ವಿದ್ಯಾವರ್ಧಕ ಸಂಘವು ದಿ.ಡಾ. ಆರ್.ಸಿ. ಹಿರೇಮಠ ದತ್ತಿ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮ
ಧಾರವಾಡ 17 : ಡಾ. ಆರ್.ಸಿ. ಹಿರೇಮಠ ಕನ್ನಡ ಸಾಹಿತ್ಯ ಲೋಕದ ಯುಗ ಪ್ರವರ್ತಕರು. ಖ್ಯಾತ ಸಂಶೋಧಕರಾದ ಅವರೊಬ್ಬ ಭಾಷಾ ವಿಜ್ಞಾನಿಗಳು .ಶರಣ ಸಂಸ್ಕೃತಿಯ ಚಿಂತಕರೂ ಆಗಿದ್ದರು ಎಂದು ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಬಿ.ಎಸ್. ಕೋಟಿಗೌಡರ ಅಭಿಪ್ರಾಯ ಪಟ್ಟರು.
ಕರ್ನಾಟಕ ವಿದ್ಯಾವರ್ಧಕ ಸಂಘವು ದಿ.ಡಾ. ಆರ್.ಸಿ. ಹಿರೇಮಠ ದತ್ತಿ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಡಾ.ಆರ್.ಸಿ. ಹಿರೇಮಠರ ಬದುಕು-ಬರಹ’ ವಿಷಯ ಕುರಿತು ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದಅವರು, ಡಾ.ಆರ್.ಸಿ. ಹಿರೇಮಠತಮ್ಮ ಸ್ವಪ್ರತಿಭೆಯಿಂದಲೇ ಕುಲಪತಿಯಾದವರು. ಬಾಲ್ಯದಲ್ಲಿಯೇ ಪ್ರತಿಭಾನ್ವಿತರಾದ, ಬಡತನದಿಂದ ಬೆಂದುಕಂತಿ ಭಿಕ್ಷೆ ಬೇಡಿ ವಿದ್ಯೆ ಪಡೆಯಬೇಕಾಯಿತು. ಡಾ. ಡಿ. ಸಿ. ಪಾವಟೆಯವರ ಮಾರ್ಗದರ್ಶನದಲ್ಲಿ ಕ.ವಿ.ವಿ.ಯಲ್ಲಿ ಕನ್ನಡ ಅಧ್ಯಯನ ಪೀಠ ಸ್ಥಾಪನೆಗೆ ಅಹರ್ನಿಶಿ ಶ್ರಮ ಪಟ್ಟರು. ವಚನ ಸಾಹಿತ್ಯ ಹಾಗೂ ವೀರಶೈವ ಸಾಹಿತ್ಯದ ಬಗ್ಗೆ ಉತ್ಕೃಷ್ಟಗ್ರಂಥ ಸಂಪಾದನೆ ಮಾಡಿದರು. ಕವಿವಿಯ ಕನ್ನಡ ಅಧ್ಯಯನ ಪೀಠದಲ್ಲಿ ಕನ್ನಡ ಸಾಹಿತ್ಯದ ಜೊತೆ ಭಾಷಾ ಶಾಸ್ತ್ರದಂತಹ ಅಧ್ಯಯನಗಳಿಗೆ ಅವಕಾಶ ಕಲ್ಪಿಸಿದರು. ನಾಡಿನ ವಿವಿದೆಡೆ ಸಂಚರಿಸಿ ವಚನ ಸಾಹಿತ್ಯದ ಸುಮಾರು 10 ಸಾವಿರ ಹಸ್ತಪ್ರತಿ ಸಂಗ್ರಹಿಸಿ ಅಧ್ಯಯನಕ್ಕೆ ಅನುಕೂಲಿಸಿದ್ದಾರೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕ.