ರಾಜ್ಯದಲ್ಲಿ ಇದುವರೆಗೆ 128 ಕೊರೊನಾ ಪ್ರಕರಣ ಪತ್ತೆ; 4 ಸಾವು; ವೆಂಟಿಲೇಟರ್ನಲ್ಲಿ ಯಾರೂ ಇಲ್ಲ; ಮುಖ್ಯಮಂತ್ರಿ

ಬೆಂಗಳೂರು, ಏ  4, ಕೊರೋನಾ ಸೋಂಕು ನಿಯಂತ್ರಣ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆಂಗಳೂರಿನ  ಶಾಸಕರು, ಸಚಿವರು, ಸಂಸದರು, ಪಾಲಿಕೆ ಸದಸ್ಯರು ಅಧಿಕಾರಿಗಳ ಜೊತೆ ಇಂದು ಮಹತ್ವದ ಸಭೆ ನಡೆಸಿದರು. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಬೆಂಗಳೂರಿನಲ್ಲಿ ಪರಿಸ್ಥಿತಿ, ಏನೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ಬಗ್ಗೆ ಚರ್ಚೆ ನಡೆಸಲಾಯಿತು.ಸಚಿವರಾದ  ವಿ ಸೋಮಣ್ಣ, ಆರ್ ಅಶೋಕ್ , ಸಂಸದರಾದ ಪಿ. ಸಿ ಮೋಹನ್, ತೇಜಸ್ವಿಸೂರ್ಯ, ಡಿಕೆ ಸುರೇಶ್,  ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ, ಮೇಯರ್ ಗೌತಮ್ ಕುಮಾರ್, ಮಾಜಿ ಸಚಿವ ಜಮೀರ್  ಅಹ್ಮದ್ ಸೇರಿದಂತೆ ಶಾಸಕರು, ವಿಧಾನ ಪರಿಷತ್ ಸದಸ್ಯರು, ಪಾಲಿಕೆ ಸದಸ್ಯರು ಸೇರಿದಂತೆ ಹಿರಿಯ  ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ಯಡಿಯೂರಪ್ಪ, ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಅಗತ್ಯ ಕ್ರಮ  ಕೈಗೊಳ್ಳಲಾಗಿದೆ. ಕೊರೊನಾ ಸೋಂಕಿತರ ಪೈಕಿ ಯಾರು ಸಹ ವೆಂಟಿಲೇಟರ್ನಲ್ಲಿ ದಾಖಲಾಗಿಲ್ಲ.  ರಾಜ್ಯದಲ್ಲಿ ಇದುವರೆಗೆ 128 ಕೊರೊನಾ ಪ್ರಕರಣ ದಾಖಲಾಗಿದ್ದು 4  ಮಂದಿ  ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಲಾಕ್ ಡೌನ್ ಕಟ್ಟುನಿಟ್ಟಾಗಿ ಪಾಲಿಸಲು ಮತ್ತಷ್ಟು  ಬಿಗಿ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ ಎಂದರು.
ಅಗತ್ಯ ವಸ್ತುಗಳಿಗೆ ಯಾವುದೇ  ಕೊರತೆಯಾಗಿಲ್ಲ. ರಾಜ್ಯಾದ್ಯಂತ 480 ಹಾಪ್ ಕಾಮ್ಸ್ ಮೂಲಕ ರೈತರಿಂದ ಹಣ್ಣು ತರಕಾರಿ  ಖರೀದಿಸಿ ಮಾರಾಟ ಮಾಡುವ ವ್ಯವಸ್ಥೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.ಕೊರೊನಾ  ಸಂಬಂಧ ಹಿರಿಯ ಸಚಿವರ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚಿಸಲಾಗಿದೆ. ಪಡಿತರ  ಚೀಟಿದಾರರಿಗೆ ಮುಂಗಡವಾಗಿ ಪಡಿತರ ವಿತರಣೆ ಮಾಡಲಾಗುತ್ತಿದೆ. ಕಾರ್ಡ್ ಹೊಂದಿರದವರಿಗೂ  ಪಡಿತರ ವಿತರಿಸಲು ಕ್ರಮಕೈಗೊಳ್ಳಲಾಗಿದೆ. ಪಕ್ಷಭೇದ ಇಲ್ಲದೇ ಒಗ್ಗಟ್ಟಾಗಿ ಕೆಲಸ ಮಾಡಲು  ಸಚಿವರು, ಸಂಸದರು, ಶಾಸಕರು ಸಹಮತ ವ್ಯಕ್ತಪಡಿಸಿದ್ದಾರೆ ಎಂದರು.ಅನವಶ್ಯಕ  ಓಡಾಟಕ್ಕೆ ಬ್ರೇಕ್ ಹಾಕಲು ಇನ್ನಷ್ಟು ಕಠಿಣ ಕ್ರಮ ಜರುಗಿಸಲಾಗಿದೆ. ಪಡಿತರ ಚೀಟಿ  ಇದ್ದವರಿಗೂ ಇರದವರಿಗೂ ಅಕ್ಕಿ, ಬೇಳೆ ನೀಡಲು ಸೂಚಿಸಿದ್ದು, ಯಾರೂ ಸಹ ಗಾಬರಿ ಪಡುವ ಅಗತ್ಯ  ವಿಲ್ಲ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.
