ನವದೆಹಲಿ, ಮೇ 28,ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ವದಂತಿ ವಿಚಾರ ಮತ್ತೊಮ್ಮೆ ಸಾಮಾಜಿಕ ತಾಣದಲ್ಲಿ ಸದ್ದು ಮಾಡುತ್ತಿದೆ. ಅದರಲ್ಲೂ ಧೋನಿ ರಿಟೈರ್ಸ್ ಹ್ಯಾಷ್ ಟ್ಯಾಗ್ ಬಳಸಿ ವದಂತಿ ಹಬ್ಬಿಸಲಾಗುತ್ತಿದೆ.ಆದರೆ, ಹ್ಯಾಷ್ ಟ್ಯಾಗ್ ಗೆ ಪ್ರಭಾವಿತಳಾಗದ ಧೋನಿ ಪತ್ನಿ ಸಾಕ್ಷಿ, ಧೋನಿ ಭವಿಷ್ಯದ ಕುರಿತು ವದಂತಿ ಸೃಷ್ಟಿಸುತ್ತಿರುವ ನೆಟ್ಟಿಗರನ್ನು ಜಾಡಿಸಿದ್ದಾರೆ.ಈ ಮಧ್ಯೆ ಇಂಥ ಯಾವುದೇ ವದಂತಿಗಳಿಗೆ ಧೋನಿ ಇದುವರೆಗೂ ಪ್ರತಿಕ್ರಿಯಿಸಿಲ್ಲ. '' ಇದು ಕೇವಲ ಉಹಾಪೋಹಾಗಳಷ್ಟೇ, ಅರಿವಿದೆ.. ಲಾಕ್ ಡೌನ್ ಜನರ ತಲೆಯನ್ನು ಅಸ್ಥಿರಗೊಳಿಸಿದೆ... '' ಎಂದು ಸಾಕ್ಷಿ ಟ್ವೀಟ್ ಮಾಡಿದ್ದರು. ಆದರೆ ಟ್ವೀಟ್ ಮಾಡಿದ ಕೆಲವೇ ಕ್ಷಣದಲ್ಲಿ ಇದನ್ನು ತೆಗೆದು ಹಾಕಿದ್ದಾರೆ. ಆದರೆ ಅವರ ಟ್ವೀಟ್ ಸ್ಕ್ರೀನ್ ಶಾಟ್ ಭಾರಿ ವೈರಲ್ ಆಗಿದೆ.2019ರ ವಿಶ್ವ ಕಪ್ ನಲ್ಲಿ ಪಾಲ್ಗೊಂಡ ನಂತರ ಸ್ಪರ್ಧಾತ್ಮಕ ಕ್ರಿಕೆಟ್ ನಿಂದ ದೂರವೇ ಉಳಿದಿರುವ 38 ವರ್ಷದ ಧೋನಿ, ಕುಟುಂಬದೊಂದಿಗೆ ಸಮಯ ಆನಂದಿಸುತ್ತಿದ್ದಾರೆ.ಭಾರತದ ಮಹತ್ವದ ಪಂದ್ಯಗಳಲ್ಲಿ ನಿಧಾನಗತಿಯ ಬ್ಯಾಟಿಂಗ್ ಗಾಗಿ ಧೋನಿ ಹಲವು ಬಾರಿ ಟೀಕೆಗೆ ಗುರಿಯಾಗಿದ್ದಾರೆ. ಈ ಮಧ್ಯೆ 2019-20ರ ಬಿಸಿಸಿಐ ಕೇಂದ್ರ ಗುತ್ತಿಗೆ ಆಟಗಾರರ ಪಟ್ಟಿಯಿಂದಲೂ ಧೋನಿ ಹೆಸರನ್ನು ಕೈಬಿಡಲಾಗಿದೆ. ಹೀಗಾಗಿ ಧೋನಿ ನಿವೃತ್ತಿ ಕುರಿತು ಪುಂಖಾನುಪುಂಖ ವದಂತಿಗಳು ಹರಡುತ್ತಲೇ ಇವೆ.