ಕಾಗವಾಡದಲ್ಲಿ 15ನೇ ರಾಷ್ಟ್ರೀಯ ಮತದಾರರ ದಿನಾಚರಣೆ;
ಕಾಗವಾಡ 25: ಧರ್ಮ, ಜಾತಿ, ಜನಾಂಗ, ಮತ ಎಂಬ ಯಾವುದೇ ದಾಕ್ಷಿಣ್ಯಕ್ಕೆ ಒಳಗಾಗದೆ ನಿರ್ಭೀತರಾಗಿ ಮತ ಚಲಾಯಿಸಿ, ಪ್ರಭುತ್ವವನ್ನು ಗಟ್ಟಿಗೊಳಿಸಬೇಕೆಂದು ಜೆಎಂಎಫ್‌ಸಿ ಮತ್ತು ಸಿವ್ಹಿಲ್ ಕೋರ್ಟನ ನ್ಯಾಯಾಧೀಶರಾದ ಚನ್ನಬಸಪ್ಪಾ ಆರ್. ಕೊಡಿ ತಿಳಿಸಿದ್ದಾರೆ. ಅವರು ಶನಿವಾರ ದಿ. 25 ರಂದು ತಾಲೂಕಾ ಆಡಳಿತ ಮತ್ತು ಶಿವಾನಂದ ಮಹಾವಿದ್ಯಾಲಯ ಇವರ ಸಂಯೋಗದಲ್ಲಿ ಹಮ್ಮಿಕೊಂಡಿದ್ದ 15 ನೇ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಮಾತನಾಡುತ್ತಿದ್ದರು. ಭಾರತದ ಪ್ರಜೆಗಳು ತಮ್ಮ ಪವಿತ್ರವಾದ ಮತದಾನದ ಹಕ್ಕನ್ನು ಚಲಾಯಿಸಿ, ಒಳ್ಳೆಯ ಪ್ರಜೆಗಳಾಗಬೇಕಾಗಿದೆ ಎಂದರು. ಶಿವಾನಂದ ಮಹಾವಿದ್ಯಾಲಯದ ಉಪ ಪ್ರಾಚಾರ್ಯ ಡಾ.ಎಸ್.ಪಿ. ತಳವಾರ ಮಾತನಾಡಿ, ಒಬ್ಬ ವ್ಯಕ್ತಿಗೆ ಒಂದು ಮತ ಒಂದು ಮೌಲ್ಯ ಎನ್ನುವ ಹಾಗೇ ಎಲ್ಲರಿಗೂ ಸಮಾನ ಮತಾಧಿಕಾರವನ್ನು ನೀಡಲಾಗಿದೆ. ಮತ ಎನ್ನುವದು ಬುಲೆಟ್‌ಕ್ಕಿಂತ ಬಲಿಷ್ಠವಾಗಿದ್ದು, ಯಾವುದೇ ಆಮಿಷಕ್ಕೆ ಒಳಗಾಗದೇ ಮುಂಬರುವ ಚುಣಾವಣೆಗಳಲ್ಲಿ ಕಡ್ಡಾಯವಾಗಿ ಮತ ಚಲಾಯಿಸಿ ಎಂದರು. ಮಂಗಸೂಳಿಯ ಸರ್ಕಾರಿ ಪ್ರೌಢ ಶಾಲೆಯ ಸಹಶಿಕ್ಷಕ ಉಪನ್ಯಾಸಕ ಭರತ ಬಿಲವಾಡೆ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಹಶೀಲ್ದಾರ ರಾಜೇಶ ಬುರ್ಲಿ ವಹಿಸಿದ್ದರು. ಈ ವೇಳೆ ಗ್ರೇಡ-2 ತಹಶೀಲ್ದಾರ ರಶ್ಮಿ ಜಕಾತಿ, ಪ್ರಾಚಾರ್ಯ ಡಾ.ಎಸ್.ಎ. ಕರ್ಕಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್. ಮುಂಜೆ, ಉಪ ತಹಶೀಲ್ದಾರ ಅಣ್ಣಾಸಾಬ ಕೋರೆ, ವಿಜಯ ಚೌಗಲೆ, ಮಹಾಂತೇಶ ಬಾರವಾಡಗಿ, ಸೇರಿದಂತೆ ತಾಲೂಕಾ ಅಧಿಕಾರಿಗಳು, ಬಿಎಲ್‌ಓಗಳು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.