ದರೋಡೆಗೆ ಸಂಚು ಐವರ ಸೆರೆ

ಬೆಂಗಳೂರು, ಮೇ 26,ಯಲಹಂಕದ ಅಳ್ಳಾಳಸಂದ್ರ ಕೆರೆಯ ಬಳಿಯ ನಿರ್ಜನ ಪ್ರದೇಶದಲ್ಲಿ ಸಾರ್ವಜನಿಕರ ಮೇಲೆ ಹಲ್ಲೆ  ನಡೆಸಿ ನಗದು, ಚಿನ್ನಾಭರಣ ದೋಚಲು ಸಂಚು ರೂಪಿಸುತ್ತಿದ್ದ ಐವರನ್ನು ಕೇಂದ್ರ ಅಪರಾಧ ದಳ  (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.ವಿದ್ಯಾರಣ್ಯಪುರದ  ಕಾನ್ಸಿರಾಮ್ ನಗರದ ನಿವಾಸಿಗಳಾದ ಎಂ. ನಾಗರಾಜ (19), ಪ್ರೇಮ್ ಕುಮಾರ್‌ (21),  ಶ್ರೇಯಸ್‌ (20), ನಂದನ್‌ (22), ನಾಗಶೆಟ್ಟಿಹಳ್ಳಿಯ ಕೆವಿನ್‌ (19) ಬಂಧಿತ ಆರೋಪಿಗಳು.ಬಂಧಿತ ಆರೋಪಿಗಳಿಂದ ಮಚ್ಚು ಲಾಂಗ್ ಇನ್ನಿತರ  ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡು ಯಲಹಂಕ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆಆರೋಪಿಗಳ  ‍ಪೈಕಿ ಪ್ರೇಮ್‌ ಕುಮಾರನ ವಿರುದ್ಧ ಗಂಗಮ್ಮನಗುಡಿ ಪೊಲೀಸ್‌ ಠಾಣೆಯಲ್ಲಿ ಕೊಲೆಯತ್ನ,  ಯಲಹಂಕ ಪೊಲೀಸ್‌ ಠಾಣೆಯಲ್ಲಿ ದರೋಡೆ ಯತ್ನ ಪ್ರಕರಣ ದಾಖಲಾಗಿದೆ. ಶ್ರೇಯಸ್  ವಿರುದ್ಧ ಕೂಡಾ ಗಂಗಮ್ಮನ ಗುಡಿ ಪೊಲೀಸ್‌ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ.  ಅರುಣ್‌ ಎಂಬಾತನನ್ನು ಕೊಲೆ ಮಾಡಿದ ಆರೋಪದಲ್ಲಿ ನಂದನ್‌ ವಿರುದ್ಧ ಯಲಹಂಕ ಠಾಣೆಯಲ್ಲಿ  ಪ್ರಕರಣವಿದೆ. ಅಲ್ಲದೆ, ಆತನ ವಿರುದ್ಧ ಗಂಗಮ್ಮನಗುಡಿ ಪೊಲೀಸ್‌ ಠಾಣೆಯಲ್ಲಿ ಕೊಲೆಯತ್ನ  ಪ್ರಕರಣವೂ ದಾಖಲಾಗಿದೆ. ಸಿಸಿಬಿ ಸಂಘಟಿತ ಅಪರಾಧ ದಳದ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ ಎಂದು  ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.