ರಾಜ್ಯದಲ್ಲಿ 105 ಹೊಸ ಕೊರೋನಾ ಪ್ರಕರಣಗಳು; ಸೋಂಕಿತರ ಸಂಖ್ಯೆ 1710ಕ್ಕೇರಿಕೆ

ಬೆಂಗಳೂರು, ಮೇ 22, ರಾಜ್ಯದಲ್ಲಿ ಗುರುವಾರ ಸಂಜೆಯಿಂದ ಶುಕ್ರವಾರ ಮಧ್ಯಾಹ್ನದವರೆಗೆ ಒಟ್ಟು 105 ಕೊರೋನಾ ಪ್ರಕರಣಗಳು ವರದಿಯಾಗಿವೆ. ಇದರಿಂದ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1710ಕ್ಕೇರಿಕೆಯಾಗಿದೆ. ಬೆಂಗಳೂರು ಸಂಚಾರ ಪೊಲೀಸ್ ಸಿಬ್ಬಂದಿಗೂ ಸೋಂಕು ತಗುಲಿದ್ದು, ಪೊಲೀಸ್ ವಲಯದಲ್ಲಿ ಆತಂಕ ಮೂಡಿಸಿದೆ. ರಾಮಕೃಷ್ಣ ಹೆಗಡೆ ನಗರದ ನಿವಾಸಿಯಾಗಿರುವ ಕಾನ್‌ಸ್ಟೆಬಲ್, ಕೊರೊನಾ ಕರ್ತವ್ಯದಿಂದಾಗಿ ಕಳೆದ ತಿಂಗಳೇ ಕುಟುಂಬದವರನ್ನು ಊರಿಗೆ ಕಳುಹಿಸಿದ್ದರು. ಮೇ 20ರಂದು ಇವರು ಸಿ.ವಿ.ರಾಮನ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಟ್ಟಿದ್ದರು.ವರದಿಯಲ್ಲಿ ಇವರಿಗೆ ಸೋಂಕು ದೃಢಪಡುತ್ತಿದ್ದಂತೆ ಅವರನ್ನು  ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಿಕ್ಕಬಳ್ಳಾಪುರ ಒಂದರಲ್ಲೇ 45 ಹೊಸ ಪ್ರಕರಣಗಳು ವರದಿಯಾಗಿವೆ. ಮಹಾರಾಷ್ಟ್ರದಿಂದ ಮೇ 19 ರಂದು ಜಿಲ್ಲೆಗೆ ವಾಪಾಸಾಗಿರುವವರ 265 ಜನರ ಪೈಕಿ ಗುರುವಾರ ಗೌರಿಬಿದನೂರು ತಾಲ್ಲೂಕಿನ ನಾಲ್ಕು ಕಾರ್ಮಿಕರಲ್ಲಿ ಕೋವಿಡ್‌ ಧೃಢಪಟ್ಟಿತ್ತು. ಅದರ ಬೆನ್ನಲ್ಲೇ ಶುಕ್ರವಾರ ಒಂದೇ ದಿನಕ್ಕೆ ಮತ್ತೆ 45 ಜನರಿಗೆ ಕೋವಿಡ್‌ ತಗುಲಿರುವುದು ಪತ್ತೆಯಾಗಿದೆ.ಬೆಂಗಳೂರು ಗ್ರಾಮಾಂತರ 3, ದಾರವಾಡ 2, ತುಮಕೂರು 6, ಚಿಕ್ಕಬಳ್ಳಾಪುರ 4, ಮಂಡ್ಯ 3, ಚಿಕ್ಕಮಗಳೂರು ಜಿಲ್ಲೆಯಲ್ಲಿ 5, ಬೀದರ್ 6, ಹಾಸನದಲ್ಲಿ 13, ವಿಜಯಪುರ 2, ದಾವಣಗೆರೆ 4 ಪ್ರಕರಣಗಳು ವರದಿಯಾಗಿವೆ, ಚಿತ್ರದುರ್ಗ ಒಂದು ಪ್ರಕರಣ ವರದಿಯಾಗಿವೆ.ದಾವಣಗೆರೆಯ ಇಬ್ಬರು ನವದೆಹಲಿಯಿಂದ ರೈಲಿನಲ್ಲಿ ಹಿಂದಿರುಗಿರುವ  ಪ್ರಯಾಣ ಹಿನ್ನೆಲೆ ಹೊಂದಿದ್ದಾರೆ. ಇಂದಿನ ಸೋಂಕಿತರಲ್ಲಿ ಬಹುತೇಕರು ಮುಂಬೈನಿಂದ ಆಗಮಿಸಿದವರು ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.