ವಿ.ವ. ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ವೀರಣ್ಣ ಒಡ್ಡೀನ ಮಾತನಾಡಿ, ಡಾ. ಡಿ.ಸಿ. ಪಾವಟೆ ಕ.ವಿ.ವಿ. ನಿರ್ಮಾತೃ, ಆದರೆಡಾ.ಆರ್.ಸಿ. ಹಿರೇಮಠಅವರುಅದನ್ನುಉನ್ನತ ಮಟ್ಟಕ್ಕೆ ಬೆಳೆಸಿದವರ ಲ್ಲೊಬ್ಬರು. ಅಪಾರ ಸ್ಮರಣ ಶಕ್ತಿ ಮೇದಾವಿಗಳಾದ ನಡೆದಾಡುವ ವಿಶ್ವಕೋಶದಂತಿದ್ದರು. ಸಾಧಾರಣ ಕುಟುಂಬದಲ್ಲಿ ಹುಟ್ಟಿ ಅಸಾಧಾರಣವಾಗಿ ಬೆಳೆದು ಸಾಧನೆಯ ಶಿಖರವನ್ನೇರಿದರು. ಪ್ರತಿಭಾ ಸಂಪನ್ನರಾದ ಅವರು ಯಾವ ಟಿಪ್ಪಣಿ ಇಲ್ಲದೇ ಪಂಪನಿಂದ-ಕುವೆಂಪುರವರ ವರೆಗೆ ಬರುವ ಎಲ್ಲ ಕವಿಗಳ ಬಗ್ಗೆ ನಿರರ್ಗಳವಾಗಿ ಮಾತನಾಡ ಬಲ್ಲವರಾಗಿದ್ದರು. ಡಾ. ಆರ್.ಸಿ. ಹಿರೇಮಠ ಆತ್ಮಕಥೆ ‘ಉರಿ ಬರಲಿ-ಸಿರಿ ಬರಲಿ’ ಎಂಬ ಗ್ರಂಥ ಅವರ ಜೀವನ ಹಾಗೂ ಸಾಧನೆ ಬಗ್ಗೆ ಬೆಳಕು ಚೆಲ್ಲುವ ಕೃತಿಯಾಗಿದೆ ಎಂದು ಹೇಳಿದರು.
ಶಂಕರ ಹಲಗತ್ತಿ ಡಾ.ಅರ್.ಸಿ. ಹಿರೇಮಠ ಕನ್ನಡ ಸಾಹಿತ್ಯ ಮತ್ತು ವಚನ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸತೀಶತುರಮರಿ ಸ್ವಾಗತಿಸಿದರು. ವಿಶ್ವೇಶ್ವರಿ ಬ. ಹಿರೇಮಠ ನಿರ್ವಹಿಸಿ ವಂದಿಸಿದರು.
ಕಾರ್ಯಕ್ರಮದಲ್ಲಿ ದತ್ತಿದಾನಿ ಡಾ.ಶಶಿಕಲಾ ರು.ಹಿರೇಮಠ, ಬಿ.ಎಸ್. ಶಿರೋಳ, ಶಿವಾನಂದ ಹೂಗಾರ, ಡಾ. ಶ್ರೀಧರ ಗಸ್ತಿ, ಕೆ.ಎಂ. ಅಂಗಡಿ, ಮಹಾಂತೇಶ ನರೇಗಲ್, ಕ.ವಿ.ವಿ. ಡಾ. ಆರ್.ಸಿ. ಹಿರೇಮಠಕನ್ನಡಅಧ್ಯಯನ ಪೀಠದ ವಿದ್ಯಾರ್ಥಿಗಳಾದ ಸಿದ್ಧಾರೂಢ ಗುಗ್ಗರಿ, ಅಂಬರೀಶ ರಾಠೋಡ, ರವಿ ಬಿರಾದಾರ, ರಾಹುಲ ಉಪ್ಪಾರ, ಮಹಮ್ಮದ ವಾಲಿಕಾರ ಸೇರಿದಂತೆ ಡಾ.ಆರ್.ಸಿ. ಹಿರೇಮಠ ಅವರ ಪರಿವಾರದವರು ಹಿತೈಷಿಗಳು, ಅಭಿಮಾನಿಗಳು ಇದ್ದರು.