ಮಹಿಳೆ ಕುಟುಂಬ ಜೀವನದ ಆಧಾರ ಸ್ತಂಭ
ಧಾರವಾಡ 23 : ಮಹಿಳೆ ಕುಟುಂಬ ಜೀವನದ ಆಧಾರ ಸ್ತಂಭ. ಕುಟುಂಬದ ಪ್ರೇರಕ ಶಕ್ತಿಯೇ ಮಹಿಳೆ ಎಂದು ವಿಶ್ರಾಂತ ಹೆಚ್ಚುವರಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ. ವ್ಹಿ. ಮಂಜುನಾಥ ಅಭಿಪ್ರಾಯ ಪಟ್ಟರು. ಕರ್ನಾಟಕ ವಿದ್ಯಾವರ್ಧಕ ಸಂಘವು ಲೀಲಾ ಬಾಪುಗೌಡ ಪಾಟೀಲ ದತ್ತಿ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಕೌಟುಂಬಿಕ ಜೀವನದಲ್ಲಿ ಹೆಣ್ಣು ಮಕ್ಕಳ ಪಾತ್ರ ವಿಷಯದ ಕುರಿತು ಮಾತ ನಾಡಿದರು.
ಕುಟುಂಬದಲ್ಲಿ ಮಕ್ಕಳ ಉಜ್ವಲ ಭವಿಷ್ಯ ನಿರ್ಮಿಸುವಲ್ಲಿ ಹೆಣ್ಣು ಮಕ್ಕಳ ಪಾತ್ರದೊಡ್ಡದಿದೆ. ಹೆಣ್ಣು ಮಕ್ಕಳು ತಾಯಿಯಾಗಿ ಮಡದಿಯಾಗಿ ತಂಗಿಯಾಗಿ ತನ್ನ ಕರ್ತವ್ಯವನ್ನು ಬದ್ಧತೆಯಿಂದ ನಿರ್ವಹಿಸುತ್ತಾಳೆ. ಕುಟುಂಬ ಜೀವನದಲ್ಲಿ ಸಾಮರಸ್ಯದಕೊಂಡಿಯಾಗಿ ಕುಟುಂಬದ ನೆಮ್ಮದಿಗೆ ಕಾರಣಳಾಗಿದ್ದಾಳೆ. ಮಹಿಳೆಯರಲ್ಲಿರುವ ತ್ಯಾಗ ಸಹನಶೀಲತೆ ಗುಣಗಳಿಂದಲೆ ನಮ್ಮ ನದಿಗಳಿಗೆ ಹೆಣ್ಣು ಮಕ್ಕಳ ಹೆಸರನ್ನಿಡಲಾಗಿದೆ.
ಹರಿಯುವ ನದಿ ಪ್ರಾಣಿ ಪಕ್ಷಿಗಳಿಂದಲೂ ನಾವು ಅನೇಕ ವಿಚಾರಗಳನ್ನು ತಿಳಿದುಕೊಳ್ಳಬೇಕು ಕಲಿಯಬೇಕು ಮತ್ತು ಆಧುನಿಕತೆಯ ಭರಾಟೆ ಜೀವನದಲ್ಲಿ ನಮ್ಮ ಕೌಟುಂಬಿಕ ಜೀವನದಲ್ಲಿ ಸಾಮರಸ್ಯ ಬೆಸೆದುಕೊಳ್ಳಬೇಕಿದೆ. ಬಾಲ್ಯದಿಂದಲೇ ಹೆಣ್ಣು ಮಕ್ಕಳಿಗೆ ಕೌಟುಂಬಿಕ ಮೌಲ್ಯಗಳನ್ನು ಬೆಳೆಸಲು ಪಾಲಕರು ಬದ್ಧತೆ ತೋರಬೇಕಾಗಿದೆ. ಕುಟುಂಬದಲ್ಲಿ ಹೊಂದಾಣಿಕೆ ಮಾಡಿಕೊಂಡು ಕೂಡಿಬಾಳುವ ಮೌಲಿಕ ಅಂಶಗಳನ್ನು ಹೆಣ್ಣು ಮಕ್ಕಳಿಗೆ ಕಲಿಸಬೇಕು.