ಯುಗದ ನಗೆ ಕಾರ್ಯಕ್ರಮದಲ್ಲಿ ಬಿ. ಪ್ರಾಣೇಶ ಅಭಿಮತ ಮಾತುಗಾರಿಕೆ ಇಂದು ಉದ್ದಿಮೆಯಾಗುತ್ತಲಿದೆ

ಬೆಳಗಾವಿ 6- ಮೊದ ಮೊದಲು ಭಾಷಣಕ್ಕೆ ಯಾರೂ ಹಣಕೊಟ್ಟು ಬರುತ್ತಿರಲಿಲ್ಲ. ಆದರೆ ಇಂದಿನ ದಿನಗಳಲ್ಲಿ ಮಾತುಗಳನ್ನು ಕೇಳಲು ಹಣಕೊಟ್ಟು ಸಾವಿರಾರು ಜನ ಬರುತ್ತಿದ್ದಾರೆ. ಮಾತುಗಾರಿಕೆ ಇಂದು ಉದ್ದಿಮೆಯಾಗುತ್ತಲಿದೆ. ಭಾಷಣವನ್ನು ಹಣಕೊಟ್ಟು ಕೇಳುವ ಹಂತಕ್ಕೆ ಏರಿಸಿದ ಶ್ರೇಯಸ್ಸು ಹಾಸ್ಯ ಭಾಷಣಕಾರರಿಗೆ ಸಲ್ಲುತ್ತದೆ ಎಂದು ಖ್ಯಾತನಗೆ ಮಾತುಗಾರ ಗಂಗಾವತಿ ಬಿ. ಪ್ರಾಣೇಶ ಇಂದಿಲ್ಲಿ ಹೇಳಿದರು.

ನೆಹರು ನಗರದ ಜೀರಗೆ ಸಭಾಭವನದಲ್ಲಿ ರೋಟರಿ ಕ್ಲಬ್ ಆಫ್ ಬೆಳಗಾವಿ ಮಿಡ್ಟೌನ್ ಇವರು ಹಮ್ಮಿಕೊಳ್ಳಲಾಗಿದ್ದ 'ಯುಗದ ನಗೆ' ಹಾಸ್ಯ ಕಾರ್ಯಕ್ರಮದ ಪ್ರಮುಖ ಭಾಷಣಕಾರರಾಗಿ  ಆಗಮಿಸಿದ್ದ  ಗಂಗಾವತಿ ಬಿ. ಪ್ರಾಣೇಶ ಇವರು  ಮೇಲಿನಂತೆ ಅಭಿಪ್ರಾಯ ಪಟ್ಟರು.

ರಾಜಹಾಸ್ಯವೆಂದರೆ ಸುಮ್ಮನೆ ನಕ್ಕು ಮರೆಯುವಂತಹದ್ದಲ್ಲ. ಚಿಂತನೆಗೆ ಹಚ್ಚುವಂತಹದ್ದು. ನನ್ನ ಗುರುಗಳಾದ ಬೀಚಿ, ಟಿ.ಪಿ. ಕೈಲಾಸಂ ಅವರ ಸಾಹತ್ಯದಲ್ಲಿ ನಾವು ರಾಜಹಾಸ್ಯವನ್ನು ಕಾಣಬಹುದು. ನನ್ನನ್ನು ಒಬ್ಬ ಹಾಸ್ಯಭಾಷಣಕಾರರನ್ನಾಗಿ  ರೂಪಿಸಿದ್ದೇ ಬೀಚಿಯವರ ಸಾಹಿತ್ಯ ಎಂದು ಹೇಳಿದರು.

