ಜೀತ ಪದ್ದತಿ ನಿರ್ಮೂಲನೆಗೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿ; ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ
ಕಾರವಾರ 20 : ಜಿಲ್ಲೆಯ ಯಾವುದೇ ಭಾಗದಲ್ಲಿ ಜೀತ ಪದ್ದತಿ ಕಂಡು ಬರದಂತೆ ಎಲ್ಲಾ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಹೆಚ್ಚಿನ ತಪಾಸಣೆಗಳನ್ನು ಕೈಗೊಳ್ಳುವ ಮೂಲಕ, ಜೀತ ಕಾರ್ಮಿಕ ಪದ್ದತಿ ನಿರ್ಮೂಲನೆಗೆ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ನಿರ್ದೇಶನ ನೀಡಿದರು.ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಜಿಲ್ಲಾಡಳಿತ, ಹಾಗೂ ಕಾರ್ಮಿಕ ಇಲಾಖೆ ಸಹಯೋಗದಲ್ಲಿ , ಜೀತ ಪದ್ದತಿ ನಿರ್ಮೂಲನಾ ದಿನಾಚರಣೆಯ ಪ್ರಯುಕ್ತ ನಡೆದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಜೀತ ಪದ್ದತಿಗೆ ಒಳಗಾಗಿರುವ ವ್ಯಕ್ತಿಗೆ ತಾನು ಇದಕ್ಕೆ ಬಲಿಯಾಗಿರುವ ಕುರಿತು ಅರಿವು ಕೂಡಾ ಇರುವುದಿಲ್ಲ ಆದ್ದರಿಂದ ಜೀತ ಪದ್ದತಿ ಕುರಿತಂತೆ ಜಿಲ್ಲೆಯಾದ್ಯಂತ ಜಾಗೃತಿ ಮತ್ತು ಅರಿವು ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಜೀತ ಪದ್ದತಿಗೆ ಒಳಗಾಗಿರುವವರನ್ನು ಗುರುತಿಸಿ, ರಕ್ಷಿಸಿ ಅವರಿಗೆ ಪುನರ್ವಸತಿ ಸೌಲಭ್ಯಗಳನ್ನು ಒದಗಿಸಬೇಕು ಎಂದರು.ಜೀತ ಪದ್ದತಿಯಿಂದ ಮುಕ್ತರಾದವರಿಗೆ ಆರ್ಥಿಕ ನೆರವು, ವಸತಿ ನೆರವು , ಕೌಶಲ್ಯಾಭಿವೃದ್ದಿ ತರಬೇತಿ, ಆರೋಗ್ಯ ಸೌಲಭ್ಯಗಳು ಮತ್ತು ಅವರ ಮಕ್ಕಳಿಗೆ ಶಿಕ್ಷಣಕ್ಕೆ ಅಗತ್ಯವಾದ ವ್ಯವಸ್ಥೆಗಳನ್ನು ಮಾಡಬೇಕು. ಜೀತ ಪದ್ದತಿಗೆ ಒಳಪಡಿಸುವವರಿಗೆ ಕಾರ್ಮಿಕ ಕಾಯ್ದೆ, ಕನಿಷ್ಠ ವೇತನ ಕಾಯ್ದೆ, ಬಾಲ ಕಾರ್ಮಿಕ ನಿಷೇಧ ಕಾಯ್ದೆ, ಪ.ಜಾತಿ ಪಂಗಡ ದೌರ್ಜನ್ಯ ಕಾಯ್ದೆ ಸೇರಿದಂತೆ ಹಲವು ಕಾಯ್ದೆಗಳ ಅನ್ವಯ ಪ್ರಕರಣ ದಾಖಲಿಸುವ ಅವಕಾಶಗಳಿದ್ದು, ಈ ಮೂಲಕ ಅವರಿಗೆ ಗರಿಷ್ಠ ಶಿಕ್ಷೆಯಾಗುವ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದರು.