ಅಂತಾರಾಷ್ಟ್ರೀಯ ಪ್ರವಾಸಿಗರ  ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಕೋವಿಡ್ 19 ವಾರ್ ರೂಂ ಸ್ಥಾಪನೆ  ಮಾಡಲಾಗಿದೆ. ರಾಜ್ಯದಲ್ಲಿ ಯಾವುದೇ ಸೋಂಕಿತರು ವೆಂಟಿಲೇಟರ್ ನಲ್ಲಿ ಇಲ್ಲ. ರೈತರಿಂದ  ಹಣ್ಣು, ತರಕಾರಿ ಖರೀದಿ ಮಾಡಲಾಗುತ್ತಿದೆ.  ಬಿಬಿಎಂಪಿಯಿಂದ ಎಲ್ಲಾ ಕಡೆ ಔಷಧ ಸಿಂಪಡಣೆ ನಡೆಯುತ್ತಿದೆ. ಲಾಕ್ಡೌನ್ ಸಮರ್ಪಕವಾಗಿ ಜಾರಿಗೆ ತರಲು ಬಿಗಿ ಕ್ರಮ ತೆಗೆದುಕೊಳ್ಳಲು ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದರು.
ರಾಜ್ಯದಲ್ಲಿ  ಅಗತ್ಯ ವಸ್ತುಗಳಾದ ಅಕ್ಕಿ, ಸಕ್ಕರೆ, ಅಡುಗೆ ಎಣ್ಣೆ ಎಲ್ಲಾ ಶೇಖರಣೆ ಇದೆ. 500 ಚೆಕ್  ಪೋಸ್ಟ್ ಸ್ಥಾಪನೆ ಮಾಡಲಾಗಿದ್ದು, ಅಂತಾರಾಜ್ಯ ಸಂಚಾರ ನಿರ್ಬಂದ ಮಾಡಲಾಗಿದೆ. ವಲಸಿಗರಿಗೆ  ಶಾಲೆ, ಸಮುದಾಯ ಭವನಗಳಲ್ಲಿ ಊಟದ ವ್ಯವಸ್ಥೆ ಮಾಡಿದ್ದೇವೆ. ಕಟ್ಟಡ ಕಾರ್ಮಿಕರಿಗೆ ಅರ್ಧ  ಲೀಟರ್ ಹಾಲು ಕೊಡಲು ತೀರ್ಮಾನಿಸಲಾಗಿದೆ. ಹಣ ವಸೂಲಿ ಮಾಡುವ ಪೊಲೀಸರನ್ನು ಕ್ಷಮಿಸುವ  ಪ್ರಶ್ನೆಯೇ ಇಲ್ಲ. ಅಂತಹವರ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು. ಇಂದಿರಾ ಕ್ಯಾಂಟೀನ್ ಗಳಲ್ಲಿ ಉಚಿತ ತಿಂಡಿ ವಿತರಣೆಗೆ ತಡೆ ನೀಡಿದ್ದು, ಹಿಂದಿನಂತೆ ಐದು, ಹತ್ತು ರೂಗೆ ತಿಂಡಿ, ಊಟ ವಿತರಣೆಯಾಗಲಿದೆ ಎಂದು ಸ್ಪಷ್ಟಪಡಿಸಿದರು.ಬೆಂಗಳೂರು ಕರಗ ಸರಳವಾಗಿ ಆಚರಣೆ ಮಾಡಲು ತೀರ್ಮಾನ ಮಾಡಲಾಗಿದೆ.ನಾಲ್ಕೈದು ಮಂದಿ ಇದ್ದು ಕರಗ ಆಚರಿಸಲು ಸೂಚನೆ ಕೊಟ್ಟಿದ್ದೇವೆ ಎಂದು ಯಡಿಯೂರಪ್ಪ ಹೇಳಿದರು.