ಕೇಂದ್ರದ 20 ಲಕ್ಷ ಕೋಟಿ ನೆರವಿನಲ್ಲಿ ರೈತರಿಗೆ ಯಾವ ನೆರವು ಘೋಷಿಸಿದ್ದಾರೆ : ಈಶ್ವರ್ ಖಂಡ್ರೆ ಪ್ರಶ್ನೆ

ಬೆಂಗಳೂರು,ಮೇ 14,ಕೇಂದ್ರ ಸರ್ಕಾರ 20 ಲಕ್ಷ ಕೋಟಿ ಘೋಷಿಸಿದರೆ ಸಾಲದು ಅನುಷ್ಠಾನವಾಗಬೇಕಲ್ಲ. ರೈತರಿಗೆ ಯಾವ ನೆರವು ಘೋಷಿಸಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅಭಿಪ್ರಾಯ ಪಟ್ಟಿದ್ದಾರೆ.
ಬೆಂಗಳೂರಿನ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕಿತ್ತು. ಅಸಂಘಟಿತ ಕಾರ್ಮಿಕರ ಬಗ್ಗೆ ಚಕಾರವೆತ್ತಿಲ್ಲ. ಲಾಕ್ ಡೌನ್ ಆಗಿ 52 ದಿನ ಕಳೆದು ಹೋಗಿದೆ. ಕೋಟ್ಯಂತರ ಜನ ತಮ್ಮ ದುಡಿಮೆಯನ್ನ ಕಳೆದುಕೊಂಡಿದ್ದಾರೆ. ಪರಿಹಾರಕ್ಕಾಗಿ ಎಲ್ಲರೂ ಕೇಂದ್ರದತ್ತ ಕಣ್ಣಿಟ್ಟಿದ್ದರು. ಮೊನ್ನೆ 20 ಲಕ್ಷ ಕೋಟಿ ಪ್ರಧಾನಿ ಘೋಷಿಸಿದ್ದಾರೆ. 20 ಲಕ್ಷ ಕೋಟಿ ಅಂದ್ರೆ ಎಷ್ಟು ಸೊನ್ನೆ ಅನ್ನೋದು ಕನ್ಫೂಸ್ ಆಗಿದೆ. ಬ್ಲಾಕ್ ಮನಿ ತರ್ತೇವೆ ಅಂತ ಹಿಂದೆ ಹೇಳಿದ್ದರು. ಆದರೆ ಇಲ್ಲಿಯವರೆಗೆ ನಯಾ ಪೈಸೆ ತಂದಿಲ್ಲ ಎಂದರು.
  ಕಾರ್ಮಿಕರು ನೂರಾರು ಕಿ.ಮೀ ನಡೆದೇ ಬರ್ತಿದ್ದಾರೆ.ರಸ್ತೆಯ ಮೇಲೆಯೇ ಗರ್ಭಿಣಿಯರು ನರಳಾಡಿ ದ್ದಾರೆ. ಇವರ ಪರ ಯಾವ ನೆರವು ಘೋಷಿಸಿದ್ದಾರೆ. ಜನರ ನಿರೀಕ್ಷೆಗೆ ತಕ್ಕಂತೆ ಪ್ಯಾಕೇಜ್ ಘೋಷಿಸಿಲ್ಲ ಎಂದು ಪ್ರಧಾನಿ ನೆರವು ಘೋಷಣೆಗೆ ಈಶ್ವರ್ ಖಂಡ್ರೆ ಅಸಮಾಧಾನ ವ್ಯಕ್ತಪಡಿಸಿದರು.ರಾಜ್ಯ ಸರ್ಕಾರದಲ್ಲಿ ಹಣವೇ ಇಲ್ಲ. ಶಿಕ್ಷಕರಿಗೆ ಇನ್ನೂ ವೇತನ ಬಿಡುಗಡೆ ಮಾಡಿಲ್ಲ.ಯಾವುದೇ ಕೆಲಸಕ್ಕೂ ಆರ್ಥಿಕ ನೆರವು ರಿಲೀಸ್ ಆಗ್ತಿಲ್ಲ.