ಬಿತ್ತನೆ ತಡವಾದರೂ ನಳನಳಿಸುತ್ತಿರುವ ಬೆಳೆ | ಅನ್ನದಾತನ ಮೊಗದಲ್ಲಿ ಮಂದಹಾಸ ಬಿಳಿಜೋಳ ಬಂಪರ್ ಫಸಲು ನಿರೀಕ್ಷೆ

ಸದಾನಂದ ಮಜತಿ

ಬೆಳಗಾವಿ: ಮುಂಗಾರು ಹಂಗಾಮಿನಲ್ಲಿ ನೆರೆ-ಅತಿವೃಷ್ಟಿಯಿಂದ ಸಂಪೂರ್ಣ ಬೆಳೆ ಕಳೆದುಕೊಂಡು ಕಂಗಾಲಾಗಿದ್ದ ರೈತರು ಅಕ್ಟೋಬರ್ ತಿಂಗಳಲ್ಲಿ ಸುರಿದ ಭಾರಿ ಮಳೆಯಿಂದ ಹಿಂಗಾರು ಬಿತ್ತನೆ ತಡವಾಗಿ ಆತಂಕದಲ್ಲೇ ಬಿತ್ತನೆ ನಡೆಸಿದ್ದರು. ಆದರೆ, ಬೆಳೆಗಳಿಗೆ ಪೂರಕ ವಾತಾವರಣ ಇರುವುದರಿಂದ ಹಿಂಗಾರು ಫಸಲು ನಳನಳಿಸುತ್ತಿದ್ದು, ರೈತರು ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದಾರೆ.

ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನಲ್ಲಿ ಬಿಳಿಜೋಳ, ಕಡಲೆ, ಗೋಧಿ, ಸೂರ್ಯಕಾಂತಿ ಸೇರಿದಂತೆ ಡಿಸೆಂಬರ್ ತಿಂಗಳಾಂತ್ಯಕ್ಕೆ ನಿಗದಿತ ಗುರಿ 3,20,202 ಹೆಕ್ಟೇರ್ ಪೈಕಿ 3,11,583 ಹೆಕ್ಟೇರ್ ಪ್ರದೇಶದಲ್ಲಿ ಅಂದರೆ, ಗುರಿಯ ಶೇ.97ರಷ್ಟು ಹಿಂಗಾರು ಬಿತ್ತನೆಯಾಗಿದೆ. ಬಿಳಿಜೋಳ ಜಿಲ್ಲೆಯಲ್ಲಿ 129290 ಹೆಕ್ಟೇರ ಬಿತ್ತನೆ ಹೊಂದಲಾಗಿತ್ತು. ಈ ಪೈಕಿ 105001 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಬಿಳಿಜೋಳ ಹಸಿರಿನಿಂದ ನಳನಳಿಸುತ್ತಿದ್ದು, ಹೊಡೆ ಹಿರಿದು ತಲೆದೂಗುತ್ತಿರುವ ದೃಶ್ಯ ಮನಮೋಹಕವಾಗಿದೆ.

