ನಾವೆಲ್ಲರೂ ಮಾತೃ ಭಾಷೆಯಲ್ಲಿ ಮಾತನಾಡಬೇಕು - ಬಸವರಾಜ ರಾಯರೆಡ್ಡಿ
ಕೊಪ್ಪಳ 30: ನಮ್ಮ ಭಾಷೆ ಸಂಸ್ಕೃತಿ ಮರೆತು ಯೂರೋಪಿಯನ್ ಭಾಷೆ ಮಾತನಾಡುವುದು ತಪ್ಪು. ನಮ್ಮ ಮಾತೃಭಾಷೆ ಕನ್ನಡದಲ್ಲಿ ನಾವೆಲ್ಲರೂ ಮಾತನಾಡಬೇಕು. ನಮ್ಮ ಪಕ್ಕದ ತಮಿಳು ಸಂಸ್ಕೃತಿ ನೋಡಿ ಅವರು ಹೇಗೆ ತಮ್ಮ ಭಾಷೆಯಲ್ಲಿ ಮಾತನಾಡುತ್ತಾರೆ ಎಂದು ಮುಖ್ಯ ಮಂತ್ರಿಗಳ ಆರ್ಥಿಕ ಸಲಹೆಗಾರರು ಹಾಗೂ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಸವರಾಜ ರಾಯರೆಡ್ಡಿ ಹೇಳಿದರು.
ಅವರು ಶನಿವಾರ ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ಕೊಪ್ಪಳ ವಿಶ್ವವಿದ್ಯಾಲಯದ ಕರ್ನಾಟಕ ಸುವರ್ಣ ಸಂಭ್ರಮ ಕನ್ನಡ ರಾಜೋತ್ಸವ ಹಾಗೂ ಕನ್ನಡ ಸಂಘ ಉದ್ಘಾಟನಾ ಸಮಾರಂಭವನ್ನು ನೆರವೇರಿಸಿ ಮಾತನಾಡಿದರು.ಇತ್ತಿಚೆಗೆ ನಮ್ಮಲ್ಲಿ ಕನ್ನಡ ಭಾಷೆ ಮಾತನಾಡಿದರೆ ನಮಗೆ ಗೌರವ ಸಿಗಲ್ಲ. ಇಂಗ್ಲಿಷನಲ್ಲಿ ಮಾತನಾಡಿದರೆ ಗೌರವ ಹೆಚ್ಚುತ್ತದೆ ಎನ್ನುವ ಮಾನಸಿಕ ರೋಗದ ಗೀಳು ನಮಗೆ ಬಂದಿದೆ. ವಿಶ್ವವಿದ್ಯಾಲಯಗಳು ಮಾತೃಭಾಷೆಯಲ್ಲಿಯೆ ಪಠ್ಯಕ್ರಮಗಳನ್ನು ರಚಿಸಿ ಮಕ್ಕಳಿಗೆ ಕಲಿಸುವಂತಾಗಬೇಕು ಮತ್ತು ಈ ಕುರಿತು ವಿಶ್ವವಿದ್ಯಾಲಯಗಳು ಗಂಭೀರ ಚಿಂತನೆ ಮಾಡಬೇಕಿದೆ ಎಂದು ಹೇಳಿದರು.ಕನ್ನಡಕ್ಕೆ ಹರಾ್ಪ ಮತ್ತು ಮೊಹೆಂಜೊದಾರೋ ಸಂಸ್ಕೃತಿ ಕಾಲದಿಂದ ಹಿಡಿದು ಇತಿಹಾಸ ಇದೆ. ರಾಜ ಮಹಾರಾಜರು ಕನ್ನಡ ಭಾಷೆಯನ್ನು ತಮ್ಮ ಆಡಳಿತ ಭಾಷೆಯಾಗಿ ಆಳ್ವಿಕೆ ಮಾಡಿದ್ದಾರೆ. ಅಶೋಕನ ಹೆಸರು ಗೊತ್ತಾಗಿರುವುದು ಮಸ್ಕಿ ಶಾಸನದಿಂದ ಸನ್ನತಿಯಲ್ಲಿಯೂ ಅಶೋಕನ ಕುರಿತು ಮಾಹಿತಿ ದೊರೆಯುತ್ತದೆ. ಕದಂಬ, ಗಂಗರು, ಚಾಲುಕ್ಯ ಸೇರಿದಂತೆ ಹಲವಾರು ರಾಜ ಮನೆತನಗಳು ನಮ್ಮಲ್ಲಿ ಆಳ್ವಿಕೆ ಮಾಡಿವೆ ಎಂದರು.ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಮೇಲೆ ಭಾಷಾವಾರು ಪ್ರಾಂತ್ಯಗಳು ರಚನೆಯಾದವು. ಕರ್ನಾಟಕದ ಏಕೀಕರಣಕ್ಕಾಗಿ ಅಂದು ದೊಡ್ಡ ಚಳುವಳಿ, ಹೋರಾಟಗಳು ನಡೆದವು ಹಲವಾರು ಜನರು ಜೈಲಿಗೆ ಹೋಗಿದ್ದರು. ಅವರ ತ್ಯಾಗ ಬಲಿದಾಗಳನ್ನು ನಾವು ಸ್ಮರಿಸಬೇಕಿದೆ ಎಂದು ಹೇಳಿದರು.ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ಎಂ. ರೇವಣ್ಣ ಅವರು ಕಲ್ಯಾಣವಾಣಿ ಸುವರ್ಣ ಸಂಭ್ರಮ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿ, ಕೊಪ್ಪಳ ವಿಶ್ವವಿದ್ಯಾಲಯಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಉತ್ತಮ ವಿಶ್ವವಿದ್ಯಾಲಯ ಆಗಲಿ. ಇದರಿಂದ ಈ ಭಾಗದಲ್ಲಿ ಒಳ್ಳೆಯ ಕೆಲಸ ಕಾರ್ಯಗಳು ನಡೆಯಲಿ. ಉತ್ತರ ಕರ್ನಾಟಕದ ಜನರು ಕನ್ನಡ ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ. ಕನ್ನಡಕ್ಕೆ 8 ಜ್ಞಾನಪೀಠ ಪ್ರಶಸ್ತಿಗಳು ಬಂದ ಶ್ರೇಷ್ಠ ಭಾಷೆ ನಮ್ಮದಾಗಿದೆ. ನಾವೆಲ್ಲರೂ ಮಾತೃಭಾಷೆಗೆ ಆದ್ಯತೆ ನೀಡಬೇಕೆಂದು ಹೇಳಿದರು.