ಸರ್ಕಾರಿ ಇಲಾಖೆಯ ಕಾರ್ಯಕ್ರಮಗಳಲ್ಲಿ ಪ್ಲಾಸ್ಟಿಕ್ ವಾಟರ್ ಬಾಟಲ್ ಬಳಸೀರಿ, ಜೋಕೆ !!
ಕಾರವಾರ 09: ಸರಕಾರಿ ಇಲಾಖೆಗಳ ಕಾರ್ಯಕ್ರಮದ ವೇದಿಕೆಗಳಲ್ಲಿ ಇನ್ಮುಂದೆ ಪ್ಲಾಸ್ಟಿಕ್ ವಾಟರ್ ಬಾಟಲ್ ಬಳಸುವಂತಿಲ್ಲ. ಸಿಂಗಲ್ ಯುಜ್ ಪ್ಯಾಕಡ್ ವಾಟರ್ ಬಾಟಲ್ ಬಳಕೆ ನಿಷೇಧಿಸಿ ವಿಧಾನಸೌಧ ಸಚಿವಾಲಯದ ಉಪ ಕಾರ್ಯದರ್ಶಿ ಕೆ.ರವೀಂದ್ರ ಇದೇ ಜನವರಿ 31 ರಂದು ಆದೇಶ ಹೊರಡಿಸಿದ್ದಾರೆ. ಈ ಆದೇಶದ ಪ್ರತಿ ಜಿಲ್ಲಾಧಿಕಾರಿ ಕಚೇರಿಯಿಂದ ಹಿಡಿದು ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆಗಳಿಗೆ ಈಗಾಗಲೇ ತಲುಪಿದೆ.
ಆದರೂ ಕೆಲವು ಗ್ರಾಮ ಪಂಚಾಯತ್ , ಜಿಲ್ಲೆಯ ಕೆಲ ನಗರಸಭೆಯ ಪರಿಸರ, ಆರೋಗ್ಯ ಅಧಿಕಾರಿಗಳು ಸರ್ಕಾರದ ಈ ಆದೇಶ ತಲುಪಿಲ್ಲ ಎನ್ನುತ್ತಿವೆ. ಸಿಂಗಲ್ ಯುಜ್ ಪ್ಯಾಕಡ್ ವಾಟರ್ ಬಾಟಲ್ ನಿಷೇಧದ ಆದೇಶ ತಲುಪಿದೆ. ಈ ಬಗ್ಗೆ ಜಾಗೃತಿ ಆರಂಭಿಸುತ್ತೇವೆ ಎನ್ನುತ್ತಾರೆ ನಗರಸಭೆಯ ಅಧಿಕಾರಿಗಳು.ಸರ್ಕಾರಿ ಆದೇಶದಂತೆ, ಸರಕಾರಿ ಕಚೇರಿಗಳು, ಸರ್ಕಾರದ ಎಲ್ಲಾ ಇಲಾಖೆಗಳು ಪ್ಲಾಸ್ಟಿಕ್ ವಾಟರ್ ಬಾಟಲ್ ಗಳನ್ನು ಕಾರ್ಯಕ್ರಮದ ನೆಪದಲ್ಲಿ ಖರೀದಿಸಿ, ವೆಚ್ಚ ತೋರಿಸುವಂತಿಲ್ಲ.ಸರ್ಕಾರಿ ಅಧೀನದ ನಿಗಮ ಮಂಡಳಿಗಳು, ಸರ್ಕಾರದಿಂದ ಅನುದಾನಿತ ಸಂಸ್ಥೆಗಳು, ಶಾಲಾ ಕಾಲೇಜುಗಳಲ್ಲಿ, ಸರ್ಕಾರಿ ಕಚೇರಿಯಲ್ಲಿ ಹಾಗೂ ಕಾರ್ಯಕ್ರಮಗಳಲ್ಲಿ ಪ್ಲಾಸ್ಟಿಕ್ ವಾಟರ್ ಬಾಟಲ್ ಬಳಸುವಂತಿಲ್ಲ. ಪ್ಲಾಸ್ಟಿಕ್‌ವಾಟಾರ್ ಬಾಟಲ್ ಬಳಕೆ ನಿಷೇಧದ ಆದೇಶ ಇದೇ ಮೊದಲಲ್ಲ. 5 ಸೆಪ್ಟಂಬರ್ 2018 ರಲ್ಲೇ ಸರ್ಕಾರ ಪ್ಲಾಸ್ಟಿಕ್ ವಾಟರ್ ಬಾಟಲ್ ಬಳಕೆ ನಿಷೇಧಿಸಿ ಆದೇಶ ಹೊರಡಿಸಿತ್ತು.
