142 ಮುಂಬೈ ಕನ್ನಡಿಗರು ಸಾಂಸ್ಥಿಕ ಕ್ವಾರೆಂಟೈನ್ ನಿಂದ ಬಿಡುಗಡೆ

ಕೆ.ಆರ್.ಪೇಟೆ, ಜೂ 2,ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆಯ ಗ್ರಾಮಭಾರತಿ ಶಿಕ್ಷಣ ಸಂಸ್ಥೆಯಲ್ಲಿ ಸಾಂಸ್ಥಿಕ ಕ್ವಾರಂಟೈನ್ ಆಗಿದ್ದ 142 ಮುಂಬೈ ಕನ್ನಡಿಗರನ್ನು ತಾಲ್ಲೂಕು ಆಡಳಿತದಿಂದ ಇಂದು ಬಿಡುಗಡೆ ಮಾಡಲಾಯಿತು. ಮುಂಬೈನಿಂದ ಆಗಮಿಸಿದ್ದವರಿಂದ ಜಿಲ್ಲೆಯಲ್ಲಿ ವ್ಯಾಪಕ ಸೋಂಕು ಹರಡಿದೆ ಎನ್ನುವ ಆರೋಪಗಳ ನಡುವೆ ಮುಂಬೈ ಕನ್ನಡಿಗರು ತಮ್ಮ ಮನೆಗಳತ್ತ ನಡೆದರು. 

ಕಳೆದ 18 ದಿನಗಳಿಂದ ಗ್ರಾಮಭಾರತಿ ಶಾಲೆಯಲ್ಲಿ ಹೋಂ ಕ್ವಾರಂಟೈನ್ ಆಗಿಕದ್ದ ಮುಂಬೈ ಕನ್ನಡಿಗರನ್ನು ತಾಲ್ಲೂಕು ಆಡಳಿತ ಉತ್ತಮವಾಗಿ ನೋಡಿಕೊಂಡಿತ್ತು. ಕೊರೋನಾ ಸಮರದಲ್ಲಿ  ಗೆಲುವು ಸಾಧಿಸಲು ಆಸರೆಯಾದ ತಾಲ್ಲೂಕು ಆಡಳಿತಕ್ಕೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ.ನಾರಾಯಣಗೌಡ, ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಉಪವಿಭಾಗಾಧಿಕಾರಿ ವಿ.ಆರ್.ಶೈಲಜಾ ಮತ್ತು ತಹಶೀಲ್ದಾರ್ ಎಂ.ಶಿವಮೂರ್ತಿ ಅವರಿಗೆ ಚಪ್ಪಾಳೆಯ ಧನ್ಯವಾದಗಳನ್ನು ಸಮರ್ಪಿಸಿ ಮುಂಬೈ ಕನ್ನಡಿಗರು ತಮ್ಮ ಮನೆಗಳಿಗೆ ತೆರಳಿದರು.

ಸಾಂಸ್ಥಿಕ ಹೋಂ ಕ್ವಾರಂಟೈನ್ ನಲ್ಲಿದ್ದ ಮುಂಬೈ ಕನ್ನಡಿಗರಿಗೆ ಬಿಡುಗಡೆ ಪತ್ರಗಳನ್ನು ವಿತರಿಸಿದ ಕೇಂದ್ರದ ನೋಡಲ್ ಅಧಿಕಾರಿಗಳಾದ ರಾಘವೇಂದ್ರ ಮತ್ತು ಶಿವಕುಮಾರ್ ಅಗತ್ಯ ಆರೋಗ್ಯ ಮುನ್ಸೂಚನೆಗಳನ್ನು ನೀದದರು. ತಮ್ಮ ಮನೆಗಳಿಗೆ ತೆರಳಿದ ನಂತರ ಹೊರಗಡೆ ಓಡಾಡದೇ ಮನೆಯಲ್ಲಿಯೇ ಮತ್ತೆ 14 ದಿನಗಳ ಕಾಲ ಹೋಂ ಕ್ವಾರಂಟೈನ್ ನಲ್ಲಿರಬೇಕು. ಪೌಷ್ಟಿಕಾಂಶಗಳಿಂದ ಕೂಡಿರುವ ಆಹಾರ ಪದಾರ್ಥಗಳು, ಸೊಪ್ಪು ತರಕಾರಿಗಳು, ಹಾಲು ಮೊಟ್ಟೆ, ಹಣ್ಣು-ಹಂಪಲುಗಳನ್ನು ಚೆನ್ನಾಗಿ ಸೇವಿಸಿ ಯೋಗಧ್ಯಾನವನ್ನು ಮಾಡಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.