12 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ: ಸಚಿವ ಜಾರಕಿಹೊಳಿ ಹರ್ಷ

ಬೆಂಗಳೂರು,  ಫೆ 17 [ಯುಎನ್ಐ] ರಾಜ್ಯ ಬಿಜೆಪಿ ಸರ್ಕಾರ ಆದ್ಯತೆಯ ಮೇರೆಗೆ ಬೃಹತ್ ನೀರಾವರಿ ಯೋಜನೆಗಳನ್ನು ಕೈಗೊಂಡಿದ್ದು, ರಾಜ್ಯದ 12,000 ಹೆಕ್ಟೇರ್ ಪ್ರದೇಶಕ್ಕೆ ಈ ಪ್ರಸಕ್ತ ವರ್ಷದಲ್ಲಿ ನೀರಾವರಿ ಸೌಲಭ್ಯ ಕಲ್ಪಿಸುವ ಸಾಮರ್ಥ್ಯ ತೋರುತ್ತಿರುವುದು ಹೆಮ್ಮೆಯ ಸಂಗತಿ ಎಂದು ಜಲ ಸಂಪನ್ಮೂಲ ಸಚಿವ ರಮೇಶ್ ಲ. ಜಾರಕಿಹೊಳಿ ಹರ್ಷ ವ್ಯಕ್ತಪಡಿಸಿದ್ದಾರೆ.ರಾಜ್ಯಪಾಲರ ವಜೂಬಾಯ್ ವಾಲಾ ಅವರು ಸೋಮವಾರ ರಾಜ್ಯ ವಿಧಾನಮಂಡಲದಲ್ಲಿ ಮಾಡಿದ ಭಾಷಣ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಜಲಸಂಪನ್ಮೂಲ ಇಲಾಖೆಯ ಯೋಜನೆಗಳು, ಭವಿಷ್ಯದ ಕಾರ್ಯಕ್ರಮಗಳ ಕುರಿತು ರಾಜ್ಯಪಾಲರು ಉತ್ಸುಕತೆಯಿಂದ ಮಾತನಾಡಿರುವುದು ಹೆಮ್ಮೆಯ ಸಂಗತಿ ಎಂದಿದ್ದಾರೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಮಲಪ್ರಭಾ ಯೋಜನೆಯ ಕಾಲುವೆಗಳ ಆಧುನೀಕರಣಕ್ಕೆ 1000 ಕೋಟಿ ರೂ.ಗಳ ಅಂದಾಜು ವೆಚ್ಚಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿದ್ದು, ವಿಜಯ ನಗರ ಕಾಲುವೆಗಳ ಆಧುನೀಕರಣಕ್ಕೆ 450 ಕೋಟಿ ರೂ.ಗಳನ್ನು ಸರ್ಕಾರ ಒದಗಿಸುತ್ತಿದೆ. ಹಾಗೆಯೇ ಹೇಮಾವತಿ ನಾಲೆಯ ಆಧುನೀಕರಣಕ್ಕೆ 475 ಕೋಟಿ ರೂ ಒದಗಿಸಲಾಗುವುದು.  ರಾಜ್ಯದ ಒಟ್ಟು 21 ಮಧ್ಯಮ ಮತ್ತು ಬೃಹತ್ ನೀರಾವರಿ ಯೋಜನೆಗಳಿಗಾಗಿ ಪ್ರಸಕ್ತ ಸಾಲಿನಲ್ಲಿ ಒಟ್ಟು 4050 ಕೋಟಿ ರೂ.ಗಳನ್ನು ಮೀಸಲಿಡುತ್ತಿದ್ದು ಈ ಕಾರಣಕ್ಕಾಗಿ ತಾವು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಅಭಿನಂದಿಸುತ್ತಿರುವುದಾಗಿ ತಿಳಿಸಿದ್ದಾರೆ.ತಾವು ರಾಜ್ಯದ ಜಲ ಸಂಪನ್ಮೂಲ ಸಚಿವನಾಗಿ ಅಧಿಕಾರ ಸ್ವೀಕರಿಸಿದಾಗಲೇ ಹೇಳಿದಂತೆ ಜನತೆಗೆ ಮತ್ತು ರಾಜ್ಯದ ಭೂಮಿಗೆ ನೀರುಣಿಸುವುದು ಮತ್ತು ರಾಜ್ಯದ ಜನರ ಕಣ್ಣೀರು ಒರೆಸುವುದೇ ತಮ್ಮ ಆದ್ಯತೆಯ ಕೆಲಸವಾಗಿದೆ ಎಂದು ಸಚಿವರು ಪುನರುಚ್ಛರಿಸಿದ್ದಾರೆ.