ಬೆಂಗಳೂರು, ಮೇ 19,ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಆತಂಕಕಾರಿಯಾಗಿ ಹೆಚ್ಚಳವಾಗುತ್ತಿದೆ. ಸೋಮವಾರ ಸಂಜೆ 5ರಿಂದ ಮಂಗಳವಾರ ಮಧ್ಯಾಹ್ನದವರೆಗೆ 127 ಕೊರೋನಾ ಪ್ರಕರಣಗಳು ವರದಿಯಾಗಿವೆ. ಇದರಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1373ಕ್ಕೇರಿಕೆಯಾಗಿದೆ. ಈ ನಡುವೆ, ರಾಜ್ಯದಲ್ಲಿ ಸೋಂಕಿಗೆ ಮೂವರು ಬಲಿಯಾಗಿದ್ದಾರೆ. ಬಳ್ಳಾರಿಯ 61 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ಇವರು ಜ್ವರದ ಲಕ್ಷಣಗಳಿಂದ ಆಸ್ಪತ್ರೆಗೆ ದಾಖಲಾಗಿದ್ದರು.ಇತ್ತೀಚಿಗೆ ಹೃದಯ ಶಸ್ತ್ರ ಚಿಕಿತ್ಸೆಗೂ ಒಳಪಟ್ಟಿದ್ದರು.
ವಿಜಯಪುರದ 65 ವರ್ಷ ವೃದ್ಧರೊಬ್ಬರು ಸೋಂಕಿಗೆ ಬಲಿಯಾಗಿದ್ದಾರೆ. ಇವರನ್ನು ಸೋಮವಾರ ಆಸ್ಪತ್ರೆಗೆ ಕರೆತರುವಾಗಲೇ ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ. ಬೆಂಗಳೂರಿನ 54 ವರ್ಷದ ನಿವಾಸಿ ಸೋಮವಾರ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಇದರಿಂದ ಸೋಂಕಿತರ ಸಂಖ್ಯೆ 41ಕ್ಕೇರಿಕೆಯಾಗಿದೆ. ಇವರಲ್ಲಿ 91 ಮಂದಿ ಮುಂಬೈ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ. ಮಂಡ್ಯ ಜಿಲ್ಲೆಯೊಂದರಲ್ಲಿ ಬರೋಬ್ಬರಿ 62 ಪ್ರಕರಣಗಳು ವರದಿಯಾಗಿವೆ. ಜೊತೆಗೆ, ದಾವಣಗೆರೆಯಲ್ಲಿ 19, ಯಾದಗಿರಿಯಲ್ಲಿ 1, ಕಲಬುರಗಿಯಲ್ಲಿ 12, ಬೆಂಗಳೂರು ನಗರದಲ್ಲಿ 6, ಮಂಡ್ಯದಲ್ಲಿ 62, ಚಿತ್ರದುರ್ಗದಲ್ಲಿ 1, ವಿಜಯಪುರದಲ್ಲಿ 1, ಚಿಕ್ಕಮಗಳೂರಿನಲ್ಲಿ 2, ಶಿವಮೊಗ್ಗದಲ್ಲಿ 12, ಗದಗದಲ್ಲಿ 1, ಹಾಸನದಲ್ಲಿ 2, ಉತ್ತರ ಕನ್ನಡದಲ್ಲಿ 4, ಉಡುಪಿಯಲ್ಲಿ 4 ಪ್ರಕರಣಗಳು ವರದಿಯಾಗಿವೆ.