ಉದ್ಯೋಗಸ್ಥ ಮಹಿಳೆಯರಿಗೆ ನೆಮ್ಮದಿ ಕಲ್ಪಿಸಿದ ವಿಜಯಪುರ ಶಿಶುಪಾಲನಾ ಕೇಂದ್ರ
Vijayapura childcare center provides peace of mind to working women
ವಿಜಯಪುರ 11: ನಗರಗಳಲ್ಲಿ ದಂಪತಿಗಳಿಬ್ಬರು ಉದ್ಯೋಗದಲ್ಲಿದ್ದರೆ ಚಿಕ್ಕ ಮಕ್ಕಳನ್ನು ಆರೈಕೆ ಮಾಡುವುದೇ ದೊಡ್ಡ ಸವಾಲು. ಇದೇ ಕಾರಣಕ್ಕೆ ಅದೆಷ್ಟೋ ಪೋಷಕರು ಉದ್ಯೋಗ ಬಿಡುವುದು ಸಾಮಾನ್ಯವಾಗಿದೆ. ಆದರೆ ಉದ್ಯೋಗಿಗಳಿಗೆ ಆಗುತ್ತಿರುವ ಈ ತಾಪತ್ರಯ ನೀಗಿಸಬೇಕೆಂಬ ದೂರದೃಷ್ಟಿಯಿಂದ ಜಿಲ್ಲಾ ಪಂಚಾಯತಿ ಆವರಣದಲ್ಲಿ ಶಿಶುಪಾಲನಾ ಕೇಂದ್ರವನ್ನು ಆರಂಭಿಸಲಾಗಿದೆ.
ಉದ್ಯೋಗಸ್ಥ ಮಹಿಳೆಯರ ಪಾಲಿಗೆ ಸರ್ಕಾರದ ಈ ಶಿಶುಪಾಲನಾ ಕೇಂದ್ರಗಳು ಆಪತ್ಬಾಂಧವರಂತೆ ಕಾರ್ಯನಿರ್ವಹಿಸುತ್ತಿವೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಈ ಶಿಶುಪಾಲನಾ ಕೇಂದ್ರವನ್ನು ವಿಜಯಪುರ ಜಿಲ್ಲಾ ಪಂಚಾಯತಿ ಕಟ್ಟಡದಲ್ಲಿ ಕಳೆದ ಮೂರು ವರ್ಷಗಳಿಂದ ಅತ್ಯುತ್ತಮವಾಗಿ ನಿರ್ಹಿಹಿಸಲಾಗುತ್ತಿದೆ. ಆದರೆ ಇದೀಗ ಹೊಸದಾಗಿ ಶಿಶುಪಾಲನಾ ಕೇಂದ್ರವನ್ನು ನಿರ್ಮಾಣ ಮಾಡಲಾಗಿದೆ. ನೌಕರಿಗೆ ಬರುವ ಮಹಿಳಾ ಸಿಬ್ಬಂದಿಯ ಶಿಶುಗಳ ಆರೈಕೆ ಕೇಂದ್ರ ಸ್ಥಾಪಿಸಿದ್ದು, ಇದರಿಂದಾಗಿ ಮಹಿಳಾ ನೌಕರರು ನಿಶ್ಚಿಂತೆಯಿಂದ ಕೆಲಸ ಮಾಡುವಂತಾಗಿದೆ. ತಮ್ಮ ಮಕ್ಕಳನ್ನು ಶಿಶುಪಾಲನಾ ಕೇಂದ್ರದಲ್ಲಿ ಬಿಟ್ಟು ಹೋದರೆ ಅವರನ್ನು ಬೆಳಿಗ್ಗೆಯಿಂದ ಸಂಜೆವರೆಗೂ ಕೇಂದ್ರದ ಸಿಬ್ಬಂದಿಯೇ ಆರೈಕೆ ಮಾಡುತ್ತಾರೆ. ಪ್ಲೇ ಹೋಂ ರೀತಿ ಕೇಂದ್ರ ಸಿದ್ಧಪಡಿಸಲಾಗಿದೆ.
ಪ್ರತ್ಯೇಕ ಅಡುಗೆ ಕೋಣೆ, ಆಟದ ಕೋಣೆ, ವಿಶ್ರಾಂತಿ ಕೋಣೆ, ಮೇಜು, ಮಕ್ಕಳಿಗೆ ಭಾಷಾ ಬೆಳವಣಿಗೆಗೆ ಸಹಾಯಕವಾಗುವ ಮಕ್ಕಳ ಸ್ನೇಹಿ ಪೇಂಟಿಂಗ್, ಮಕ್ಕಳ ಬುದ್ಧಿವಿಕಾಸ ಹಾಗೂ ಸೃಜನಶೀಲತೆ ಹೆಚ್ಚಿಸಲು ಬುದ್ದಿವರ್ಧಕ ಆಟಿಕೆಗಳು ಮತ್ತು ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಗಿದೆ.
