ನೀರನ್ನು ಹಿತ-ಮಿತವಾಗಿ ಬಳಸಿ: ಶಾಸಕರಾದ ಈ.ಅನ್ನಪೂರ್ಣ
ಬಳ್ಳಾರಿ 20: ನೀರು ಪ್ರತಿಯೊಬ್ಬ ಸಾರ್ವಜನಿಕರ ಆಸ್ತಿ. ನೈಸರ್ಗಿಕ ಕೊಡುಗೆಯಾಗಿದ್ದು, ನೀರಿನ ಸಂರಕ್ಷಣೆ ಎಲ್ಲರ ಹೊಣೆಯಾಗಿದೆ. ನೀರನ್ನು ಅವಶ್ಯಕತೆ ತಕ್ಕಂತೆ ಹಿತ-ಮಿತವಾಗಿ ಬಳಸಿಕೊಳ್ಳಬೇಕೆಂದು ಸಂಡೂರು ಶಾಸಕರಾದ ಈ.ಅನ್ನಪೂರ್ಣ ಅವರು ಹೇಳಿದರು.ಜಿಲ್ಲಾ ಪಂಚಾಯತ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಗ್ರಾಮ ಪಂಚಾಯತ್ ಕಾರ್ಯಾಲಯ ಬನ್ನಿಹಟ್ಟಿ ವತಿಯಿಂದ ಜಲ ಜೀವನ್ ಮಿಷನ್ ಯೋಜನೆಯಡಿ ಗ್ರಾಮೀಣ ಸುಸ್ಥಿರ ಕುಡಿಯುವ ನೀರು ಸರಬರಾಜು ಯೋಜನೆ ಹಾಗೂ ಕಾರ್ಯಾಚರಣೆ ಮತ್ತು ನಿರ್ವಹಣೆ ಸಾಂಸ್ಥೀಕರಣದ ಬಲವರ್ಧನೆಯ ಅಂಗವಾಗಿ ಸಂಡೂರು ತಾಲ್ಲೂಕಿನ ಎಸ್.ಗಂಗ್ಲಾಪುರ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ 24*7 ನೀರು ಸರಬರಾಜು ಘೋಷಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ದೈನಂದಿನ ಚಟುವಟಿಕೆಯಲ್ಲಿ ನೀರು ಪಾತ್ರ ಬಹುಮುಖ್ಯವಾಗಿದ್ದು, ಜಲಮೂಲ ಸಂರಕ್ಷಣೆಗೆ ಜನ ಸಮುದಾಯ ಕೈ ಜೋಡಿಸಬೇಕಿದೆ. 24*7 ನೀರು ಸರಬರಾಜು ಯೋಜನೆಯನ್ನು ಪ್ರತಿಯೊಬ್ಬರು ಜವಾಬ್ದಾರಿಯಿಂದ ನಿರ್ವಹಣೆ ಮಾಡಿಕೊಳ್ಳಬೇಕು. ನೀರು ನಮಗೆ ಮಾತ್ರವಲ್ಲದೆ ಮುಂದಿನ ಪೀಳಿಗೆಗೂ ಸಂರಕ್ಷಿಸಿ ಒದಗಿಸಬೇಕಾಗಿದೆ ಎಂದರು.ಹಿರಿಯರು ಜಲ ಸಂಪನ್ಮೂಲಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದರು. ಗ್ರಾಮ ಸ್ಥಾಪನೆ ಮಾಡಲು ಬಾವಿ, ಕೆರೆ, ಹಳ್ಳ-ಕೊಳ್ಳ ತೆರೆಯಲು ಶ್ರಮಿಸುತ್ತಿದ್ದರು. ತಮ್ಮ ಸುಂದರ ಗ್ರಾಮಕ್ಕೆ ನಾಂದಿ ಹಾಡುತ್ತಿದ್ದರು ಎಂದು ತಿಳಿಸಿದರು.