ ಸರಕಾರ ಅಮಾನವೀಯ ಕ್ರಮವಾಗಿದೆ ಎಂದು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ನಿಂದ ಸ್ಪರ್ಧಿಸಿ ಸೋಲು ಕಂಡಿದ್ದ ಮಾತೋಂಡ್ಕರ್ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು. ನನ್ನ ಮಾವ ಮತ್ತು ಅತ್ತೆ ಅಲ್ಲಿಯೇ ಇದ್ದಾರೆ, ಅವರಿಬ್ಬರೂ ಮಧುಮೇಹ, ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ, 22 ದಿನ ಕಳೆದಿದ್ದರೂ ನಾನಾಗಲಿ ಅಥವಾ ಪತಿಯಾಗಲಿ ಅವರೊಂದಿಗೆ ಮಾತನಾಡಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.