ಉತ್ತರಪ್ರದೇಶದಲ್ಲಿ ಅಡುಗೆ ಅನಿಲ ಸ್ಫೋಟ : 10 ಸಾವು

ಮಾಔ, ಅ 14:      ಉತ್ತರಪ್ರದೇಶದ ಮೊಹಮದಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ಬೆಳಗ್ಗೆ ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡು ಕನಿಷ್ಠ 10 ಮಂದಿ ಮೃತಪಟ್ಟಿದ್ದು 15 ಜನರಿಗೆ ಗಾಯಗಳಾಗಿವೆ. ಸ್ಫೋಟದ ಪರಿಣಾಮ ಎರಡು ಅಂತಸ್ತಿನ ಕಟ್ಟಡ ಕುಸಿದು ಬಿದ್ದಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ಇತರ ಭದ್ರತಾ ಪಡೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಇನ್ನೂ ಅನೇಕ ಜನರು ಕುಸಿದ ಕಟ್ಟಡದ ಅವಶೇಷಗಳಡಿ ಸಿಲುಕಿರುವ ಅಪಾಯವಿದೆ.    ವಾಲ್ದಿಪುರ್ ಗ್ರಾಮದಲ್ಲಿ ಸೋಮವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಎಲ್ ಪಿ ಜಿ ಸ್ಫೋಟಿಸಿದ ಪರಿಣಾಮ ಎರಡು ಅಂತಸ್ತಿನ ಕಟ್ಟಡ ಕುಸಿದು ಬಿದ್ದು ಈ ದುರ್ಘಟನೆ ನಡೆದಿದೆ ಎಂದು ಉತ್ತರಪ್ರದೇಶದ ಡಿಜಿಪಿ ಒ.ಪಿ.ಸಿಂಗ್ ತಿಳಿಸಿದ್ದಾರೆ. ಆದ್ಯತೆಯ ಮೇರೆಗೆ ರಕ್ಷಣಾ ಕಾರ್ಯಕೈಗೊಂಡಿದ್ದು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.  ಗಾಯಾಳುಗಳ ಸ್ಥಿತಿ ಗಂಭೀರವಾಗಿದ್ದು ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಆ ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್  ಮೃತರ ಕುಟುಂಬಗಳಿಗೆ ಸಾಂತ್ವನ ತಿಳಿಸಿ, ತಕ್ಷಣವೇ ಎಲ್ಲ ಸಾಧ್ಯ ಪರಿಹಾರ ಮತ್ತು ವೈದ್ಯಕೀಯ ನೆರವು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.