ಲೋಕದರ್ಶನ ವರದಿ
ವಿಜಯಪುರ 23: ಲೋಕಸಭಾ ಚುನಾವಣೆಯ ಮತದಾನ ಮಂಗಳವಾರ ಜಿಲ್ಲೆಯಲ್ಲಿ ಶಾಂತಿಯುತವಾಗಿ ನಡೆಯಿತು. ಮತದಾನದ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ.
ಮತದಾನದ ವೇಳೆ ಕೆಲವು ಮತಗಟ್ಟೆಗಳಲ್ಲಿ ಇವಿಎಂಗಳಲ್ಲಿ ಕೆಲಕಾಲ ತಾಂತ್ರಿಕ ದೋಷ ಉಂಟಾಗಿ ಮತದಾನ ಸ್ವಲ್ಪ ವಿಳಂಬವಾಗಲು ಕಾರಣವಾದರೆ, ಇನ್ನು ಮತಗಟ್ಟೆಗಳಿಗೆ ಮತದಾನ ಮಾಡಲು ಹೋದರೆ ಮತದಾರರ ಯಾದಿಯಲ್ಲಿ ತಮ್ಮ ಹೆಸರು ಇರದೇ ಇರುವುದರಿಂದ ಕೆಲವು ಮತದಾರರು ಮತದಾನ ಮಾಡಲು ಸಾಧ್ಯವಾಗದೇ ನಿರಾಶೆಯಿಂದ ಹಿಂತಿರುಗಬೇಕಾಗಿ ಬಂತು. ಇದು ಪ್ರತಿ ಬಾರಿಯೂ ಕೇಳಿ ಬರುವ ಸಾಮನ್ಯ ದೂರು.
ಮತದಾನದ ಬಗ್ಗೆ ಜಿಲ್ಲಾಡಳಿತ ಜನರಲ್ಲಿ ಸಾಕಷ್ಟು ಜಾಗೃತಿ ಮೂಡಿಸಿದ್ದರೂ ನಿರೀಕ್ಷಿಸಿದಷ್ಟು ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗಿಲ್ಲ ಎಂಬುದೇ ಬೇಸರದ ಸಂಗತಿ.
ಮಹಿಳೆಯರು, ವೃದ್ಧರು, ದೈನಂದಿನ ಕೆಲಸ ಕಾರ್ಯಗಳಿಗೆ ಹೋಗುವವರು ಬೆಳಿಗ್ಗೆ ಲಗುಬಗೆಯಿಂಂದ ಮತದಾನ ಮಾಡಲು ಮತಗಟ್ಟೆಗೆ ತೆರಳುತ್ತಿದ್ದುದು ಕಂಡು ಬಂತು. ಬೇಸಿಗೆಯ ಸುಡು ಬಿಸಿಲಿಗೆ ಹೆದರಿ ಮತದಾರರು ಮನೆಯಿಂದ ಹೊರಗೆ ಬರದೇ ಇದ್ದುದರಿಂದ ಮಧ್ಯಾಹ್ನದ ವೇಳೆ ಮತದಾನ ನೀರಸವಾಗಿತ್ತು. ಬಿಸಿಲಿನ ಪ್ರಖರತೆ ಕಡಿಮೆಯಾದ ನಂತರ ಮತ್ತೆ ಮತದಾನ ಚುರುಕುಗೊಂಡಿತು.
ಕುಡಿಯುವ ನೀರಿನ ಬವಣೆ ಹಾಗೂ ಇನ್ನಿತರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ವಿಜಯಪುರ ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಗ್ರಾಮಸ್ಥರು ಮತದಾನ ಬಹಿಷ್ಕರಿಸಿ, ನಂತರ ಅಧಿಕಾರಗಳ ಮನವೊಲಿಕೆಯಿಂದ ಮತ ಚಲಾಯಿಸಿದ ಪ್ರಸಂಗಗಳೂ ನಡೆದವು.
