ಕಿತ್ತೂರುರಾಣಿ ಚೆನ್ನಮ್ಮ ವೃತ್ತ ಅಭಿವೃದ್ಧಿಪಡಿಸುವಂತೆ ಒತ್ತಾಯ
ಕಂಪ್ಲಿ 14: ವೀರವನಿತೆ ಕಿತ್ತೂರುರಾಣಿ ಚೆನ್ನಮ್ಮ ವೃತ್ತ ಅಭಿವೃದ್ಧಿಪಡಿಸಬೇಕೆಂದು ಆಗ್ರಹಿಸಿ, ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯದಿಂದ ಪಟ್ಟಣದ ಪುರಸಭೆ ಕಛೇರಿಯಲ್ಲಿ ಅಧ್ಯಕ್ಷ ಭಟ್ಟ ಪ್ರಸಾದ್ ಹಾಗೂ ಮುಖ್ಯಾಧಿಕಾರಿ ಕೆ.ದುರುಗಣ್ಣ ಇವರಿಗೆ ಶುಕ್ರವಾರ ಮನವಿ ಪತ್ರ ಸಲ್ಲಿಸಿದರು.
ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯದ ತಾಲೂಕು ಅಧ್ಯಕ್ಷ ಎಸ್.ಚಂದ್ರಶೇಖರಗೌಡ ಬೆಳಗೋಡ್‌ಹಾಳ್ ಮಾತನಾಡಿ, ಐತಿಹಾಸಿಕ ಗಂಡುಗಲಿ ಕುಮಾರ ರಾಮ ಕೋಟೆ ಎಂದೇ ಪ್ರಖ್ಯಾತಿ ಹೊಂದಿರುವ ಕಂಪ್ಲಿ ಪಟ್ಟಣದ ಹೊಸಪೇಟೆ ಬೈಪಾಸ್ ರಸ್ತೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಳಿಯಲ್ಲಿರುವ ಮುಖ್ಯರಸ್ತೆಯ ಮಧ್ಯದಲ್ಲಿ ಕನ್ನಡ ನೆಲದ ವೀರವಿನಿತೆ, ಶೌರ್ಯ, ಹೋರಾಟದ ಪ್ರತೀಕ ಕಿತ್ತೂರುರಾಣಿ ಚೆನ್ನಮ್ಮ ವೃತ್ತವನ್ನು ಈ ಹಿಂದೆಯೇ ನಿರ್ಮಿಸಲಾಗಿದೆ.
ಇಲ್ಲಿನ ವೃತ್ತವು ರಸ್ತೆ ಬದಿಯಲ್ಲಿ ಇದೆ. ಈಗಾಗಲೇ ಬೈಪಾಸ್ ರಸ್ತೆ ಅಗಲೀಕರಣ ಹಾಗೂ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದ್ದು, ಕೂಡಲೇ ಅಧ್ಯಕ್ಷರು, ಅಧಿಕಾರಿಗಳು ಗಮನ ಹರಿಸಿ, ವೃತ್ತವನ್ನು ರಸ್ತೆ ಮಧ್ಯದಲ್ಲಿ ನಿರ್ಮಿಸಿ, ಅಭಿವೃದ್ಧಿ ಪಡಿಸಬೇಕೆಂದು ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯದಿಂದ ಒತ್ತಾಯಿಸಲಾಯಿತು ಎಂದರು. ನಂತರ ತಹಶೀಲ್ದಾರ್ ಶಿವರಾಜ ಶಿವಪುರ ಇವರಿಗೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಬಿ.ವಿ.ಗೌಡ, ಕನಕಗಿರಿ ರೇಣುಕಾಗೌಡ, ಇಟಗಿ ಶರಣಗೌಡ, ರಾಜಶೇಖರ, ಶಂಭುಲಿಂಗ, ಡಿಎಚ್‌ಎಂ ರವೀಂದ್ರ ಸೇರಿದಂತೆ ಸಮಾಜದವರು ಇದ್ದರು.