ಇಂತ ವೇಳೆಯೂ ಕೇಂದ್ರ ರಾಜ್ಯದತ್ತ ತಿರುಗಿ ನೋಡಿಲ್ಲ. ರಾಜ್ಯಕ್ಕೆ ಬರಬೇಕಾದ ಅನುದಾನವನ್ನೇ ನೀಡಿಲ್ಲ. ಮೊನ್ನೆ ಬಿಡುಗಡೆ ಮಾಡಿದ ರಾಜ್ಯಗಳಲ್ಲಿ ರಾಜ್ಯದ ಹೆಸರಿಲ್ಲ. ಐಟಿ ಬಿಟಿ ರಾಜ್ಯ ನಮ್ಮದು.ಹೆಚ್ಚಿನ ತೆರಿಗೆಯನ್ನ ಕೇಂದ್ರಕ್ಕೆ ಕೊಡುವವರು ನಾವು. ರಾಜ್ಯಕ್ಕೆ ಅನ್ಯಾಯದ ಮೇಲೆ ಅನ್ಯಾಯ ಆಗ್ತಿದೆ.25 ರಾಜ್ಯದ ಸಂಸದರು ಇದ್ದರೂ ಪ್ರಯೋಜನವಿಲ್ಲ. ಜನರನ್ನ ದಾರಿತಪ್ಪಿಸುವ ಕೆಲಸ ನಿರಂತರ ನಡೆಯುತ್ತಿದೆ. ಎಂಎಸ್ಇಪಿಗೆ 3 ಲಕ್ಷ ನೆರವು ಘೋಷಿಸಿದ್ದಾರೆ.ಈ ಹಣವನ್ನ ಮುಂದೆಯಾದರೂ ಕಟ್ಟಲೇ ಬೇಕಿದೆ. ಕೊರೊನಾ ಪರಿಹಾರ ವಿತರಣೆಯಲ್ಲಿ ಕೇಂದ್ರ ಸಂಪೂರ್ಣ ವಿಫಲವಾಗಿದೆ ಎಂದರು.  'ಕೊಲಾ ಪಹಾಡ್ ತೋ ಚೋರ್ ನಿಕಲಾ' ಅನ್ನುವಂತಾಗಿದೆ. ಬರೀ ಮಾಯಾ ಬಜಾರ್ ತೋರಿಸಿ ಜನರನ್ನ ಯಾಮಾರಿಸುತ್ತಿದೆ. ಕೇವಲ ಉದ್ಯಮಿಗಳಿಗೆ ಮಾತ್ರ ನೆರವು ಘೋಷಿಸಿದ್ದಾರೆ. ರೈತ, ಕೃಷಿ ಕಾರ್ಮಿಕ, ಕಾರ್ಮಿಕರಿಗೆ ನ್ಯಾಯ ಒದಗಿಸಿಲ್ಲ ಎಂದು ಹೇಳಿದರು.ಎಪಿಎಂಸಿ ತಿದ್ದುಪಡಿ ಬೇಡ : ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನ ತರೋಕೆ ಹೊರಟಿದ್ದಾರೆ. ಇದು ಆರ್ಥಿಕತೆಯ ಮೇಲೆ ಹೊಡೆತ ನೀಡಲಿದೆ. ಸದನದಲ್ಲಿ ಚರ್ಚೆಯಾಗದೆ ಕಾಯ್ದೆ ಜಾರಿ ಮಾಡಿದರೆ ಹೇಗೆ?  ಬಹುರಾಷ್ಟ್ರೀಯ ಕಂಪನಿಗಳ ಪರ ಕೇಂದ್ರ ನಿಂತಿದೆ. ರೈತರ ವಿರುದ್ಧ ನೀತಿಗಳನ್ನ ಜಾರಿಗೆ ತರುತ್ತಿದೆ. ಕೃಷಿ ಭೂಮಿಯ ಮೇಲೆಯೇ ಕಂಪನಿಗಳಿಗೆ ಹಿಡಿತ ಬಿಟ್ಟುಕೊಟ್ಟಿದೆ. ಆಸ್ತಿ ಬೇರೆಯವರ ಪಾಲಾಗಲಿದೆ. ಕಂಪನಿಗಳೇ ರೈತರ ಬೆಳೆಗೆ ಬೆಲೆ ಕಟ್ಟುವ ಸ್ಥಿತಿ ಬರಲಿದೆ. ರೈತರ ಮೇಲೆ ದಬ್ಬಾಳಿಕೆಗೆ ಅವಕಾಶ ಮಾಡಿಕೊಡ್ತಿದ್ದಾರೆ. ಕೊವಿಡ್ ಪರಿಸ್ಥಿತಿಯಲ್ಲೇ ಇಂತ ಕಾಯ್ದೆಯನ್ನ ತರ್ತಿದ್ದಾರೆ. ಇದರ ವಿರುದ್ಧ ಕಾಂಗ್ರೆಸ್ ಹೋರಾಟ ಮಾಡಲಿದೆ ಎಂದರು.
