ನವದೆಹಲಿ, ಜನವರಿ, 10, ಕೇಂದ್ರ ಸರಕಾರ ರೈತರ ಆದಾಯ ದುಪ್ಪಟ್ಟುಗೊಳಿಸುವುದಾಗಿ ಹೇಳುತ್ತಿದ್ದರೂ ರೈತರ ಸಮಸ್ಯೆ ಗಳು ಹೆಚ್ಚಾಗಿ ದೇಶಾದ್ಯಂತ 2018ನೇ ಸಾಲಿನಲ್ಲಿ 10,349 ರೈತರು ನೇಣಿಗೆ ಕೊರಳೊಡ್ಡಿದ್ದಾರೆ ಎಂಬ ಆತಂಕಕಾರಿ ಮಾಹಿತಿ ಸರಕಾರಿ ಮೂಲಗಳಿಂದಲೇ ಬಹಿರಂಗವಾಗಿದೆ. ದೇಶದ ಬೆನ್ನೆಲುಬಾಗಿರುವ ರೈತ ಸಾವಿಗೆ ಶರಣಾಗುತ್ತಿದ್ದಾನೆ. ಮಾಡಿದ ಸಾಲ ತೀರಿಸಲಾಗದೆ ಕೊನೆಗೆ ಸಾವಿನ ಮನೆಯತ್ತ ಮುಖ ಮಾಡುತ್ತಿದ್ದಾನೆ. ಅನ್ನದಾತನ ಸಾವಿಗೆ ಕಾರಣಗಳು ಹಲವಾರು. ಪ್ರಕೃತಿ ವಿಕೋಪಗಳು ಒಂದೆಡೆಯಾದರೆ, ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದಿರುವುದು ಸಹ ಮತ್ತೊಂದೆಡೆ ರೈತರ ಸಾವಿಗೆ ಕಾರಣವಾಗಿದೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ . ವರ್ಷಪೂರ್ತಿ ಶ್ರಮಪಟ್ಟು ಬೆಳೆದ ಬೆಳೆ ಕೊನೆ ಘಳಿಗೆಯಲ್ಲಿ ಕೈಗೆ ಸಿಗದಿದ್ದಾಗ ರೈತ ಸಾವಿನ ಮನೆ ತಟ್ಟುತ್ತಿದ್ದಾನೆ ಇಂತಹ ಪ್ರಕರಣಗಳು ಪ್ರತಿನಿತ್ಯವೂ ವರದಿಯಾಗುತ್ತಿದೆ ಇದರ ಜೊತೆಗೆ ರಾಷ್ಟ್ರೀಯ ಅಪರಾಧ ದಾಖಲೆಗಳ ದಳ ಬಿಡುಗಡೆ ಮಾಡಿರುವ ವಾರ್ಷಿಕ ವರದಿಯಲ್ಲಿ 2018ರಲ್ಲಿ ದೇಶಾದ್ಯಂತ 50,74,634 ಅರಿವಿನ ಅಪರಾಧಗಳು ದಾಖಲಾಗಿವೆ. ಅಂದರೆ 2018ರಲ್ಲಿ ಪ್ರತಿನಿತ್ಯ 80 ಕೊಲೆ, 289 ಕಿಡ್ನಾಪ್ ಮತ್ತು 91 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ ಎಂದು ವರದಿಯಾಗಿದೆ .2018ರಲ್ಲಿ ದೇಶಾದ್ಯಂತ 50,74,634 ಅರಿವಿನ ಅಪರಾಧಗಳು ಸಂಭವಿಸಿದೆ. ಈ ಪೈಕಿ ಭಾರತೀಯ ದಂಡ ಸಂಹಿತೆ ಅಡಿಯಲ್ಲಿ 31,32,954 ಅಪರಾಧ ಪ್ರಕರಣಗಳು ಮತ್ತು ವಿಶೇಷ ಕಾನೂನುಗಳ ಅಡಿಯಲ್ಲಿ 19,41,680 ಪ್ರಕರಣಗಳು ದಾಖಲಾಗಿವೆ ಎಂದೂ ವರದಿ ಹೇಳಿದೆ.