ಮಾತೃಭಾಷಾ ಮಹತ್ವ ಕುರಿತು ಹೇಳಿದ ಪ್ರಾಣೇಶ ಮಾತೃಭಾಷೆ ಸ್ವಂತ ಶಬ್ದಸೃಷ್ಟಿ ಮಾಡುವ ಶಕ್ತಿಯನ್ನು ಹೊಂದಿದೆ. ಮಾತೃಭಾಷೆ ಭಾಷಾ ಸಂಸ್ಕೃತಿಯನ್ನು  ಕಲಿಸುತ್ತದೆ. ಕನ್ನಡ ಶಾಲೆಗಳು ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ತುಂಬಿ ಕೊಡುತ್ತವೆ. ಪಾಲಕರು ಅದರಲ್ಲಿಯೂ ತಾಯಂದಿರು ಇಂಗ್ಲೀಷ ಭಾಷಾ ವ್ಯಮೋಹದಿಂದ ಹೊರಬಂದು ಮಕ್ಕಳನ್ನು ಕನ್ನಡ ಶಾಲೆಗಳಲ್ಲಿ ಶಿಕ್ಷಣ ಕೊಡಿಸುವಲ್ಲಿ ಮುಂದಾಗಬೇಕೆಂದು  ಹೇಳಿದರು.

ಮತದಾನ ಮಹತ್ವ ಕುರಿತು ಹೇಳುತ್ತ ಪ್ರಾಣೇಶ, ನಗರಕ್ಕಿಂತ ಗ್ರಾಮೀಣ ಪ್ರದೇಶದಲ್ಲಿಯೇ ಮತದಾನ ಹೆಚ್ಚಾಗುತ್ತಿದ್ದು. ನಗರದ ಜನ ಮತದಾನದ ರಜೆಯನ್ನು ತಮ್ಮ ಸ್ವಂತ ಕೆಲಸಗಳಿಗಾಗಿ, ಪ್ರವಾಸ, ಮನರಂಜನೆಗಾಗಿ ಉಪಯೋಗಿಸುತ್ತಿರುವುದು ಖೇದದ ಸಂಗತಿ. ಬೆರಳಿಗೆ ಕಪ್ಪು ಮಸಿ ಹಚ್ಚಿಕೊಳ್ಳುವುದರಿಂದ ನೇಲ್ ಪೇಂಟ್ ಹಾಳುಗುತ್ತದೆಂದು ಮತದಾನ ಮಾಡದ ಲಲನೆಯರಿದ್ದಾರೆ. ಎಲ್ಲಕ್ಕಿಂತ ದೇಶ ದೊಡ್ಡದೆಂಬ ಭಾವನೆ ತಾಳಬೇಕು ಅದರಂತೆ ಎಲ್ಲ ಕೆಲಸಗಳಲ್ಲಿ ಶ್ರೇಷ್ಠವಾದ ಕೆಲಸ ಮತದಾನ ಎಂದು ತಿಳಿದುಕೊಂಡು ಮತದಾನಕ್ಕೆ ಮುಂದಾಗಿ  ಎಂದ ಅವರು  ಮತದಾನ ನಿಮ್ಮ ಮಗಳಿದ್ದಂತೆ ಅದನ್ನು ಹಣ ಹೆಂಡಕ್ಕೆ ಮಾರಿಕೊಳ್ಳಬೇಡಿ ಎಂದು ತಮ್ಮದೇ ಆದ ವಿನೋದ ಶೈಲಿಯಲ್ಲಿ ತಿಳಿಯೇಳುತ್ತ ಜನರನ್ನು ರಂಜಿಸಿದರು.

ನಗೆಮಾತುಗಾರ ಬಸವರಾಜ ಮಹಾಮನಿ ಕನ್ನಡ ಭಾಷೆಯೊಂದನ್ನೇ ಬಲ್ಲ ನಾನು ಹಲವಾರು ದೇಶಗಳನ್ನು ಸುತ್ತಿ ಬಂದೆ. ಉತ್ತರ ಕನರ್ಾಟ ಭಾಷೆ ಅತ್ಯಬ್ಧುತ ಭಾಷೆ. ಈ ಭಾಷೆಯ ಸೊಗಡೇ ನನ್ನನ್ನು ಹಲವಾರು ದೇಶಗಳನ್ನು ಸುತ್ತಾಡಿಸಿತು. ಮಂಗಳೂರು, ಉಡುಪಿ, ಬೆಂಗಳೂರು ಹೀಗೆ ಬೇರೆ ಬೇರೆ ಕನ್ನಡ ಮಾತುಗಳನ್ನು ಕೇಳುತ್ತೇವೆ. ಭಾಷೆಗಿಂತ ಹಿಂದಿರುವ ಭಾವವನ್ನು ಅರಿತುಕೊಳ್ಳಬೇಕು ಎಂದು ಅವರು ಹೇಳಿದ ಅವರು ಭಾಷೆಯ ನಡೆಯುವ ಅವಾಂತರಗಳನ್ನು ಹೇಳಿದರು.