ಒಂದೂವರೆ ತಿಂಗಳೂ ವಿಳಂಬವಾದ ಬಿತ್ತನೆ

ಮುಂಗಾರಿನಲ್ಲಿ ಜಿಲ್ಲೆಯಲ್ಲಿ ಮಳೆ ಒಂದು ತಿಂಗಳು ತಡವಾಗಿ ಆಗಿದ್ದರಿಂದ ಬಿತ್ತನೆಯೂ ವಿಳಂಬವಾಗಿತ್ತು. ಜುಲೈನಿಂದ ನಿರಂತರ ಸುರಿದ ಮಳೆಗೆ ಮುಂಗಾರು ಬೆಳೆಗಳು ಸಂಪೂರ್ಣ ನೀರಲ್ಲಿ ನಿಂತು ಬಾಡಿ ಹೋಗಿದ್ದವು. ಅಕ್ಟೋಬರ್ನಲ್ಲಿ ಭಾರಿ ಮಳೆ ಸುರಿದಿದ್ದರಿಂದ ಹಿಂಗಾರು ಬಿತ್ತನೆ ಮತ್ತಷ್ಟು ವಿಳಂಬವಾಗಿತ್ತು. ಅಕ್ಟೋಬರ್ ವೇಳೆಗೆ ಕೊನೆಗೊಳ್ಳಬೇಕಿದ್ದ ಬಿತ್ತನೆ ನವೆಂಬರ್ ತಿಂಗಳು ಮುಗಿದರೂ ಶೇ.50ರಷ್ಟು ಪೂರ್ಣಗೊಂಡಿರಲಿಲ್ಲ. ಬಿತ್ತನೆ ತಡವಾದಷ್ಟು ಬೆಳೆಗೆ ರೋಗಬಾಧೆ ಕಾಡುವುದರಿಂದ ಬೆಳೆ ಬರುವುದೋ ಇಲ್ಲವೋ ಎಂಬ ಆತಂಕದಲ್ಲೇ ರೈತರು ಬಿತ್ತನೆ ಮಾಡಿದ್ದರು. ಹಾಗೆ ನೋಡಿದರೆ ಜನವರಿ ತಿಂಗಳಲ್ಲಿ ಮುಂಗಾರು ಹಂಗಾಮಿನ ಒಕ್ಕಲು ಆರಂಭಗೊಳ್ಳಬೇಕಿತ್ತು. ಆದರೆ. ಬೆಳೆ ಕೈಗೆ ಬರಲು ಇನ್ನೂ ಒಂದು ತಿಂಗಳು ಸಮಯ ಹಿಡಿಯಬಹುದು.

ಬಂಪರ್ ಬೆಳೆ ನಿರೀಕ್ಷೆಯಲ್ಲಿ ರೈತ: ಕಳೆದ ವರ್ಷ ಬಿತ್ತನೆ ಬಳಿಕ ಮಳೆ ಮಾಯವಾಗಿದ್ದರಿಂದ ನಿರೀಕ್ಷಿತ ಫಸಲು ಬರದೆ ರೈತರು ಅಪಾರ ಹಾನಿ ಅನುಭವಿಸಿದ್ದರು. ಹೀಗಾಗಿ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರ ಎಂದು ಘೋಷಣೆ ಮಾಡಲಾಗಿತ್ತು. ಇದರ ಪರಿಣಾಮ ಬಿಳಿಜೋಳದ ದರ ಗಗನಮುಖಿಯಾಗಿ ದಾಖಲೆ ಬರೆದಿತ್ತು. ಈಗಲೂ ಬಿಳಿಜೋಳ ದರ 4 ಸಾವಿರ ಆಸುಪಾಸಿನಲ್ಲಿದೆ. ಆದರೆ ಈ ಬಾರಿ ಬಿತ್ತನೆ ವಿಳಂಬವಾದರೂ ಪೂರಕ ವಾತಾವರಣ ಕಾರಣ ಬಿಳಿಜೋಳ ಬೆಳೆ ಉತ್ತಮವಾಗಿ ಬೆಳೆದಿದ್ದು, ರೈತರಲ್ಲಿ ಸಂತಸ ಉಂಟು ಮಾಡಿದೆ. ಜಿಲ್ಲೆಯ ಯಾವುದೇ ತಾಲೂಕಿಗೆ ಹೋದರೂ ಬಿಳಿಜೋಳ ಬೆಳೆ ಸೊಂಪಾಗಿ ಬೆಳೆದು ಹೊಡೆಹಿರಿದು ತಲೆದೂಗುತ್ತಿದೆ. 

ಸದ್ಯ ಬಿಳಿಜೋಳ ಬೆಳೆ ಜಿಲ್ಲೆಯ ಬಹುತೇಕ ಕಡೆ ಹೊಡೆಬಿಟ್ಟಿದ್ದು ಕಾಳು ಕಟ್ಟುವ ಹಂತದಲ್ಲಿದೆ. ಒಂದೆರಡು ವಾರ ಇದೇ ಸ್ಥಿತಿ ಇದ್ದರೆ ಬಂಪರ್ ಬೆಳೆ ಬರುವ ನಿರೀಕ್ಷೆಯಲ್ಲಿ ರೈತರಿದ್ದಾರೆ. ಸಾರ್ವಜನಿಕರೂ ಗಗನಮುಖಿಯಾಗಿರುವ ದರ ಇಳಿಕೆ ನಿರೀಕ್ಷೆಯಲ್ಲಿದ್ದಾರೆ.