ಆದರೆ ಇದನ್ನು ಕಟ್ಟುನಿಟ್ಟಾಗಿ ಯಾರು ಪಾಲಿಸುತ್ತಿರಲಿಲ್ಲ. ಈಗ 2025 ಜನವರಿಯಲ್ಲಿ ಮತ್ತೆ ಸರ್ಕಾರರ ಉಪ ಕಾರ್ಯದರ್ಶಿ ಪ್ಲಾಸ್ಟಿಕ್ ಬಾಟಲ್ ನೀರಿಗೆ ನಿಷೇಧ ಹೇರಿದ್ದು,ಪರಿಸರ ಕಾಳಜಿಯ ಉದ್ದೇಶ ಹೊಂದಿದೆ.ಪ್ಲಾಸ್ಟಿಲ್ ಬಾಟಲ್ ನದಿ , ಸಮುದ್ರ ಸೇರಿದರೆ ಜಲ ಮೂಲ ಬತ್ತುತ್ತವೆ ಹಾಗೂ ಸಮುದ್ರದ ಜೀವಿಗಳ ಜೀವಕ್ಕೆ ಅಪತ್ತು ಕಾದಿದೆ ಎಂಬ ವೈಜ್ಞಾನಿಕ ಸತ್ಯದ ಹಿನ್ನೆಲೆಯಲ್ಲಿ , ಗ್ಲೋಬಲ್ ವಾಮಿಂರ್ಗ್ ನಿಯಂತ್ರಣದ ಮಹತ್ತರ ಉದ್ದೇಶದಿಂದ ಪ್ಲಾಸ್ಟಿಕ್ ಬಳಕೆಗೆ ಹಂತ ಹಂತವಾಗಿ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ.
ಮಾರಾಟಕ್ಕೆ ಬಿದ್ದಿಲ್ಲ ಬ್ರೇಕ್ :ಅರ್ದ ಲೀಟರ್, ಒಂದು ಲೀಟರ್ ವಾಟರ್ ಬಾಟಲ್ ಮಾರಾಟಕ್ಕೆ ಸರ್ಕಾರ ನಿಷೇಧ ಹೇರಿಲ್ಲ. ಮೊದಲು ಬಳಕೆದಾರರಲ್ಲಿ ಜಾಗೃತಿ ಮೂಡಿಸುವುದು ಮೊದಲ ಹಂತ. ಒಮ್ಮೆ ಜಾಗೃತಿ ಬಂದ ಮೇಲೆ ಒಂದು ಲೀಟರ್ ಪ್ಲಾಸ್ಟಿಕ್ ವಾಟರ್ ಬಾಟಲ್ ನಿಷೇಧ ಎರಡನೇ ಹಂತದ ಕಾರ್ಯಾಚರಣೆ ಎಂದು ಹೆಸರು ಹೇಳಲು ಇಚ್ಚಿಸದ ಅಧಿಕಾರಿ ಅಭಿಪ್ರಾಯಪಟ್ಟರು. ಸಮುದ್ರಕ್ಕೆ ಸೇರುವ ಪ್ಲಾಸ್ಟಿಕ್ ನಲ್ಲಿ ಬಾಟಲ್ ಪ್ರಮಾಣವೇ ಹೆಚ್ಚು. ಅರಣ್ಯ, ನದಿ, ಸಮುದ್ರ ಹೊಂದಿರುವ ಉತ್ತರ ಕನ್ನಡ ಜಿಲ್ಲೆ ಪಶ್ಚಿಮ ಘಟ್ಟದ ತವರು. ನದಿ ಸಮುದ್ರಕ್ಕೆ ಸೇರುವ ಪ್ಲಾಸ್ಟಿಕ್ ನಿಯಂತ್ರಣಕ್ಕೆ ವಿಶೇಷ ಜಾಗೃತಿ ಅಭಿಯಾನದ ಅಗತ್ಯ ಹೆಚ್ಚಾಗಿದೆ.
