ವಿಜಯಪುರ: ಉಪಯೋಜನೆಯಡಿ ನಿಗದಿತ ಗುರಿ ಸಾಧನೆಗೆ ಸೂಚನೆ

ಲೋಕದರ್ಶನ ವರದಿ

ವಿಜಯಪುರ 26: ಮೂಲಸೌಕರ್ಯ ಅಭಿವೃದ್ದಿ ಆಧಾರಿತ ಹಾಗೂ ಫಲಾನುಭವಿ ಆಧಾರಿತ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಪಟ್ಟಂತೆ ಸಮಗ್ರ ವರದಿ ಸಲ್ಲಿಸುವ ಜೊತೆಗೆ ವಿಶೇಷ ಘಟಕ ಹಾಗೂ ಗಿರಿಜನ ಉಪಯೋಜನೆಯಡಿ ಸಾಧಿಸಿರುವ ಪ್ರಗತಿ ವರದಿ ಸಮರ್ಪಕವಾಗಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ (ದೌರ್ಜನ್ಯ ಪ್ರತಿಬಂಧ) ನಿಯಮಗಳು 1995ಅನ್ವಯ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಕಳೆದ ಸಾಲಿನಲ್ಲಿ ಫಲಾನುಭವಿಯಾಧಾರಿತ ಹಾಗೂ ವಿವಿಧ ಅಭಿವೃದ್ದಿ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಪಟ್ಟಂತೆ ಕೈಗೊಳ್ಳಲಾದ ಕ್ರಮಗಳ ಬಗ್ಗೆ ಪರಿಶೀಲಿಸಿದ ಅವರು, ವಿಶೇಷ ಘಟಕ ಹಾಗೂ ಗಿರಿಜನ ಉಪಯೋಜನೆಯಡಿಯ ಅನುದಾನ ಸಮರ್ಪಕವಾಗಿ ಬಳಕೆಯಾಗುವ ಜೊತೆಗೆ ಶೇ.100ರಷ್ಟು ಪ್ರಗತಿಯಾಗುವಂತೆ ನೋಡಿಕೊಳ್ಳಬೇಕು. 

ಅದರಂತೆ ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸಿರುವ ಕುರಿತಂತೆ ಸಮಗ್ರ ಮಾಹಿತಿಯನ್ನು ಕೂಡ ಸಲ್ಲಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು. 

ವಿಶೇಷ ಘಟಕ ಹಾಗೂ ಗಿರಿಜನ ಉಪಯೋಜನೆಯಡಿ ಸಕರ್ಾರದ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ಮೀಸಲಾದ ಅನುದಾನ ಬಳಕೆಗೆ ಸಂಬಂಧಪಟ್ಟಂತೆ ಹಾಗೂ ಪ್ರಸಕ್ತ ವರ್ಷದ ಕ್ರೀಯಾಯೋಜನೆ ಮಾಹಿತಿಯನ್ನು ಸಲ್ಲಿಸಬೇಕು. 

ಈ ಯೋಜನೆಯಡಿ ಅನುದಾನ ಸಮರ್ಪಕ ಬಳಕೆಯಾಗದೇ ಇದ್ದ ಪಕ್ಷದಲ್ಲಿ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲೆಗೂ ಅವಕಾಶವಿರುವ ಹಿನ್ನಲೆಯಲ್ಲಿ ಅಧಿಕಾರಿಗಳು ಈ ಅನುದಾನ ಬಳಕೆಯಲ್ಲಿ ನಿರ್ಲಕ್ಷ್ಯ ತೋರಬಾರದು. ಅದರಂತೆ ನಿರ್ಲಕ್ಷ್ಯ ತೋರುವಂತಹ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಸಹ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. 

ಅದರಂತೆ ವಿವಿಧ ನಿಗಮಗಳ ವ್ಯಾಪ್ತಿಯಲ್ಲಿ ಕೈಗೊಳ್ಳಲಾದ ಪ್ರಗತಿ ಕಾರ್ಯಗಳ ಹಾಗೂ ಕಲ್ಪಿಸಿದ ಸೌಲಭ್ಯಗಳ ಕುರಿತಂತೆ ಪರಿಶೀಲಿಸಲು ಪ್ರತ್ಯೇಕವಾಗಿ ಸಭೆಗಳನ್ನು ಮುಂದಿನ ದಿನಗಳಲ್ಲಿ ನಡೆಸಲಾಗುವುದು. ಇಂದಿನ ಸಭೆಯಲ್ಲಿ ಗೈರಾದ ಅಧಿಕಾರಿಗಳಿಗೆ ನಿಗದಿತ ಕಾಯ್ದೆಯನ್ವಯ ಕಾರಣ ಕೇಳಿ ನೋಟಿಸ್ ಸಹ ಜಾರಿಗೊಳಿಸುವಂತೆ ಸೂಚಿಸಿದರು. ಸಭೆಯಲ್ಲಿ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.