ಪ್ರಸ್ತುತ ದಿನಗಳಲ್ಲಿ ಮನುಷ್ಯನ ಸ್ವಾರ್ಥಕ್ಕೆ ಜಲ ಮೂಲಗಳು ನಶಿಸಿ ಹೋಗುತ್ತಿವೆ. ಇದರಿಂದಾಗಿ ಜಲ ಪ್ರವಾಹ ಆಗುತ್ತಿರುವುದು ನಿದರ್ಶನವಾಗಿದೆ. ಈಗಾದರೂ ಜನ ಸಾಮಾನ್ಯರು ಎಚ್ಚೆತ್ತುಕೊಂಡು ನೀರು ಮತ್ತು ಜಲಮೂಲಗಳ ಸಂರಕ್ಷಣೆಗೆ ಮುಂದಾಗಬೇಕು ಎಂದು ಕರೆ ನೀಡಿದರು.ಜಿಪಂ ಮುಖ್ಯ ಯೋಜನಾಧಿಕಾರಿ ವಾಗೇಶ್ ಶಿವಾಚಾರ್ಯ ಅವರು ಮಾತನಾಡಿ, ಜಲಜೀವನ್ ಮಿಷನ್ ಯೋಜನೆಯು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಅನುಷ್ಠಾನವಾಗುತ್ತಿದ್ದು. 24*7 ನೀರು ಸರಬರಾಜು ಸೇವೆ ಒದಗಿಸುವುದೇ ಯೋಜನೆಯ ಗುರಿ ಆಗಿದೆ ಎಂದರು.ಸಾರ್ವಜನಿಕರು ನೀರಿನ ಸದ್ಭಳಕೆ ಮಾಡಿಕೊಂಡು, ನಿಯಮಿತವಾಗಿ ಉಪಯೋಗಿಸಿಕೊಳ್ಳಬೇಕು ಎಂದು ಹೇಳಿದರು.ಇದೇ ವೇಳೆ 24/7 ನೀರು ಸರಬರಾಜಿನ ಸಮರ್ಕ ಬಳಕೆ ಕುರಿತು ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
24*7 ನೀರು ಸರಬರಾಜು ಯೋಜನೆ ಘೋಷಣೆ ಅಂಗವಾಗಿ ಶಾಲಾ ಮಕ್ಕಳಿಗೆ ಏರಿ್ಡಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಇದಕ್ಕೂ ಮುನ್ನ ಜೆಜೆಎಂ ನಳಕ್ಕೆ ಗಂಗೆ ಪೂಜೆ ಸಲ್ಲಿಸಿ 24*7 ನೀರು ಸರಬರಾಜು ಯೋಜನೆಗೆ ಸಾಂಕೇತಿಕವಾಗಿ ಚಾಲನೆ ನೀಡಲಾಯಿತು.ಈ ಸಂದರ್ಭದಲ್ಲಿ ಗ್ರಾಮೀಣ ಮತ್ತು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ಇಂದುಧರ್, ಸಂಡೂರು ತಾಲ್ಲೂಕು ಪಂಚಾಯಿತಿಯ ಕಾರ್ಯ ನಿರ್ವಾಹಕ ಅಧಿಕಾರಿ ರೇಣುಕಾ ಸ್ವಾಮಿ, ಬನ್ನಿಹಟ್ಟಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಜಗದೀಶ್, ಫೀಡ್ ಬ್ಯಾಕ್ ಫೌಂಡೇಶನ್ ಸಿಇಒ ಅಜಯ್ ಸಿನ್ಹ ಸೇರಿದಂತೆ ಗ್ರಾಪಂ ಸದಸ್ಯರು, ಗ್ರಾಮದ ಮುಖಂಡರು, ಶಿಬಿರಾರ್ಥಿಗಳು, ಸಾರ್ವಜನಿಕರು ಹಾಗೂ ಇತರರು ಉಪಸ್ಥಿತರಿದ್ದರು.