ಹಾಸ್ಯಗಾರುಡಿಗ ರವಿಭಜಂತ್ರಿ, ಸಹನೆಗೆ  ಮತ್ತೊಂದು ಹೆಸರು  ಭಾರತೀಯ ನಾರಿ. ಎಲ್ಲವನ್ನೂ ಸಹಿಸಿಕೊಳ್ಳುತ್ತಲೇ ಹೋಗುತ್ತಾಳೆ.  ತನಗೆ ಬೇಕಾದ ಸೀರೆಯನ್ನಾರಿಸುವಾಗ ಮೀನ ಮೇಷ ಎಣಿಸುವ ಹೆಣ್ಣು; ಹಿರಿಯರು ನಿರ್ಧರಿಸಿದ ಗಂಡನನ್ನೇ ತನ್ನ ಜೀವನ ಸಂಗಾತಿಯನ್ನಾಗಿ ಮಾಡಿಕೊಳ್ಳುತ್ತಾಳೆ  ಇದು ನಮ್ಮ  ದೇಶದ ಸಂಸ್ಕೃತಿ. ಗಂಡನ ಆಯ್ಕೆಯನ್ನು ಹೆಣ್ಣಿಗೇ ಬಿಟ್ಟಿದ್ದರೆ  ನಮ್ಮದಾರದ್ದೂ ಮದುವೆಯಾಗುತ್ತಿರಲಿಲ್ಲ! ಎಂದು ತಮ್ಮ ನವಿರಾದ ಹಾಸ್ಯದೊಂದಿಗೆ ಹೆಣ್ಣನ ಸಹನಾಗುಣವನ್ನು ಗುಣಗಾನ ಮಾಡಿದರು. ತಾವೇ ರಚಿಸಿದ ಅಣಕು ಹಾಡೊಂದನ್ನು ಹಾಡಿದರು.

ಇಂದೂಮತಿ ಸಾಲಿಮಠ ಇಂದೂಮತಿ ಸಾಲಿಮಠ, ಉದಯ ಹರಟೆ ಕಾರ್ಯಕ್ರಮ ನನಗೆ ಜನಪ್ರಿಯತೆಯನ್ನು ತಂದು ಕೊಟ್ಟಿತು ಎಂದ ಅವರು ಇಂದಿನ ವಾಟ್ಸಾಪ್, ಫೇಸ್ ಬುಕ್ದಿಂದಾಗಿ ಯುವಕರು, ಯವತಿಯರು ದಾರಿತಪ್ಪುತ್ತಿದ್ದಾರೆ. ಇದರಿಂದ ಪಾಲಕರು ಎಚ್ಚರಿಕೆಯಿಂದರಬೇಕಾದುದು ಅತ್ಯವಶ್ಯವಾಗಿದೆ ಎಂದು ಹೇಳಿದರು. ತಮ್ಮ ಕಂಚಿನ ಕಂಠದಿಂದ ಹಲವಾರು ಅಣಕು ಹಾಡುಗಳನ್ನು ಹಾಡಿ ಜನರನ್ನು ನಗೆಗಡಲಲ್ಲಿ ತೇಲಿಸಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಇವೆಂಟ್ ಚೇರಮನ್ ರೋ. ಅಶೋಕ ಮಳಗಲಿ, ರೋಟರಿ ಕ್ಲಬ್ ಆಫ್ ಬೆಳಗಾವಿ ಮಿಡ್ ಟೌನ್ ಮಾಡಿರುವ, ಮಾಡುತ್ತಿರುವ ಸಮಾಜಮುಖಿ  ಕೆಲಸಗಳ ಕುರಿತು ವಿವರಿಸಿದರು. ವೇದಿಕೆ  ಮೇಲೆ ಕ್ಲಬ್ ಆಫ್ ಬೆಳಗಾವಿ ಮಿಡ್ ಟೌನ್ ರೋ. ಅಶೋಕ ಬದಾಮಿ ಉಪಸ್ಥಿತರಿದ್ದರು. 

ರೋ. ರವಿ ಇಂಚಲ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.