ಬೆಂಗಳೂರಿನಲ್ಲಿ 16 ಸಾವಿರa ಪೊಲೀಸ್ ಸಿಬ್ಬಂದಿ ಮೂರು ಪಾಳಿಯಲ್ಲಿ ಕಾರ್ಯನಿರ್ವಹಣೆ: ಲಾಠಿ ಬೀಸುವುದನ್ನು ನಿಲ್ಲಿಸಿದ ಪೊಲೀಸರು

ಬೆಂಗಳೂರು, ಮಾ.31,ಮಹಾಮಾರಿ ಕೊರೊನಾ ಸೋಂಕು ಹರಡುವುದನ್ನು ತಪ್ಪಿಸಲು ಲಾಕ್‌ಡೌನ್  ಜಾರಿಗೊಳಿಸಿದ ದಿನದಿಂದಲೂ ನಗರದ  ಅಧಿಕಾರಿಗಳೂ ಸೇರಿ ಸುಮಾರು 16 ಸಾವಿರ ಪೊಲೀಸ್ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.ರಾಜ್ಯ ಮೀಸಲು ಪಡೆಯ 24  ತುಕಡಿಗಳು ಹಾಗೂ ಜಿಲ್ಲಾ ಸಶಸ್ತ್ರ ಪಡೆಯ 24 ತುಕಡಿಗಳ ಸಿಬ್ಬಂದಿ ಹಗಲಿರುಳೆನ್ನದೆ ಮೂರು  ಪಾಳಯದಲ್ಲಿ ಕರ್ತವ್ಯದಲ್ಲಿ ನಿರತರಾಗಿದ್ದಾರೆ.
ನಗರದ ಎಲ್ಲ  ಚೆಕ್‌ಪೋಸ್ಟ್‌ಗಳು, ಜನ ಸೇರುವ ಸ್ಥಳಗಳಲ್ಲಿ ಮೊಕ್ಕಾಂ ಹೂಡಿ ವಾಹನದಲ್ಲಿ ಸಂಚರಿಸುವವರು  ಅನಗತ್ಯವಾಗಿ ಓಡಾಡುವವರ ಮೇಲೆ ಹದ್ದಿನ ಕಣ್ಣಿಟ್ಟಿರುವುದಲ್ಲದೆ ಕೊರೊನಾ ಸೋಂಕು ಹರಡದಂತೆ  ಸಾಮಾಜಿಕ ಸಂಪರ್ಕ ಕಾಯ್ದುಕೊಳ್ಳುವ ಸಂಬಂಧ ಅರಿವು ಮೂಡಿಸುವ ಕಾಯಕದಲ್ಲಿ ತೊಡಗಿದ್ದಾರೆ.ಕೊರೊನಾ  ಸೋಂಕಿನ ವಿರುದ್ಧ ಹೋರಾಡಲು 'ಅರೆಸ್ಟ್ ಕೊರೊನಾ' ಹೆಸರಿನಲ್ಲಿ ಅಭಿಯಾನವನ್ನು  ನಡೆಸುತ್ತಿರುವ ನಗರ ಪೊಲೀಸರು ಸಾರ್ವಜನಿಕರಿಗೆ ಕೊರೊನಾ ಸೋಂಕಿತರ ಮಾಹಿತಿ ನೀಡುತ್ತಿರುವುದಲ್ಲದೆ ಜಾಗೃತಿ ಮೂಡಿಸುತ್ತಿರುವುದು ಪ್ರಶಂಸೆಗೆ ಪಾತ್ರವಾಗಿದೆ.
ಬೆಳಿಗ್ಗೆ 6 ರಿಂದ ಮಧ್ಯಾಹ್ನ 2, ಮಧ್ಯಾಹ್ನ 2 ರಿಂದ ರಾತ್ರಿ 10, ರಾತ್ರಿ 10 ರಿಂದ ಬೆಳಿಗ್ಗೆ 6ರವರೆಗೆ ಮೂರು ಪಾಳಯದಲ್ಲಿ ಪೊಲೀಸ್ ಸಿಬ್ಬಂದಿ ಕರ್ತವ್ಯದಲ್ಲಿ ತೊಡಗಿದ್ದು, ಎಲ್ಲರಿಗೂ  ಇಲಾಖೆಯಿಂದ ಉಟ-ಉಪಾಹಾರದ ವ್ಯವಸ್ಥೆ ಕಲ್ಪಿಸಲಾಗಿದೆ.ನಗರದ 108 ಕಾನೂನು  ಸುವ್ಯವಸ್ಥೆ ಪೊಲೀಸ್ ಠಾಣೆಗಳು ಹಾಗೂ 44 ಸಂಚಾರ ಪೊಲೀಸ್ ಠಾಣೆಗಳಲ್ಲಿಯೇ  ಕರ್ತವ್ಯದಲ್ಲಿರುವ ಪೊಲೀಸ್ ಸಿಬ್ಬಂದಿಗೆ ಪ್ರತಿದಿನ ಮಧ್ಯಾಹ್ನ, ರಾತ್ರಿ ಊಟ ಹಾಗೂ  ಬೆಳಗಿನ ತಿಂಡಿಗೆ ವ್ಯವಸ್ಥೆ ಮಾಡಲಾಗಿದೆ.ಕರ್ತವ್ಯದಲ್ಲಿರುವ ಸಿಬ್ಬಂದಿ ಠಾಣೆಗೆ  ಆಗಮಿಸಿ ಉಟ ಉಪಾಹಾರದ ನಂತರ ಮತ್ತೆ ಕರ್ತವ್ಯಕ್ಕೆ ತೆರಳುತ್ತಿದ್ದಾರೆ. ರಸ್ತೆಗಳಲ್ಲಿ  ಅನಗತ್ಯವಾಗಿ ಓಡಾಡುವುದು, ದಿನಸಿ ಅಂಗಡಿಗಳ ಬಳಿ ಚೌಕಾಕಾರದ ವೃತ್ತ ಹಾಕಿ ಸಾಮಾಜಿಕ ಅಂತರ  ಕಾಯ್ದುಕೊಳ್ಳಲು ಸಾರ್ವಜನಿಕರಲ್ಲಿ ವಿನಂತಿಸಿಕೊಳ್ಳುತ್ತಿದ್ದಾರೆ.