ಬೆಂಗಳೂರು, ಮೇ 11, ರಾಜ್ಯದಲ್ಲಿ ಭಾನುವಾರ ಸಂಜೆಯಿಂದ ಸೋಮವಾರ ಮಧ್ಯಾಹ್ನದವರೆಗೆ ಒಟ್ಟು 10 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಇದರಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 858ಕ್ಕೇರಿಕೆಯಾಗಿದೆ. ಇವರಲ್ಲಿ 32 ಜನರು ಮೃತಪಟ್ಟಿದ್ದು, 422 ಮಂದಿ ಗುಣಮುಖರಾಗಿದ್ದಾರೆ.ಕಲಬುರಗಿಯ 38 ವರ್ಷದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ. ಈತನ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ದಾವಣಗೆರೆಯಲ್ಲಿ ಸೋಂಕಿತರ ಸಂಪರ್ಕ ಹೊಂದಿದೆ 33 ವರ್ಷದ ವ್ಯಕ್ತಿ, 30 ಮತ್ತು 50 ವರ್ಷದ ಮಹಿಳೆಯರಲ್ಲಿ ಸೋಂಕು ದೃಢಪಟ್ಟಿದೆ. ಹಾವೇರಿಯ ಶಿಗ್ಗಾವಿಯಲ್ಲಿ ಮುಂಬೈಗೆ ಪ್ರಯಾಣ ಬೆಳೆಸಿರುವ ಹಿನ್ನೆಲೆ ಹೊಂದಿರುವ 26 ವರ್ಷದ ಯುವಕ, ಬಾಗಲಕೋಟೆಯ ಬನಹಟ್ಟಿಯಲ್ಲಿ ಗುಜರಾತ್ ನ ಅಹಮದಾಬಾದ್ ಗೆ ಪ್ರಯಾಣ ಮಾಡಿರುವ ಹಿನ್ನೆಲೆಯುಳ್ಳ 20 ವರ್ಷದ ಯುವಕರಲ್ಲಿ ಸೋಂಕು ಕಾಣಿಸಿಕೊಂಡಿದೆ. ಸೋಂಕಿತ ಗರ್ಭಿಣಿ ಮಹಿಳೆ (688 ರೋಗಿ) ಸಂಪರ್ಕ ಹೊಂದಿದ 50 ವರ್ಷದ ವ್ಯಕ್ತಿ, ಬೀದರ್ ನ 50 ಮತ್ತು 27 ವರ್ಷದ ವ್ಯಕ್ತಿಗಳಲ್ಲಿ ಸೋಂಕು ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.