  ಕಾರ್ಮಿಕರಿಗೆ ಸಂಕಷ್ಟ :ಉತ್ತರಕರ್ನಾಟಕದಲ್ಲಿ ಕಾರ್ಮಿಕರಿಗೆ ಸಂಕಷ್ಟ ಎದುರಾಗಿದೆ. ಹೊರಗಿನಿಂದ ಬಂದವರನ್ನ ಶಾಲೆಯಲ್ಲಿ ಕೂಡಿ ಹಾಕ್ತಿದ್ದಾರೆ. ಅವರಿಗೆ ಶೌಚಾಲಯವಿಲ್ಲ ಉಪಹಾರವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕ್ವಾರಂಟೈನ್ ಮಾಡ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹೇಗೆ ಕ್ವಾರಂಟೈನ್ ಇರಬೇಕು. ಎಪಿಎಂಸಿ ಯನ್ನ ಖಾಸಗೀಕರಣ ಮಾಡ್ತಿದ್ದಾರೆ. ಬೆಲೆ ನಿಗದಿ ಅಧಿಕಾರ ಸರ್ಕಾರ ಕಳೆದುಕೊಳ್ಳಲಿದೆ. ಅಂಬಾನಿಯಂತವರು ರೈತರ ಬೆಳೆಗೆ ಬೆಲೆ ಕಟ್ತಾರೆ. ಅವರು ನಿಗದಿ ಪಡಿಸಿದ ಬೆಲೆಗೆ ರೈತರ ಬೆಳೆ ನೀಡಬೇಕು. ಇದರಿಂದ ರೈತರ ಶೋಷಣೆಯಾಗಲಿದೆ. ಈ ತಿದ್ದುಪಡಿ ಕಾಯ್ದೆಗೆ ಅವಕಾಶ ನೀಡಬಾರದು. ಎಪಿಎಂಸಿ ವರ್ತಕರು ಇಲ್ಲಿಯವರೆಗೆ ಜೀವನ ಸಾಗಿಸ್ತಿದ್ರು. ಈಗಿನ ಕಾಯ್ದೆ ಜಾರಿಯಾದರೆ ಅವರಿಗೂ ಕಷ್ಟ ಎಂದರು.
ಅರಣ್ಯ ಇಲಾಖೆಯಲ್ಲಿ ವರ್ಗಾವಣೆ ದಂಧೆ ವಿಚಾರ ಮಾತನಾಡಿ, ವರ್ಗಾವಣೆ ದಂಧೆಗೆ ಕಡಿವಾಣ ಹಾಕಬೇಕು. ಇಂತ ಸಂದರ್ಭದಲ್ಲಿ ಅಕ್ರಮ ವರ್ಗಾವಣೆ ಬೇಕಾ? ಇದರ ಬಗ್ಗೆ ಸಿಎಂ ಗಂಭೀರ ಕ್ರಮ ಜರುಗಿಸಬೇಕು. ಸಿಮೆಂಟ್,ಸ್ಟೀಲ್ ಬೆಲೆ ಹೆಚ್ಚಳ ವಿಚಾರವಾಗಿ ಮಾತನಾಡಿ, ಕೊರೊನಾ ಇನ್ನೂ‌ಮುಗಿದಿಲ್ಲ ಆಗಲೇ ಬೆಲೆ ಜಂಪ್ ಆಗಿದೆ. ಸಿಮೆಂಟ್ ಮೇಲೆ 100, ಸ್ಟೀಲ್ ಟನ್ ಬೆಲೆ 50 ಹೆಚ್ಚಾಗಿದೆ. ಇದರಿಂದ ಯಾರಿಗೆ ಲಾಭ. ದೊಡ್ಡ ದೊಡ್ಡ ಕಂಪನಿಗಳು ಕೋಟಿ ಕೋಟಿ ಲೂಟಿ ಮಾಡ್ತಾರೆ. ಸರ್ಕಾರ ಇವುಗಳಿಗೂ ಬೆಲೆ ನಿಗದಿ ಮಾಡಲಿ ಎಂದು ಅವರು ಆರೋಪಿಸಿದರು.