ಮೃಧು ಧೋರಣೆಅಂಗಡಿಗಳ  ಬಳಿ ಗುಂಪು ಗುಂಪಾಗಿ ಸೇರುವುದನ್ನು ತಪ್ಪಿಸಲು ಲಾಠಿ ಬೀಸುವುದನ್ನು ನಿಲ್ಲಿಸಿ ಕೈ  ಮುಗಿದು ಮನವಿ ಮಾಡುತ್ತಿದ್ದಾರೆ. ಹಲವೆಡೆ ಪೊಲೀಸರ ಮನವಿಗೆ ಸ್ಪಂದಿಸಿರುವ ಜನತೆ, ಮನೆಯ  ಒಳಗೆ ಸೇರುತ್ತಿದ್ದಾರೆ. ಅಲ್ಲದೆ ಹೊರಗಡೆ ಅನಗತ್ಯವಾಗಿ ಗುಂಪಾಗಿ ಓಡಾಡುವವರನ್ನು ಇತರೆ  ಸಾರ್ವಜನಿಕರು ಬುದ್ಧಿ ಹೇಳಿ ಕಳುಹಿಸಿದ್ದಾರೆ.
ಜಂಕ್ಷನ್‌ಗಳಲ್ಲಿ, ವೃತ್ತಗಳಲ್ಲಿ  ವಾಹನಗಳಲ್ಲಿ ಹೋಗುವ ಎಲ್ಲರನ್ನು ತಪಾಸಣೆ ನಡೆಸುತ್ತಿದ್ದು, ಅನಗತ್ಯವಾಗಿ ವಾಹನಗಳಲ್ಲಿ  ಹೋಗುತ್ತಿದ್ದರೆ ಅಂತಹವರ ವಾಹನಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ. ಸೂಕ್ತ ಕಾರಣ  ನೀಡಿದರೆ ಅಂತಹ ವಾಹನಗಳನ್ನು ಮಾಲೀಕರನ್ನು ಕರೆಸಿ ಬಿಟ್ಟು ಕಳುಹಿಸಲಾಗುತ್ತಿದೆ.ನಗರದ  ಎಲ್ಲ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದ ಕಟ್ಟಡಗಳ ಬಳಿ ಇರುವ ಕೂಲಿ  ಕಾರ್ಮಿಕರು, ನಿರಾಶ್ರಿತರಿಗೆ ಪೊಲೀಸ್ ಸಿಬ್ಬಂದಿಯೇ ಊಟ-ಉಪಾಹಾರದ ಪೊಟ್ಟಣಗಳನ್ನು  ವಿತರಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.
ನಿಗದಿತ ಸ್ಥಳವನ್ನು ಬಿಟ್ಟು  ನಿರಾಶ್ರಿತರು ಇರುವ ಸ್ಥಳಗಳಿಗೆ ತೆರಳುತ್ತಿರುವ ಗಸ್ತು ನಿರತ ಪೊಲೀಸರು ಊಟ-ಉಪಾಹಾರದ  ವ್ಯವಸ್ಥೆ ಮಾಡುತ್ತಿದ್ದಾರೆ. ಅಲ್ಲದೆ ಅಗತ್ಯ ವಸ್ತುಗಳನ್ನು ಖರೀದಿಸುವವರಿಗೂ ನೆರವು  ನೀಡುತ್ತಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.ಪೊಲೀಸ್  ಸಿಬ್ಬಂದಿಯು ಅಗತ್ಯ ಕಾರಣವನ್ನು ನೀಡಿ ರಜೆ ನೀಡಲು ಅವಕಾಶ ಕಲ್ಪಿಸಲಾಗಿದೆ.  ಅನಾರೋಗ್ಯದಿಂದ ಕೂಡಿರುವವರು, ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಪೊಲೀಸ್  ಸಿಬ್ಬಂದಿಗೆ ರಜೆ ವ್ಯವಸ್ಥೆ ನೀಡಲಾಗಿದೆ.  ಮಹಾಮಾರಿ ಕೊರೊನಾ ಹೋರಾಟ ನಡೆಸಲು  ಸಿಬ್ಬಂದಿಗೂ ಸುರಕ್ಷತೆಯ ಅರಿವು ಮೂಡಿಸಲಾಗಿದೆ. ಅಲ್ಲದೆ ಸಿಬ್ಬಂದಿಗೆ ಮಾಸ್ಕ್,  ಸ್ಯಾನಿಟೈಸರ್ ಇನ್ನಿತರ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು  ತಿಳಿಸಿದ್ದಾರೆ.