ಯಡಿಯೂರಪ್ಪ ಸಂಪುಟ ಸೇರಿದ 17 ಸಚಿವರು: ರಾಜ್ಯಪಾಲರಿಂದ ಪ್ರತಿಜ್ಞಾವಿಧಿ ಬೋಧನೆ

 ಬೆಂಗಳೂರು, ಆ 20      ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಿದ್ದು, ಇಂದು 17 ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಭವನದ ಗಾಜಿನಮನೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ವಜುವಾಯಿ ವಾಲಾ ನೂತನ ಸಚಿವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು. ಮೊದಲಿಗೆ ಹಿರಿಯ ಶಾಸಕ ಗೋವಿಂದ ಕಾರಜೋಳ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಬಳಿಕ ಕ್ರಮವಾಗಿ ಡಾ.ಅಶ್ವಥ್ನಾರಾಯಣ್, ಲಕ್ಷ್ಮಣ ಸವದಿ, ಕೆ.ಎಸ್. ಈಶ್ವರಪ್ಪ,  ಆರ್.ಅಶೋಕ್, ಜಗದೀಶ್ ಶೆಟ್ಟರ್ ,  ಶ್ರೀರಾಮುಲು, ಸುರೇಶ್ ಕುಮಾರ್,  ವಿ.ಸೋಮಣ್ಣ,  ಸಿ ಟಿ ರವಿ,  ಬಸವರಾಜ ಬೊಮ್ಮಾಯಿ, ಕೋಟಾ ಶ್ರೀನಿವಾಸ್ ಪೂಜಾರಿ,  ಜೆ ಸಿ ಮಾಧುಸ್ವಾಮಿ,  ಸಿ ಸಿ ಪಾಟೀಲ್ , ನಾಗೇಶ್, ಪ್ರಭು ಚೌಹಾಣ್ , ಶಶಿಕಲಾ ಜೊಲ್ಲೆ ಅವರು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ವಿ.ಸೋಮಣ್ಣ ಅವರು ಬಸವಾದಿ ಶರಣರ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದರು. ಕೆ.ಎಸ್. ಈಶ್ವರಪ್ಪ ಅವರು ಯಡಿಯೂರಪ್ಪ ಅವರ ಕಾಲಿಗೆ ನಮಸ್ಕರಿಸಿದರು. ಹಿರಿಯ ಶಾಸಕ ಜೆ.ಸಿ.ಮಾಧುಸ್ವಾಮಿ  ಅವರು ಬಾಯಿತಪ್ಪಿನಿಂದ ಸಚಿವರಾಗಿ ಎನ್ನುವ ಬದಲು " ಮುಖ್ಯಮಂತ್ರಿಯಾಗಿ" ಎಂದು ಹೇಳಿದ್ದರು. ತಕ್ಷಣ ಸರಿಪರಿಸಿಕೊಂಡರು. ಬೀದರ್ ಜಿಲ್ಲೆ ಔರಾದ್ ಶಾಸಕ ಪ್ರಭು ಚೌಹಾಣ್ ಅವರು ಬಂಜಾರ ಸಮುದಾಯದ ಉಡುಪಿನಲ್ಲಿ ಬಂದು ಪ್ರಮಾಣ ವಚನ ಸ್ವೀಕರಿಸಿದರು. ಏಕೈಕ ಮಹಿಳಾ ಸಚಿವೆ ಜೊಲ್ಲೆ ಶಶಿಕಲಾ ಅಣ್ಣಾ ಸಾಹೇಬ್ ಅವರು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ನೂತನ ಸಚಿವರಿಗೆ ರಾಜ್ಯಪಾಲ ವಜುಬಾಯಿ ವಾಲಾ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಿನಂದನೆ ಸಲ್ಲಿಸಿದರು. ಪ್ರಮಾಣ ವಚನ ಸ್ವೀಕಾರದ ಬಳಿಕ ನೂತನ ಸಚಿವರು, ರಾಜ್ಯಪಾಲರು ಮತ್ತು ಮುಖ್ಯಮಂತ್ರಿಯೊಂದಿಗೆ ಸಾಮೂಹಿಕ ಛಾಯಾಚಿತ್ರ ತೆಗೆಸಿಕೊಂಡರು. ಕಾರ್ಯಕ್ರಮದಲ್ಲಿ ಪಕ್ಷದ ಹಿರಿಯ ಮುಖಂಡರು, ನೂತನ ಸಚಿವರ ಕುಟುಂಬದವರು, ಶಾಸಕರು, ಆಪ್ತರು, ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.