ಬೀಜಿಂಗ್, ಜೂನ್ 22, ಚೀನಾದಲ್ಲಿ ಕಳೆದ 24 ಗಂಟೆಗಳಲ್ಲಿ 18 ಹೊಸ ಕರೋನವೈರಸ್ ಪ್ರಕರಣಗಳು ವರದಿಯಾಗಿದ್ದು, ಈ ಅವಧಿಯಲ್ಲಿ ದೇಶದಲ್ಲಿ ಸಕ್ರಿಯ ರೋಗಿಗಳ ಪೈಕಿ ಯಾರೊಬ್ಬರೂ ಚೇತರಿಸಿಕೊಂಡಿಲ್ಲ ಎಂದು ಅಲ್ಲಿನ ರಾಷ್ಟ್ರೀಯ ಆರೋಗ್ಯ ಆಯೋಗ ಸೋಮವಾರ ತಿಳಿಸಿದೆ.18 ಹೊಸ ಪ್ರಕರಣಗಳಲ್ಲಿ 11 ಸ್ಥಳೀಯ ಪ್ರಕರಣಗಳಾಗಿದ್ದು, 9 ಪ್ರಕರಣಗಳು ಬೀಜಿಂಗ್‌ನಿಂದ ವರದಿಯಾಗಿವೆ. ರಾಜಧಾನಿಯಲ್ಲಿ ಈ ತಿಂಗಳ ಆರಂಭದಲ್ಲಿ ಸೋಂಕಿನ ಹೊಸ ಪ್ರಕರಣಗಳಲ್ಲಿ ಏರಿಕೆ ಕಂಡುಬಂದಿದೆ. ಆಯೋಗದ ವರದಿಯಂತೆ ಚೀನಾದಲ್ಲಿ ಕಳೆದ 24 ಗಂಟೆಗಳಲ್ಲಿ ಏಳು ಸೋಂಕು ಲಕ್ಷಣರಹಿತ ಕೊರೊನಾವೈರಸ್ ಪ್ರಕರಣಗಳು ವರದಿಯಾಗಿವೆ.
ಭಾನುವಾರ ಚೀನಾದಲ್ಲಿ 26 ಹೊಸ ಕರೋನವೈರಸ್ ಪ್ರಕರಣಗಳು ದೃಢಪಟ್ಟಿದ್ದು, ಬೀಜಿಂಗ್‍ವೊಂದರಲ್ಲೇ 22 ಪ್ರಕರಣಗಳು ದೃಢಪಟ್ಟಿವೆ.ದೇಶದಲ್ಲಿ ಇದುವರೆಗೆ ದೃಢಪಟ್ಟ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ 83,396 ರಷ್ಟಿದ್ದರೆ, ಸಾವಿನ ಸಂಖ್ಯೆ 4,634ರಷ್ಟಿದೆ. ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 78,413ರಷ್ಟಿದೆ.ಈ ತಿಂಗಳ ಆರಂಭದಲ್ಲಿ ಬೀಜಿಂಗ್‌ನಲ್ಲಿ ಕರೋನವೈರಸ್ ಪ್ರಕರಣಗಳ ಹೊಸ ಪ್ರದೇಶ ಪತ್ತೆಯಾಗಿತ್ತು. ಜೂನ್ 13 ರಂದು ಬೀಜಿಂಗ್ ಅಧಿಕಾರಿಗಳು ನಗರದ ಪ್ರಮುಖ ಸಗಟು ಆಹಾರ ಮಾರುಕಟ್ಟೆಯಾದ ಕ್ಸಿನ್‌ಫಾಡಿಯನ್ನು ಮುಚ್ಚುವುದಾಗಿ ಘೋಷಿಸಿದ್ದರು. ಮಾರುಕಟ್ಟೆಗೆ ಸಂಪರ್ಕ ಹೊಂದಿದ ಹತ್ತಾರು ಜನರಲ್ಲಿ ಕರೋನವೈರಸ್ ಸೋಂಕು ದೃಢಪಟ್ಟಿತ್ತು. ಚೀನಾದ ರಾಜಧಾನಿಯಲ್ಲಿ ನಿರ್ಬಂಧಗಳನ್ನು ಮತ್ತೆ ಹೇರಲಾಗಿದೆ.