ಸ್ವೇಚ್ಛಾಚಾರದ ಜೀವನ ಸಲ್ಲದು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಡೈಟ ವಿಶ್ರಾಂತ ಪ್ರಾಚಾರ್ಯರಾದ ನಿಂಗಮ್ಮ ಸಾಹುಕಾರ ಮಾತನಾಡಿ ಇಂದಿನ ಸಂಕೀರ್ಣ ಪರಿಸ್ಥಿತಿಯಲ್ಲಿ ಮಕ್ಕಳಲ್ಲಿ ನೈತಿಕ ಮೌಲ್ಯ ಹಾಗೂ ಜೀವನ ಮೌಲ್ಯಗಳ ಕೊರತೆ ಎದ್ದು ಕಾಣುತ್ತಿದೆ. ಕೌಟುಂಬಿಕ ಜೀವನದಲ್ಲಿ ಸಂಬಂಧಗಳನ್ನು ಗಟ್ಟಿಗೊಳಿಸುವ ಉದಾತ್ತ ಮೌಲ್ಯಗಳನ್ನು ತಂದೆ-ತಾಯಿತಮ್ಮ ಮಕ್ಕಳಿಗೆ ಕಲಿಸಬೇಕಿದೆ. ದಿ. ಲೀಲಾ ಪಾಟೀಲರು ತಮ್ಮ ಮಕ್ಕಳಿಗೆ ಎಳೆಯವರಿದ್ದಾಗ ಉತ್ತಮ ಶಿಕ್ಷಣ ಹಾಗೂ ಸಂಸ್ಕಾರ ನೀಡಿದ್ದರಿಂದ ಇಂದು ಉನ್ನತ ಸ್ಥಾನದಲ್ಲಿದ್ದಾರೆ. ಮಹಿಳೆ ಎಂದೂ ಅಬಲೆಯಲ್ಲ ಸಬಲೆಯಾಗಿಯೇ ಇದ್ದಾಳೆ ಎಂದು ಹೇಳಿದರು. ದತ್ತಿನಿಗಳಾದ ಬಾಪುಗೌಡ ಡಿ. ಪಾಟೀಲ ದತ್ತಿ ಆಶ್ರಯವನ್ನು ಕುರಿತು ಮಾತನಾಡಿದರು. ವೀರಣ್ಣ ಒಡ್ಡೀನ ಸ್ವಾಗತಿಸಿದರು. ಸತೀಶ ತುರಮರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಕುಂಬಿ ನಿರೂಪಿಸಿದರು. ಗುರು ಹಿರೇಮಠ ವಂದಿಸಿದರು.
ಕಾರ್ಯಕ್ರಮದಲ್ಲಿ ಬಸವಪ್ರಭು ಹೊಸಕೇರಿ ವೀರಣ್ಣಒಡ್ಡೀನ ಶಿವಾನಂದ ಭಾವಿಕಟ್ಟಿ ಶ್ರೀನಿವಾಸ ವಾಡಪ್ಪಿ ಶಶಿಧರ ತೋಡಕರ ರಾಜೇಂದ್ರ ಸಾವಳಗಿ ಬಿ.ಎಸ್. ಶಿರೋಳ ಡಾ. ಮಲ್ಲಿಕಾರ್ಜುನ ಪಾಟೀಲ ಚಿಕ್ಕೋಡಿ ಎಂ.ಎಂ.ಚಿಕ್ಕಮಠ ಸೇರಿದಂತೆ ಬಿ.ಡಿ. ಪಾಟೀಲರ ಪರಿವಾರದವರು ಮಿತ್ರರು ಮುಂತಾದವರಿದ್ದರು.