ವಿಷಬೀಜ ಬಿತ್ತಲು ಯತ್ನಾಳ್ ತಂಡ ವಕ್ಫ್‌ ಸಭೆ : ಶಾಸಕ ಗಣೇಶ್ ಆರೋಪ

Yatnal team to sow poisonous seeds in Waqf meeting: MLA Ganesh accused

ವಿಷಬೀಜ ಬಿತ್ತಲು ಯತ್ನಾಳ್ ತಂಡ ವಕ್ಫ್‌ ಸಭೆ : ಶಾಸಕ ಗಣೇಶ್ ಆರೋಪ

ಕಂಪ್ಲಿ 03  : ಸೋತ ಹತಾಸೆಯಿಂದ ರಾಜ್ಯದಲ್ಲಿ ಗೊಂದಲ ಸೃಷ್ಠಿ ಮಾಡಿ, ರಾಜಕೀಯ ಲಾಭಕೋಸ್ಕರ ಕಂಪ್ಲಿಯಲ್ಲಿ ವಕ್ಫ್‌ ಸಂಬಂಧಿಸಿದಂತೆ ಜನ ಜಾಗೃತಿ ಸಭೆ ಮಾಡಲು ಮುಂದಾಗಿರುವುದು ಬಸವನಗೌಡ ಪಾಟೀಲ್ ಯತ್ನಾಳ್‌ಗೆ ಶೋಭೆ ತರುವುದಿಲ್ಲ ಎಂದು ಶಾಸಕ ಜೆ.ಎನ್‌.ಗಣೇಶ್ ಹೇಳಿದರು. ಅವರು ಪಟ್ಟಣದ ಅತಿಥಿ ಗೃಹದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ರಾಜ್ಯದಲ್ಲಿ ಉಂಟಾಗಿರುವ ವಕ್ಫ್‌ ಸಂಬಂಧಿಸಿದ ರೈತರ ಹಾಗೂ ಜನರ ಸಮಸ್ಯೆ ಇತ್ಯಾರ್ಥ ಮಾಡಲು ಸಿಎಂ ಸಿದ್ದರಾಮಯ್ಯ ಸರ್ಕಾರ ಬದ್ಧವಾಗಿದೆ. ಆದಷ್ಟು ಬೇಗ ರೈತರ ಜಮೀನುಗಳಲ್ಲಿ ನಮೂದಿಸಿರುವ ವಕ್ಫ್‌ ಹೆಸರನ್ನು ತೆಗೆದು ಹಾಕಲು ಸೂಕ್ತಕ್ರಮವಹಿಸಿದೆ. ಆದರೆ, ರಾಜಕೀಯ ದುರುದ್ದೇಶದಿಂದ ಬಸವನಗೌಡ ಪಾಟೀಲ್ ಯತ್ನಾಳ್ ಹಾಗೂ ಇತರರು ಕಂಪ್ಲಿಯಲ್ಲಿ ಜ.4ರಂದು ಸಮಾವೇಶ ಮಾಡುತ್ತಿರುವುದು ಶೋಭೆಯಲ್ಲ. ಇಲ್ಲಿ ವಕ್ಪ್‌ ಸಂಬಂಧಿಸಿದ ಸಮಸ್ಯೆ ಇಲ್ಲ. ಆದರೂ, ಯಾತ್ನಾಳ್ ತಂಡವರು ಕಂಪ್ಲಿಯಲ್ಲಿ ವಿಷಬೀಜ ಬಿತ್ತಲು ಬರುತ್ತಿದ್ದಾರೆ. ವಕ್ಫ್‌ ಸಂಬಂಧಿಸಿದ ಅರ್ಜಿಗಳ ಸಂಪೂರ್ಣ ಮಾಹಿತಿಯನ್ನು ತಹಶೀಲ್ದಾರ್ ಮುಖಾಂತರ ತೆಗೆದುಕೊಂಡು, ಪರೀಶೀಲಿಸಿದ ಆದಷ್ಟು ಬೇಗ ಬದಲಾಯಿಸುವ ಕೆಲಸ ಮಾಡಲಾಗುವುದು. ಇಂತಹ ಗೊಂದಲದಿಂದ ಭಯದ ವಾತಾವರಣ ಸೃಷ್ಠಿಯಾಗುತ್ತದೆ. ಆದ್ದರಿಂದ ಇಂತಹ ಸಮಾವೇಶಗಳನ್ನು ನಿಲ್ಲಿಸಬೇಕು. ಇಲ್ಲಿ ಬಂದು ಯತ್ನಾಳ್ ಅವರು ಗೊಂದಲ ಮಾಡುತ್ತಿದ್ದಾರೆ. ಅವರಿಗೆ ಯಾವ ನೈತಿಕತೆ ಇಲ್ಲ. ಕಂಪ್ಲಿಯಲ್ಲಿ ಒಂದೇ ತಾಯಿಯ ಮಕ್ಕಳಂತೆ ಇದ್ದೀವಿ. ಆದರೆ, ಇಲ್ಲಿ ಗೊಂದಲದ ವಾತಾವರಣ ಮಾಡುವುದಕ್ಕೆ ಬಿಡಬಾರದು ಎಂದರು. ಈ ಸಂದರ್ಭದಲ್ಲಿ ಮುಸ್ಲಿಂ ಧರ್ಮಗುರು ಸೈಯದ್ ಕಮರ್ ಸಾಹೇಬ್, ಪುರಸಭೆ ಸದಸ್ಯರಾದ ಭಟ್ಟ ಪ್ರಸಾದ್, ಲೊಡ್ಡು ಹೊನ್ನೂರವಲಿ, ಕೆ.ಎಚ್‌.ಚಾಂದ್ ಭಾಷಾ, ಎಂ.ಉಸ್ಮಾನ್, ವೀರಾಂಜಿನೇಯ, ಜಿಲ್ಲಾ ವಕ್ಫ್‌ ಸಮಿತಿ ಸದಸ್ಯ ಹಬೀಬ್ ರೆಹಮಾನ್, ಮುಖಂಡರಾದ ಕೆ.ಷಣ್ಮುಕಪ್ಪ, ಬಿ.ನಾರಾಯಣಪ್ಪ, ಕರೇಕಲ್ ಮನೋಹರ, ಜಾಫರ್, ಪೇಂಟರ್ ಮಸ್ತಾನ್, ಅಕ್ಕಿ ಜಿಲಾನ್, ಅತ್ತಾವುಲ್ಲಾ ರೆಹಮಾನ್, ಮೌಲಾ ಸೇರಿದಂತೆ ಅನೇಕರಿದ್ದರು.