ಕೊಪ್ಪಳ ಸಂಸದರಾದ ಕೆ.ರಾಜಶೇಖರ ಹಿಟ್ನಾಳ ಮಾತನಾಡಿ ಕರ್ನಾಟಕ ಇತಿಹಾಸ ಪ್ರಸಿದ್ಧವಾದ ನಾಡಾಗಿದೆ. ಬಸವಣ್ಣನವರು ಜಗತ್ತಿಗೆ ಮೊದಲ ಸಂಸತ್ತನ್ನು ನೀಡಿದ್ದರು. ಇದು ಎಲ್ಲರಿಗೂ ಸಮಾನತೆಯನ್ನು ಸಾರಿದ ನಾಡು ನಮ್ಮದಾಗಿದೆ. ಪಾರ್ಲಿಮೆಂಟನಲ್ಲಿ ವಿವಿಧ ರಾಜ್ಯಗಳಿಂದ ಬಂದವರು ತಮ್ಮದೆ ಭಾಷೆಯಲ್ಲಿ ಮಾತನಾಡುವ ಮೂಲಕ ತಮ್ಮ ಮಾತೃಭಾಷೆ ಬಗ್ಗೆ ಅಭಿಮಾನವನ್ನು ಅವರು ತೋರಿಸುತ್ತಾರೆ ಎಂದು ಹೇಳಿದರು.ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೋ. ಬಿ.ಕೆ. ರವಿ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ ಕೊಪ್ಪಳ ವಿಶ್ವವಿದ್ಯಾಲಯ ಸ್ಥಾಪನೆಯಾಗಿ ಒಂದುವರೆ ವರ್ಷವಾಗಿದೆ. ಮೈಸೂರು ದಸರಾದಲ್ಲಿ ನಡೆದಂತೆ ಇಲ್ಲಿಯೂ ಕವಿಗೋಷ್ಠಿ ಮಾಡಿದ್ದೆವೆ. ಈ ಭಾಗದಲ್ಲಿ ಕನ್ನಡ ಭಾಷೆ, ಸಾಹಿತ್ಯ, ಸಾಂಸ್ಕೃತಿಯ ಮೇಲೆ ಪ್ರೀತಿ ಇರುವ ಅಪಾರ ಜನರು ಈ ಭಾಗದಲ್ಲಿದ್ದಾರೆ. ಜನಸಾಮಾನ್ಯರ ಹತ್ತಿರ ಇದ್ದಾಗ ಮಾತ್ರ ವಿಶ್ವವಿದ್ಯಾಲಯವು ಜಾಗತಿಕವಾಗಿ ಹೆಸರು ಮಾಡಲು ಸಾಧ್ಯ. ಕೊಪ್ಪಳ ವಿಶ್ವವಿದ್ಯಾಲಯದಲ್ಲಿ ಅನೇಕ ಕೋರ್ಸುಗಳನ್ನು ಆರಂಭಿಸುತ್ತಿದ್ದೆವೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಅಭಿನಂದನೆಗಳು ಎಂದು ಹೇಳಿದರು.ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಕುಲಪತಿ ಪ್ರೋ. ಮುನಿರಾಜು ಎಂ., ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷರಾದ ಮಾನಸ, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾದ ಕೆ.ವಿ. ನಾಗರಾಜಮೂರ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾದ ಆಯೇಷಾ ಖಾನಂ ಅವರು ಕಾರ್ಯಕ್ರಮದಲ್ಲಿ ಮಾತನಾಡಿದರು.ಈ ಕಾರ್ಯಕ್ರಮದಲ್ಲಿ ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಸಚಿವ ಎಸ್.ಎನ್. ರುದ್ರೇಶ್, ಕೊಪ್ಪಳ ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಅಮೀನಸಾಬ, ಕೊಪ್ಪಳ ವಿಶ್ವವಿದ್ಯಾಲಯದ ಪ್ರಭಾರಿ ಕುಲಸಚಿವ ಪ್ರೋ. ಕೆ.ವಿ. ಪ್ರಸಾದ ಹಾಗೂ ಕೊಪ್ಪಳ ವಿಶ್ವವಿದ್ಯಾಲಯದ ಸಿಂಡಿಕೇಟ್, ಅಕಾಡೆಮಿಕ್ ಕೌನ್ಸಿಲ್ ಸದಸ್ಯರು, ಕೊಪ್ಪಳ ವಿಶ್ವವಿದ್ಯಾಲಯದ ಎಲ್ಲಾ ಬೋಧಕ, ಬೋಧಕೇತರ ಸಿಬ್ಬಂದಿಗಳು ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಸೇರಿದಂತೆ ಇತರೆ ಹಲವಾರು ಜನರು ಉಪಸ್ಥಿತರಿದ್ದರು.