ಜೀವನದಲ್ಲಿ ಸೋಲು-ಗೆಲುವು ಸಹಜ; ಬಾಲಾಜಿ ಪ್ರಭು
ವಿಜಯಪುರ, 06; ಕ್ರೀಡೆ ಕೇವಲ ಮನರಂಜನೆಗಾಗಿ ಮಾತ್ರವಲ್ಲ, ಉತ್ತಮ ಆರೋಗ್ಯವನ್ನು ಬೆಳೆಸಿಕೊಳ್ಳಲು ಸಹಾಯಕವಾಗಿದೆ ಎಂದು ಬೆಂಗಳೂರಿನ ಅಂತರಾಷ್ಟ್ರೀಯ ಕ್ರೀಡಾಪಟು ಹಾಗೂ ರಾಜ್ಯ ಸಂಪನ್ಮೂಲ ವ್ಯಕ್ತಿ ಬಾಲಾಜಿ ಪ್ರಭು ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ಅಧ್ಯಯನ ಮತ್ತು ಕ್ರೀಡಾ ವಿಜ್ಞಾನ ವಿಭಾಗ ಮತ್ತು ದೈಹಿಕ ನಿರ್ದೇಶನಾಲಯ ಇವರ ಸಂಯುಕ್ತ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ವಾಲಿಬಾಲ್ ಕ್ರೀಡೆಯ ಕುರಿತು ಮೂರು ದಿನಗಳ ಕಾರ್ಯಾಗಾರ ಮತ್ತು ನಿರ್ಣಾಯಕರ ಪರೀಕ್ಷೆ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಜೀವನದಲ್ಲಿ ಸೋಲು-ಗೆಲುವು ಸಹಜ. ಸೋಲು ನಮ್ಮನ್ನು ಹೆಚ್ಚು ದೃಢವಾಗಿ ನಿಲ್ಲಿಸಲಿದೆ, ಗೆಲುವು ನಮ್ಮನ್ನು ಮತ್ತಷ್ಟು ಮುನ್ನಡೆಸಲಿದೆ. ಕ್ರೀಡೆಯ ಒಡನಾಟ ನಮಗೆ ಈ ಸಮತೋಲನ ಕಲಿಸಲು ಸಹಾಯ ಮಾಡುತ್ತದೆ. ಆದ್ದರಿಂದ, ಪ್ರತಿಯೊಬ್ಬರೂ ತಮ್ಮ ದಿನಚರಿಯಲ್ಲಿ ಕೆಲವು ಕ್ರೀಡಾ ಚಟುವಟಿಕೆಗಳಲ್ಲಿ ತೋಡಗಿಸಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಮಹಿಳಾ ವಿವಿಯ ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಂ.ಚಂದ್ರಶೇಖರ ಮಾತನಾಡಿ, ಕ್ರೀಡೆಯು ಕೇವಲ ಸ್ಪರ್ಧೆಯಾಗಿರದೆ, ಇದು ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಉತ್ತಮಗೊಳಿಸುವ ಶ್ರೇಷ್ಠ ಸಾಧನವಾಗಿದೆ. ಸೋಲು ಮತ್ತು ಗೆಲುವು ಜೀವನದ ಅವಿಭಾಜ್ಯ ಅಂಗಗಳಾಗಿದ್ದು, ಇವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಕ್ರೀಡೆಯ ಮೂಲಕ ಬೆಳೆಯುತ್ತದೆ. ಪ್ರತಿದಿನದ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದು ಒಂದು ಭಾಗ್ಯವಾಗಿದ್ದು, ಇದರಿಂದ ಆರೋಗ್ಯಕರ ಹಾಗೂ ಶಕ್ತಿಯುತ ಜೀವನವನ್ನು ರೂಪಿಸಬಹುದು ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, ದೈಹಿಕ ಶಿಕ್ಷಣ ಅಧ್ಯಯನ ಮತ್ತು ಕ್ರೀಡಾ ವಿಜ್ಞಾನ ವಿಭಾಗ ಹಾಗೂ ಕ್ರೀಡಾ ನಿರ್ದೇಶನಾಲಯವು ವಿಶ್ವವಿದ್ಯಾಲಯದಲ್ಲಿ ವರ್ಷಪೂರ್ತಿ ವಿಭಿನ್ನ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸುತ್ತವೆ. ಇವು ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಸುಸ್ಥಿತಿಗೆ ಮಹತ್ವದ ಪಾತ್ರವಹಿಸುತ್ತವೆ. ಈ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಕ್ರೀಡಾ ಕ್ಷೇತ್ರದಲ್ಲಿ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಲು ಅವಕಾಶವನ್ನು ಪಡೆಯುತ್ತಾರೆ ಎಂದರು.
ಕಾರ್ಯಾಗಾರದಲ್ಲಿ ಬೆಂಗಳೂರಿನ ವಾಲಿಬಾಲ್ ತರಬೇತಿದಾರ ರಾಜೇಶ್ ಪತ್ತಾರ ಹಾಗೂ ಕರ್ನಾಟಕ ವಾಲಿಬಾಲ್ ಅಸೋಸಿಯೇಷನ್ ಮತ್ತು ತೀರ್ುಗಾರರ ಮಂಡಳಿಯ ಸಂಚಾಲಕ ಕೆ.ವೆಂಕಟೇಶ್‌ಗೌಡ, ಪ್ರೊ.ಡಿ.ಎಂ.ಜ್ಯೋತಿ, ಪ್ರೊ.ರಾಜಕುಮಾರ ಮಾಲಿಪಾಟೀಲ, ಪ್ರೊ. ಶ್ರೀನಿವಾಸ, ಡಾ.ಕಿರಣ ಜಿ.ಎನ್, ಡಾಅಶ್ವಿನಿ ಕೆ, ಎನ್, ಸಹ ನಿರ್ದೇಶಕ ವಿಶ್ವನಾಥ ನಡಕಟ್ಟಿ ಮತ್ತು ಶಿಕ್ಷಣ ನಿಕಾಯ ಡೀನ ಪ್ರೊ.ಸಕ್ಪಾಲ್ ಹೂವಣ್ಣ ಉಪಸ್ಥಿತರಿದ್ದರು.
ಪ್ರೊ.ಜ್ಯೋತಿ ಉಪಾದ್ಯ ಸ್ವಾಗತಿಸಿದರು. ಜಬಿನತಾಜ ಜಿಗಳೂರ ನಿರೂಪಿಸಿದರು. ನಿರ್ದೇಶನಾಲಯದ ನಿರ್ದೇಶಕ ಪ್ರೊ.ಹನುಮಂತಯ್ಯ ಪೂಜಾರಿ ವಂದಿಸಿದರು.