ಕಲಬುರಗಿ, ಮೇ 28,ಸೂರ್ಯ ನಗರಿ ಕಲಬುರಗಿಯಲ್ಲಿ ಮತ್ತೆ ಕೊರೊನಾ ತನ್ನ ಭದ್ರಬಾಹು ಚಾಚಿದ್ದು, ಇದೀಗ ಸೋಂಕಿತರ ಸಂಖ್ಯೆ 188ಕ್ಕೆ ಏರಿಕೆಯಾಗಿದೆ.ಮಹಾರಾಷ್ಟ್ರ ರಾಜ್ಯ ಪ್ರವಾಸದಿಂದ ಮರಳಿರುವ ಜಿಲ್ಲೆಯ ಮೂವರಿಗೆ ಗುರುವಾರ ಬೆಳಿಗ್ಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.ಸೇಡಂ ತಾಲೂಕಿನ ಮೇದಕ್ ಗ್ರಾಮದ 30 ವರ್ಷದ ಮಹಿಳೆ (ರೋಗಿ ಸಂಖ್ಯೆ-2422), ಶಹಾಬಾದ ತಾಲೂಕಿನ ಭಂಕೂರ ಬಳಿಯ ತರಿ ತಾಂಡಾದ 30 ವರ್ಷದ ಮಹಿಳೆ (ರೋಗಿ ಸಂಖ್ಯೆ-2492) ಹಾಗೂ ಚಿತ್ತಾಪುರ ತಾಲೂಕಿನ ಅನಿಕೇರಿ ಬಳಿಯ ರಾಮಾನಾಯಕ್ ತಾಂಡಾ ಮೂಲದ 9 ವರ್ಷದ ಬಾಲಕನಿಗೆ (ರೋಗಿ ಸಂಖ್ಯೆ-2493) ಕೋವಿಡ್-19 ತಗುಲಿದೆ. ಇವರೆಲ್ಲರು ಸರ್ಕಾರಿ ಕ್ವಾರಂಟೈನ್ ನಲ್ಲಿದ್ದವರಾಗಿದ್ದು, ಸೋಂಕು ಪತ್ತೆಯಾದ ಕೂಡಲೇ ಆಸ್ಪತ್ರೆಗೆ ದಾಖಲಾಗಿಸಲಾಗಿದೆ ಎಂದರು.ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 188ಕ್ಕೆ ಹೆಚ್ಚಳವಾಗಿದೆ. ಇದರಲ್ಲಿ 75 ಜನ ಗುಣಮುಖರಾಗಿದ್ದರೆ, 7 ಜನರು ನಿಧನ ಹೊಂದಿದ್ದಾರೆ. ಉಳಿದಂತೆ 106 ಜನರಿಗೆ ಚಿಕಿತ್ಸೆ ಮುಂದುವರೆದಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.