ಜೈವಿಕ ತಂತ್ರಜ್ಞಾನ, ಅಂಗಾಂಶ ಕೃಷಿ ವಿಜ್ಞಾನ ಮಹತ್ವ ಕುರಿತು ಕಾರ್ಯಾಗಾರ ಜೈವಿಕ ತಂತ್ರಜ್ಞಾನದ ಬಳಕೆ ಬಹು ಮುಖ್ಯ : ಕುಲಸಚಿವ ಮುರಗಿ
ಬಾಗಲಕೋಟೆ 16: ಪ್ರಸ್ತುತ ವಿಜ್ಞಾನ ವಿಷಯಗಳಲ್ಲಿನ ಅನೇಕ ಆವಿಷ್ಕಾರ ಹಾಗೂ ವಿವಿಧ ಕ್ಷೇತ್ರಗಳ ಸಂಶೋಧನೆಗಳಲ್ಲಿ ಜೈವಿಕ ತಂತ್ರಜ್ಞಾನದ ಪ್ರಾಮುಖ್ಯತೆ ಪಡೆದಿದೆ ಎಂದು ತೋಟಗಾರಿಕೆ ವಿವಿಯ ಕುಲಸಚಿವ ಮಹಾದೇವ ಮುರಗಿ ಹೇಳಿದರು.
ತೋವಿವಿಯ ಆವರಣದಲ್ಲಿರುವ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಜೈವಿಕ ತಂತ್ರಜ್ಞಾನ ಮತ್ತು ಅಂಗಾಂಶ ಕೃಷಿ ವಿಜ್ಞಾನ ಕುರಿತು ಹಮ್ಮಿಕೊಂಡ ವೈಜ್ಞಾನಿಕ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ಅಂಗಾಂಶ ಕೃಷಿ ವಿಜ್ಞಾನ ತೋಟಗಾರಿಕೆ ಕ್ಷೇತ್ರದ ಉತ್ತಮ ತಂತ್ರಜ್ಞಾನವಾಗಿದ್ದು, ಅನೇಕ ಬಗೆಯ ಸಸಿಗಳನ್ನು ಉತ್ಪಾದಿಸುವ ತಂತ್ರಜ್ಞಾನ ಇದಾಗಿದೆ. ಇಂತಹ ತಂತ್ರಜ್ಞಾನವನ್ನು ಗ್ರಾಮೀಣ ಭಾಗದ ಮಕ್ಕಳಲ್ಲಿ ಪರಿಚಯಿಸುವ ಕಾರ್ಯವನ್ನು ವಿಜ್ಞಾನ ಶಿಕ್ಷಕರು ಮಾಡಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಮ್. ವಿವೇಕಾನಂದ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಪ್ರಸ್ತುತ ವೈಜ್ಞಾನಿಕ ಬೆಳವಣಿಗೆಗಳ ಮಾಹಿತಿಯನ್ನು ಅವಶ್ಯವಾಗಿದ್ದು, ಇದರಿಂದ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಜೊತೆಗೆ ವಿಜ್ಞಾನ ಶಿಕ್ಷಕರು ಈ ತರಹದ ವೈಜ್ಞಾನಿಕ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸಬೇಕು ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ತೋವಿವಿಯ ಸಹಾಯಕ ಪ್ರಾದ್ಯಾಪಕ ಡಾ.ಮಹಾಂತೇಶ ನಾಯಕ ಅವರು ಜೈವಿಕ ವಿಜ್ಞಾನವು ಪ್ರಸ್ತುತ ವೈಜ್ಞಾನಿಕ ಬೆಳವಣಿಗೆಯಲ್ಲಿ ವಹಿಸುತ್ತಿರುವಂತಹ ಮಹತ್ತರ ಪಾತ್ರವನ್ನು ವಿವರವಾಗಿ ತಿಳಿಸಿಕೊಟ್ಟರು. ಇನ್ನೋರ್ವ ಸಹಾಯಕ ಪ್ರಾದ್ಯಾಪಕ ಡಾ.ಸರ್ವಮಂಗಳ ಚೋಳಿನ ಬೆಳೆ ಸುಧಾರಣೆಯಲ್ಲಿ ಅನುವಂಶಿಕತೆ, ವಿಕಾಸ ಮತ್ತು ಆಣ್ವಿಕ ಗುರುತುಗಳ ಬಗ್ಗೆ ಮಾಹಿತಿಯನ್ನು ಶಿಕ್ಷಕರಿಗೆ ನೀಡಿದರು. ಡಾ.ಸಯ್ಯದ ವಾಜೀದ ಮುಲ್ಲಾ, ಶಿಕ್ಷಕರಿಗಾಗಿ ಜೈವಿಕ ತಂತ್ರಜ್ಞಾನ ಹಾಗೂ ಅಂಗಾಂಶ ಕೃಷಿ ವಿಜ್ಞಾನದ ಪ್ರಾತ್ಯಕ್ಷಿಕೆಗಳನ್ನು ಪ್ರಯೋಗಗಳ ಮೂಲಕ ವಿವರವಾಗಿ ತಿಳಿಸಿದರು.
ಪ್ರಾರಂಭದಲ್ಲಿ ತೋವಿವಿಯ ಪ್ರಾದ್ಯಾಪಕ ಡಾ.ವಸಂತ ಗಾಣಿಗೇರ ಮಾತನಾಡಿ ವಿಜ್ಞಾನಕ್ಕೆ ಸಂಬಂಧಿಸಿದ ಅನೇಕ ಹೊರ ಮತ್ತು ಒಳಾಂಗಣ ಪ್ರಾತ್ಯಕ್ಷಿಕೆಗಳನ್ನು ಉಪ ಪ್ರಾದೇಶಿಕ ವಿಜ್ಞಾನ ಕೆಂದ್ರದಲ್ಲಿ ಅನುಷ್ಠಾನಗೊಳಿಸಿದ್ದು, ಇದರ ಸದುಪಯೋಗವನ್ನು ಗ್ರಾಮೀಣ ವಿದ್ಯಾರ್ಥಿಗಳು ಬಳಸಿಕೊಳ್ಳುವಂತಾಗಬೇಕು. ವಿಜ್ಞಾನಕ್ಕೆ ಸಂಬಂಧಿಸಿದ ನೂತನ ತಣತ್ರಜ್ಞಾನಗಳ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅದರ ಸಂಪೂರ್ಣ ಮಾಹಿತಿ ಪಡೆದುಕೊಂಡು ಸದುಪಯೋಗ ಪಡಿಸಿಕೊಳ್ಳಲು ತಿಳಿಸಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಮ್.ಎಸ್.ಬಡದಾನಿ, ವಿಜ್ಞಾನ ವಿಷಯ ಪರೀವೀಕ್ಷಕ ಎಮ್.ಎಸ್.ನ್ಯಾಮಗೌಡ, ಗಣಿತ ವಿಷಯ ಪರೀವೀಕ್ಷಕ ಎಸ್.ಎಸ್.ಹಳವರ ಸೇರಿದಂತೆ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಆಸೀಫ ಬಾಗವಾನ ವಂಧಿಸಿದತೆ, ಈರಣ್ಣಾ ಬುಳ್ಳಾ ಕಾರ್ಯಕ್ರಮ ನಿರೂಪಿಸಿದರು. ಬಾಗಲಕೋಟೆ ಜಿಲ್ಲೆಯ ಒಟ್ಟು 90 ಶಿಕ್ಷಕರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.