ಯೋಗ ಮಾಡುವುದರಿಂದ ಆರೋಗ್ಯ ವೃದ್ಧಿ: ಭುವನೇಶ್ವರಿ
ಬನವಾಸಿ 10: ಪ್ರಕೃತಿಯ ಮಡಿಲಲ್ಲಿ ಬದುಕಬೇಕಾದರೆ ಯೋಗ ಮುಖ್ಯವಾಗಿದೆ. ಯೋಗ ಮಾಡುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಯೋಗ ತರಭೇತುದಾರೆ ಭುವನೇಶ್ವರಿ ಹೇಳಿದರು.
ಅವರು ಸಮೀಪದ ಬೆಂಗಳೆ ಗ್ರಾಮದ ಅಂಬೇಡ್ಕರ್ ಭವನದಲ್ಲಿ ಭಾನುವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶ್ರೀರಕ್ಷಾ ಮಹಿಳಾ ಜ್ಞಾನ ವಿಕಾಸ ಕೇಂದ್ರದಿಂದ ಹಮ್ಮಿಕೊಂಡ ಆರೋಗ್ಯದ ಕುರಿತು ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮ ಜೀವನದ ಪ್ರತಿಯೊಂದು ಕ್ರಿಯೆಗಳು ಕೂಡ ಯೋಗದ ಅಡಿಯಲ್ಲೇ ಬರುತ್ತವೆ. ಕ್ರಿಯೆಯ ಪರಿಪೂರ್ಣತೆಯೇ ಯೋಗ. ಮನಸ್ಸು ಯಾವಾಗ ನಮ್ಮ ಕೈಯಲ್ಲಿರುತ್ತದೊ ಆಗ ಯೋಗ ಪ್ರಾಪ್ತವಾಗುತ್ತದೆ. ಯೋಗವು ನಿಮ್ಮ ದೇಹ ಮತ್ತು ಮನಸ್ಸು ಎರಡರೊಂದಿಗೂ ಕೆಲಸ ಮಾಡುವ ವ್ಯಾಯಾಮವಾಗಿದೆ. ಯೋಗವು ವಿಶ್ರಾಂತಿ ಮತ್ತು ಕೆಲವೊಮ್ಮೆ ಆಧ್ಯಾತ್ಮಿಕ ಅನುಭವವನ್ನು ಸೃಷ್ಟಿಸುತ್ತದೆ. ಯೋಗವು ನಮ್ಮ ದೈಹಿಕ ಆರೋಗ್ಯವನ್ನು ಮಾತ್ರವಲ್ಲದ ಮಾನಸಿಕ ಯೋಗ ಕ್ಷೇಮವನ್ನೂ ಸುಧಾರಿಸುವ ಅದ್ಭುತ ಮಾರ್ಗವಾಗಿದೆ ಎಂದರು.
ಮಹಿಳಾ ಜ್ಞಾನ ವಿಕಾಸ ಕೇಂದ್ರದ ತಾಲೂಕು ಸಮನ್ವಯಾಧಿಕಾರಿ ಮಲ್ಲಿಕಾ ಶೆಟ್ಟಿ ಮಾತನಾಡಿದರು. ಜ್ಞಾನ ವಿಕಾಸ ಕೇಂದ್ರದ ಸದಸ್ಯ ನಿರ್ಮಲಾ ಅಧ್ಯಕ್ಷತೆವಹಿಸಿದ್ದರು. ಶ್ರೀರಕ್ಷಾ ಮಹಿಳಾ ಜ್ಞಾನ ವಿಕಾಸ ಕೇಂದ್ರದ ಸದಸ್ಯರು ಭಾಗವಹಿಸಿದ್ದರು. ಸೇವಾ ಪ್ರತಿನಿಧಿ ಲಕ್ಷ್ಮೀ ಸ್ವಾಗತಿಸಿದರು. ಜ್ಞಾನ ವಿಕಾಸ ಕೇಂದ್ರದ ಸದಸ್ಯೆ ಗೌರಿ ಸ್ವಾಗತಿಸಿ, ವಂದಿಸಿದರು.