ಅಗಸಬಾಳ ಗ್ರಾಮಸ್ಥರು, ಗ್ರಾಮದಲ್ಲಿ ಕುಡಿಯುವ ನೀರಿನ ಅಭಾವ ಎದುರಾಗಿ ನೀರಿಗಾಗಿ. ಪರಿತಪಿಸುವಂತಾಗಿದೆ. ಬೋರವೆಲ್ ಸಹ ಇಲ್ಲದೇ ನಾವು ತುಂಬಾ ತೊಂದರೆ ಅನುಭವಿಸುತ್ತಿದ್ದೇವೆ, ಹೀಗಾಗಿ ಬೋರವೆಲ್ ಕೊರೆಯಿಸುವವರೆಗೂ ನಾವು ಮತದಾನ ಮಾಡುವುದಿಲ್ಲ ಎಂದು ಪಟ್ಟು ಹಿಡಿದು ಮತದಾನ ಮಾಡಲು ಹಿಂದೇಟು ಹಾಕಿದ್ದರು. ಈ ಸುದ್ದಿ ತಿಳಿದು ಗ್ರಾಮಕ್ಕೆ ಭೇಟಿ ನೀಡಿದ ತಹಶೀಲ್ದಾರ ಹಾಗೂ ಇತರ ಅಧಿಕಾರಿಗಳ ತಂಡ ಸಮಸ್ಯೆ ಬಗೆ ಹರಿಸುವುದಾಗಿ ಭರವಸೆ ನೀಡಿದರು. ಆದರೆ ಇದರಿಂದ ಗ್ರಾಮಸ್ಥರು ಸಮಾಧಾನಗೊಳ್ಳಲಿಲ್ಲ. ಮತದಾನ ಬಹಿಷ್ಕರಿಸುವುದು ನಮಗೆ ಇಷ್ಟವಿಲ್ಲ. ಆದರೆ ನಮ್ಮ ತೊಂದರೆ ಯಾರೂ ಕೇಳುತ್ತಿಲ್ಲ. ಹೀಗಾಗಿ ಅನಿವಾರ್ಯವಾಗಿ ನಾವು ಈ ನಿಧರ್ಾರ ಕೈಗೊಳ್ಳುತ್ತಿದ್ದೇವೆ ಎಂದು ಗ್ರಾಮಸ್ಥರು ಅಧಿಕಾರಿಗಳ ಮುಂದೆ ತಮ್ಮ ಅಳಲು ತೋಡಿಕೊಂಡರು. ಆಗ ಅಧಿಕಾರಿಗಳು ತಕ್ಷಣವೇ ಬೋರವೆಲ್ ಕೊರೆಯಿಸುವ ಕಾರ್ಯಕ್ಕೆ ಚಾಲನೆ ನೀಡಿದರು. ಅತ್ತ ಬೋರವೆಲ್ ಸದ್ದು ಆರಂಭಗೊಂಡ ಬಳಿಕವೇ ಅಗಸಬಾಳ ಗ್ರಾಮಸ್ಥರು ಮತಗಟ್ಟೆ ಕೇಂದ್ರಗಳತ್ತ ತೆರಳಿ ಮತದಾನ ಮಾಡಿದರು.
ಇದೇ ರೀತಿ ಮುದ್ದೇಬಿಹಾಳ ತಾಲೂಕಿನ ಹೊಕ್ರಾಣಿ ಗ್ರಾಮಸ್ಥರು ಸಹ ತಮ್ಮ ಊರಿನ ಕೆರೆ ತುಂಬಲೇಬೇಕು ಎಂದು ಪಟ್ಟು ಹಿಡಿದು ಕೆಲಕಾಲ ಮತದಾನ ಬಹಿಷ್ಕರಿಸಿದ ಘಟನೆಯೂ ನಡೆಯಿತು. ಕೆರೆ ತುಂಬಿಲ್ಲವಾದ್ದರಿಂದ ಬಹಳಷ್ಟು ಸಮಸ್ಯೆ ಎದುರಾಗಿದೆ ಎಂದು ಅಳಲು ತೋಡಿಕೊಂಡರು. ಆಗ ಅಧಿಕಾರಿಗಳು ಭೇಟಿ ನೀಡಿ ಮೇ.27 ರ ನಂತರ ಹೊಕ್ರಾಣಿ ಕೆರೆ ತುಂಬಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಹೊಕ್ರಾಣಿ ಗ್ರಾಮಸ್ಥರು ಮತದಾನ ಕಾರ್ಯಕ್ಕೆ ಅಣಿಯಾದರು.
ಅದೇ ತೆರನಾಗಿ ನಂದ್ರಾಳ ಗ್ರಾಮವನ್ನು ಇಂಡಿ ತಾಲೂಕಿನಗೆ ಸೇರ್ಪಡೆ ಮಾಡುವಂತೆ ಬೇಡಿಕೆ ಇರಿಸಿ ನಂದ್ರಾಳ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ ಘಟನೆ ನಡೆಯಿತು. ನಂದ್ರಾಳ ಗ್ರಾಮವನ್ನು ಚಡಚಣಕ್ಕೆ ಸೇರ್ಪಡೆ ಮಾಡಿರುವುದರಿಂದ ಅನೇಕ ತಾಂತ್ರಿಕ ತೊಂದರೆಗಳು ಎದುರಾಗಿವೆ. ತಾಲೂಕಾ ಕೇಂದ್ರದಲ್ಲಿ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಲು ಬಹಳಷ್ಟು ತೊಂದರೆಯಾಗುತ್ತಿದೆ. ಹೀಗಾಗಿ ನಂದ್ರಾಳ ಗ್ರಾಮವನ್ನು ಇಂಡಿ ತಾಲೂಕಿಗೆ ಸೇರ್ಪಡೆ ಮಾಡಿ ಎಂದು ಹಕ್ಕೊತ್ತಾಯ ಮಂಡಿಸಿ ಮತದಾನ ಬಹಿಷ್ಕರಿಸಲು ಮುಂದಾದರು. ಆಗ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸ್ಪಷ್ಟೀಕರಣ ನೀಡಿ ಮತ ಚಲಾಯಿಸುವಂತೆ ಮನವೊಲಿಸುವಲ್ಲಿ ಯಶಸ್ವಿಯಾದರು.