ಜೀತ ಪದ್ದತಿ ತಡೆ ಕುರಿತಂತೆ ಪ್ರತಿಜ್ಞಾ ವಿಧಿ ಭೋಧಿಸಿದ, ಸದಸ್ಯ ಕಾರ್ಯದರ್ಶಿ ನ್ಯಾ.ದಿವ್ಯಶ್ರೀ ಮಾತನಾಡಿ, ಅಮಾಯಕ ವ್ಯಕ್ತಿಗಳ ಅನಕ್ಷರತೆ, ಬಡತನ, ನಿರುದ್ಯೋಗ ಸಮಸ್ಯೆಯನ್ನು ದುರುಪಯೋಗ ಪಡೆದುಕೊಂಡು ಜೀತ ಪದ್ದತಿಗೆ ಒಳಪಡಿಸಲಾಗುತ್ತದೆ. ಪ್ರಸ್ತುತ ಜೀತ ಪದ್ದತಿಯ ಆಯಾಮ ಬದಲಾಗಿದ್ದು, ಹೊಸ ರೂಪ ಪಡೆದು ಸಂಘಟಿತ ಅಪರಾಧವಾಗಿ ಮಾರ್ಪಟಟಿದೆ. ಬಲಹೀನರನ್ನು ಸಾಲದ ಸುಳಿಗೆ ಸಿಲುಕಿಸಿ, ಈ ವ್ಯವಸ್ಥೆಗೆ ದೂಡಿ ಲಾಭ ಮಾಡಿಕೊಳ್ಳುತ್ತಿದ್ದು, ಮಾನವ ಕಳ್ಳ ಸಾಗಾಣಿಕೆಗೆ ಕೂಡಾ ಇದು ಕಾರಣವಾಗಿದೆ. ಆದ್ದರಿಂದ ಎಲ್ಲ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ನಡೆಯುವ ಜೀತ ಪದ್ದತಿಯ ಬಗ್ಗೆ ಪರೀಶೀಲಿಸಿ, ಇದನ್ನು ತಡೆಯಲು ಆತ್ಮ ಸಾಕ್ಷಿಯಾಗಿ, ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.ಕಾರ್ಯಾಗಾರದಲ್ಲಿ ಜೀತ ಪದ್ದತಿಯ ಕುರಿತಂತೆ ತರಬೇತಿ ನೀಡಲು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ, ಮಾನವ ಕಳ್ಳ ಸಾಗಾಣಿಕೆ ಮತ್ತು ಜೀತ ಕಾರ್ಮಿಕ ಪದ್ದತಿ ಕುರಿತ ರಾಜ್ಯ ಉನ್ನತಾಧಿಕಾರ ಸಮಿತಿಯ ಸದಸ್ಯ ವಿಲಿಯಂ ಕ್ರಿಸ್ಟೋಫರ್ ಮಾತನಾಡಿ, ಜೀತ ಪದ್ದತಿಯು ರಾಜ್ಯದಲ್ಲಿ ಹಲವೆಡೆ ಈಗಲೂ ಜೀವಂತವಾಗಿದೆ, ಜೀತ ಪದ್ದತಿಯ ಸ್ವರೂಪದ ಬಗ್ಗೆ ಅಧಿಕಾರಿಗಳು ವಿವರವಾಗಿ ತಿಳಿಸಿದುಕೊಳ್ಳಬೇಕು. ಇದರಲ್ಲಿ ಜನರ ಶೋಷಣೆ ನಡೆಯುತ್ತಿದ್ದು, ದುರ್ಬಲ ವರ್ಗದವರು ಆರ್ಥಿಕ ಮತ್ತು ದೈಹಿಕ ಶೋಷಣೆಗೆ ಒಳಗಾಗುತ್ತಿದ್ದಾರೆ.
ಇವರನ್ನು ಈ ಶೋಷಣೆಯಿಂದ ಮುಕ್ತಗೊಳಿಸಿ, ತಪ್ಪಿತಸ್ಥರ ವಿರುದ್ದ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂದರು.ರಾಜ್ಯದಲ್ಲಿ ಜೀತ ಪದ್ದತಿಯನ್ನು ನಿಯಂತ್ರಣಗೊಳಿಸಿ ನಿರ್ಮೂಲನೆ ಮಾಡಲು, 15 ಇಲಾಖೆಗಳ 52 ಹುದ್ದೆಗಳ ಅಧಿಕಾರಿಗಳನ್ನು, ಜೀತ ಕಾರ್ಮಿಕ ಪ್ರಕರಣಗಳನ್ನು ವರದಿ ಮಾಡಲು ಮತ್ತು ತಡೆಗಟ್ಟಲು ಜೀತ ಕಾರ್ಮಿಕ ಪದ್ದತಿ ನಿಷೇಧ ಅಧಿಕಾರಿಗಳು ಎಂದು ಅಧಿಸೂಚನೆ ಹೊರಡಿಸಿದ್ದು, ಜೀತ ಕಾರ್ಮಿಕರನ್ನು ಗುರುತಿಸಿ ಅವರನ್ನು ಬಿಡುಗಡೆ ಮಾಡುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ ಎಂದರು.ಕಾರ್ಯಾಗಾರದಲ್ಲಿ ಕಾರವಾರ ಉಪ ವಿಭಾಗಾಧಿಕಾರಿ ಕನಿಷ್ಕ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಪ್ರಕಾಶ್ ಹಾಲಮ್ಮನವರ್, ಜಿಲ್ಲೆಯ ಎಲ್ಲಾ ತಾಲೂಕುಗಳ ತಹಸೀಲ್ದಾರ್‌ಗಳು, ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.