300 ಕೋಟಿಗೂ ಅಧಿಕ ವೆಚ್ಚದ ಕಾಮಗಾರಿ : ಶಾಸಕ ಸೈಲ್
ಕಾರವಾರ 28: ಕಾರವಾರಹಿಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಒಂದುವರೆ ವರ್ಷದಲ್ಲಿ ಸುಮಾರು 300 ಕೋಟಿ ರೂ ಅಧಿಕ ವೆಚ್ಚದ ಕಾಮಗಾರಿಗಳನ್ನು ಮಾಡಲಾಗುತ್ತಿದ್ದು, ಎಷ್ಟು ಕಾಮಗಾರಿ ಪೂರ್ಣಗೊಂಡಿವೆ, ಪ್ರಗತಿಯಲ್ಲಿವೆ ಎಂಬುದರ ಬಗ್ಗೆ ಮಾಹಿತಿ ನೀಡಿ, ಎಲ್ಲಾ ಕಾಮಗಾರಿಗಳ ನಾಮಫಲಕವನ್ನು ಕಡ್ಡಾಯವಾಗಿ ಅಳವಡಿಸುವಂತೆ ಹಾಗೂ ಮುಕ್ತಾಯವಾಗಿರುವ ಕಾಮಗಾರಿಗಳ ಉದ್ಘಾಟನೆಗೆ ಶೀಘ್ರವೇ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಮಾರ್ಕೆಟಿಂಗ್ ಕನ್ಸಲ್ಟೆಂಟ್ ಮತ್ತು ಏಜೆನ್ಸಿಸ್ ಅಧ್ಯಕ್ಷರು ಹಾಗೂ ಕಾರವಾರ-ಅಂಕೋಲಾ ಶಾಸಕ ಸತೀಶ್ ಸೈಲ್ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಮಂಗಳವಾರ ತಾಲೂಕು ಪಂಚಾಯತ ಸಭಾಭವನದಲ್ಲಿ ನಡೆದ ತಾಲೂಕು ಪಂಚಾಯತ ಕೆ.ಡಿ.ಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಜಿಲ್ಲೆಯ ಎಲ್ಲಾ ಅರ್ಹ ಫಲಾನುಭವಿಗಳಿಗೆ ಸಮರ್ಕವಾಗಿ ತಲುಪಿಸಬೇಕು. ಎಲ್ಲಾ ಸರ್ಕಾರಿ ಕಚೇರಿಯ ಸೂಚನ ಫಲಕದಲ್ಲಿ ಗ್ಯಾರಂಟಿ ಯೋಜನೆಗಳ ಕುರಿತು ಮಾಹಿತಿಯನ್ನು ಕಡ್ಡಾಯವಾಗಿ ಅಳವಡಿಸಿ, ಸರಕಾರದ ಕೆಲಸವನ್ನು ದೇವರ ಕೆಲಸವೆಂದು ಭಾವಿಸಿ ಕಾರ್ಯನಿರ್ವಹಿಸಿ, ಕೆಲಸ ಮಾಡಲು ಯಾವುದೇ ಅಡತಡೆ ಉಂಟು ಮಾಡಿದಲ್ಲಿ ಅಂತವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಿ ಎಂದರು.
ಕದ್ರಾ ಮತ್ತು ಹಳಗಾ ಪ್ರಾಧಮಿಕ ಆರೋಗ್ಯ ಕೇಂದ್ರಗಳಲ್ಲಿ ಅವಶ್ಯಕವಿರುವ 5 ಲ್ಯಾಬ್ ಟೆಕ್ನಿಷಿಯನ್ ಹಾಗೂ 23 ಕಿರಿಯ ಪುರುಷ ಆರೋಗ್ಯ ಸಹಾಯಕ ಹುದ್ದೆಗಳು ಖಾಲಿ ಇರುವ ಬಗ್ಗೆ ಆರೋಗ್ಯ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು ಶೀಘ್ರವೇ ಭರ್ತಿ ಮಾಡುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸೂಚನೆ ನೀಡಿದರು.
ಕೆರವಡಿ ಸೇತುವೆ ಕಾಮಗಾರಿಗೆ ಹೆಚ್ಚುವರಿಯಾಗಿ 20 ಕೋಟಿ ರೂ ಅನುಧಾನ ಬಿಡುಗಡೆ ಮಾಡಲಾಡಗಿದ್ದು, ಕಾಮಗಾರಿಯನ್ನು ಮೇ ಅಂತ್ಯದಲ್ಲಿ ಪೂರ್ಣಗೊಳಿಸುವಂತೆ ಕೆ.ಆರ್.ಐ.ಡಿ.ಎಲ್ ಅಧಿಕಾರಿಗಳಿಗೆ ಸೂಚಿಸಿದರು. ಮಂಜುಗುಣಿ ಸೇತುವೆ ಶೀಘ್ರದಲ್ಲಿ ಪೂರ್ಣಗೊಳಿಸಲಾಗುವುದು ಎಂದ ಅವರು ಜಿಲ್ಲೆಯಲ್ಲಿ ಹೊಸದಾಗಿ 15 ಸೇತುವೆಗಳ ಕಾಮಗಾರಿಯನ್ನು ಮುಂದಿನ ದಿನಗಳಲ್ಲಿ ಮಾಡಲು ತಿರ್ಮಾನಿಸಲಾಗಿದ್ದು ಇದರಿಂದ ವಾಯು ಮಾಲಿನ್ಯ ಇಳಿಕೆ, ಇಂಧನ, ಸಮಯದ ಉಳಿತಾಯವಾಗಲಿದೆ ಎಂದರು.
ಬೇಸಿಗೆಕಾಲ ಸಮೀಪಿಸುತ್ತಿದ್ದು ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಮುನ್ನವೇ ಸೂಕ್ತವಾದ ನೀರಿನ ಸೌಲಭ್ಯ ಒದಗಿಸಿ ನೀರಿನ ಸಮಸ್ಯೆ ನೀಗಿಸಲು ಅಣಕೋಣ ಮತ್ತು ಭೀಮ್‌ಕೋಲ್ ಡ್ಯಾಂನಿಂದ ನೀರನ್ನು ಬಳಸಿಕೊಳ್ಳುವಂತೆ ಸೂಚಿಸಿದರು. ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ಬಳಕೆಗೆ ಅವಕಾಶ ನೀಡಿ ಕೃಷಿ ಸಂಬಂಧಿಸಿ ಯಂತ್ರೋಪಕರಣಗಳನ್ನು ಇಡುವಂತೆ ತಿಳಿಸಿದರು.
ಸಭೆಯಲ್ಲ್ಲಿ ತಾಲೂಕು ಪಂಚಾಯತ ಆಡಳಿತ ಅಧಿಕಾರಿ ಸೋಮಶೇಖರ ಮೇಸ್ತಾ, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ವೀರನಗೌಡ ಪಿ. ಏನಗಗೌಡರ, ತಹಶಿಲ್ದಾರ ನಿಶ್ಚಲ್ ನರೋನಾ, ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ರಾಜೇಂದ್ರ ರಾಣೆ, ನಗರ ಸಭೆಯ ಪೌರಯುಕ್ತ ಜಗದೀಶ್ ಹುಲಗಜ್ಜಿ, ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.