ಈ ನಿಟ್ಟಿನಲ್ಲಿ ಸರ್ಕಾರಿ ಇಲಾಖೆಗಳಲ್ಲಿ ಪ್ಲಾಸ್ಟಿಕ್ ಬಾಟಲ್ ನಿಷೇಧ ಒಂದು ಉತ್ತಮ ಹೆಜ್ಜೆ ಎಂಬ ಮಾತು ಕೇಳಿ ಬಂದಿದೆ.ಕಾರವಾರದಲ್ಲಿ ದಿನಕ್ಕೆ 27 ಟನ್ ಕಸ ಉತ್ಪತ್ತಿ :ಕಾರವಾರ ನಗರಸಭೆಯಲ್ಲಿ 31 ವಾರ್ಡ ಗಳಿದ್ದು ಇಲ್ಲಿ ಪ್ರತಿ ದಿನ 27 ಟನ್ ಕಸ ಉತ್ಪತ್ತಿಯಾಗುತ್ತಿದೆ. ಇದನ್ನು ಶಿರವಾಡ ಕಸದ ಯಾರ್ಡಗೆ ಕಳಿಸಿ, ಅಲ್ಲಿ ಪ್ಲಾಸ್ಟಿಕ್ ಚೀಲ ಮತ್ತು ಬಾಟಲ್ ಪ್ರತ್ಯೇಕಿಸಲಾಗುತ್ತಿದೆ. ಪ್ರತಿ ದಿನ 4 ರಿಂದ 5 ಟನ್ ಪ್ಲಾಸ್ಟಿಕ್ ಹಾಗೂ ಬಾಟಲ್ ಲಭ್ಯವಾಗುತ್ತಿದೆ. ಪ್ರತಿ ತಿಂಗಳು ಬಳಕೆಯಾದ ಐದು ಲೋಡ್ ಗಳಷ್ಟು ಪ್ಲಾಸ್ಟಿಕ್ ಬಾಟಲ್ ಹಾಗೂ ಚೀಲಗಳನ್ನು ಬೆಳಗಾವಿಗೆ ಕಳಿಸಲಾಗುತ್ತಿದೆ.
ಇದರಿಂದ ಬರುವ ಆದಾಯ ಸಾಗಾಣಿಕೆ ವೆಚ್ಚಕ್ಕಿಂತ ಅತೀ ಕಡಿಮೆ.ಪ್ಲಾಸ್ಟಿಕ್ ಚೀಲ ಬಳಸುವವರಿಗೆ ದಂಡ :ಕಾರವಾರದಲ್ಲಿ ನಿಷೇಧಿತ ಪ್ಲಾಸ್ಟಿಕ್ ಚೀಲಬಳಸುವ ವ್ಯಾಪಾರಿಗಳಿಗೆ ದಂಡ ಹಾಕುವ ಕ್ರಿಯೆ ಅಗಾಗ ನಡೆಯುತ್ತದೆ. ಆದರೂ ಪ್ಲಾಸ್ಟಿಕ್ ಬಳಕೆ ನಿಂತಿಲ್ಲ. ಕಾರವಾರದ ಕೊಣೆನಾಲಾ ಎಂಬ ಕೊಳಚೆ ಹರಿವ ನಾಲಾದಲ್ಲಿ ಬಳಕೆಯಾದ ಪ್ಲಾಸ್ಟಿಕ್ ಚೀಲ ಹಾಗೂ ಬಾಟಲ್ ಹೆಚ್ಚಿನ ಪ್ರಮಾಣದಲ್ಲಿದೆ. ಈ ನಾಲಾದ ನೀರು ಪ್ಲಾಸ್ಟಿಕ್ ಸಹಿತ ನೇರ ಅರಬ್ಬೀ ಸಮುದ್ರವನ್ನು ಸೇರುತ್ತಿದೆ. ಈ ಅಪಾಯದ ಬಗ್ಗೆ ಕಾರವಾರ ನಗರಸಭೆ ಇನ್ನು ಎಚ್ಚೆತ್ತು ಕೊಂಡಿಲ್ಲ.ನಿಷೇಧಿತ ಪ್ಲಾಸ್ಟಿಕ್ ಚೀಲವಶಕ್ಕೆ ಡಿಸೆಂಬರ್ ಜನೇವರಿ ಸೇರಿ 37100 ರೂ. ದಂಡ ವಸೂಲಿ ಮಾಡಲಾಗಿದೆ.
ಕಳೆದ ಡಿಸೆಂಬರ್ ನಲ್ಲಿ 206 ಕೆಜಿ, ಜನವರಿಯಲ್ಲಿ 270 ಕೆಜಿ ಪ್ಲಾಸ್ಟಿಕ್ ಚೀಲ ವಶಪಡಿಸಿಕೊಳ್ಳಲಾಗಿದೆ ಎನ್ನುತ್ತಾರೆ ನಗರಸಭೆ ಪರಿಸರ ಅಧಿಕಾರಿ ಯಾಕೋಬ್.ಇನ್ನು ಪರಿಸರ ಇಲಾಖೆ ಪ್ಲಾಸ್ಟಿಕ್ ಬಳಕೆಯ ಬಗ್ಗೆ ಕಾಟಾಚಾರಕ್ಕೆ ಒಂದೆರಡು ಕಾರ್ಯಕ್ರಮ ಮಾಡಿ ಕೈತೊಳೆದು ಕೊಳ್ಳುತ್ತಿದೆ.