ಪ್ರತ್ಯೇಕ ಶೌಚಾಲಯ, ಕೇಂದ್ರದ ಆವರಣದ ಆಟದ ಮೈದಾನದಲ್ಲಿ ಮಕ್ಕಳು ಸ್ವತಂತ್ರವಾಗಿ ಆಟವಾಡಲು ಜೋಕಾಲಿ, ಜಾರುಬಂಡಿ ಹಾಗೂ ಇತರೆ ಆಟದ ಸಾಮಗ್ರಿಗಳನ್ನು ಅಳವಡಿಸಲಾಗಿದೆ.ಜೊತೆಗೆ ಪೌಷ್ಠಿಕ ಕೈತೋಟವನ್ನೂ ಸಹ ನಿರ್ಮಿಸಲಾಗಿದೆ.
ಹೀಗೆ ಅನೇಕ ಸೌಲಭ್ಯಗಳುಳ್ಳ ಸುಸಜ್ಜಿತ ಕಟ್ಟಡ ಇದಾಗಿದೆ. ಉತ್ತಮ ಆರೋಗ್ಯಕ್ಕಾಗಿ ಕೇಂದ್ರದಲ್ಲಿ ಮಕ್ಕಳಿಗೆ ಹಾಲು, ಮೊಟ್ಟೆ, ರಾಗಿ ಗಂಜಿ, ಅನ್ನ, ತರಕಾರಿ ಸಾರು, ಸಜ್ಜಕ, ಶೇಂಗಾ ಲಡ್ಡು, ಹೆಸರು ಕಾಳು, ಬಾಳೆ ಹಣ್ಣು ಹೀಗೆ ದಿನಾಲೂ ವಿವಿಧ ಮೆನು ಪ್ರಕಾರ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಮಕ್ಕಳ ಲಾಲನೆ-ಪಾಲನೆ ಜೊತೆಗೆ ಅವರಿಗೆ ಆಟವಾಡಲು ಆಟಿಕೆ ಸಾಮಾನುಗಳು, ಕಲಿಕಾ ಸಾಮಗ್ರಿಗಳು, ತೊಟ್ಟಿಲು ಸೇರಿದಂತೆ ಇತರೆ ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ಈ ಶಿಶುಪಾಲನಾ ಕೇಂದ್ರ ಮಾದರಿಯಾಗಿದೆ.
ಜಿಲ್ಲಾ ಪಂಚಾಯತಿ ಕಚೇರಿ ಅವರಣದಲ್ಲಿ ಉದ್ಯೋಗಸ್ಥ ಮಹಿಳೆಯರ ಮಕ್ಕಳ ಆರೈಕೆಗಾಗಿ ಕಾರ್ಯನಿರ್ವಹಿಸುತ್ತಿರುವ ಈ ಶಿಶುಪಾಲನಾ ಕೇಂದ್ರ ಪೋಷಕರ ಮೆಚ್ಚುಗೆಗೆ ಪಾತ್ರವಾಗಿದೆ.
ಜಿಲ್ಲಾ ಪಂಚಾಯತಿಯ ಸಿಇಒ ರಿಷಿ ಆನಂದ ಅವರು ಆಗಾಗ ಶಿಶು ಪಾಲನಾ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳ ಜೊತೆ ಖುಷಿಯಿಂದ ಕೆಲ ಹೊತ್ತು ಕಳೆಯುತ್ತಾರೆ. ಜಿಲ್ಲಾ ಪಂಚಾಯತಿ, ತಹಶೀಲ್ದಾರ್ ಕಚೇರಿ, ಜಿಲ್ಲಾ ನ್ಯಾಯಾಲಯ, ಪೊಲೀಸ್ ಇಲಾಖೆ ಸೇರಿದಂತೆ ಮುಂತಾದ ಇಲಾಖೆಗಳಲ್ಲಿನ ಮಹಿಳಾ ನೌಕರರು ತಮ್ಮ ಮಕ್ಕಳನ್ನು ಶಿಶುಪಾಲನಾ ಕೇಂದ್ರದಲ್ಲಿ ಬಿಟ್ಟು ನಿರಾಳವಾಗಿ ತಮ್ಮ ಕಚೇರಿಗೆ ಹೊರಡುತ್ತಾರೆ. ಕೇಂದ್ರದಲ್ಲಿ ಓರ್ವ ಶಿಕ್ಷಕಿ ಮತ್ತು ಇಬ್ಬರು ಸಹಾಯಕಿಯರು ಮಕ್ಕಳ ಲಾಲನೆ ಪಾಲನೆ ಮಾಡುತ್ತಿದ್ದು, ತಮ್ಮ ಸ್ವಂತ ಮಕ್ಕಳಂತೆ ಲಾಲನೆ ಪಾಲನೆ ಮಾಡುತ್ತಿದ್ದಾರೆ. ಸಮಯಕ್ಕೆ ತಕ್ಕಂತೆ ಪೌಷ್ಟಿಕ ಆಹಾರ ಒದಗಿಸುವುದು, ಆಟ-ಪಾಠ, ಗೋಡೆಯ ಮೇಲಿನ ಚಿತ್ರಗಳನ್ನು ತೋರಿಸಿ ಮಕ್ಕಳನ್ನು ಖುಷಿಪಡಿಸುತ್ತಾರೆ. ಜೊತೆಗೆ ದೈಹಿಕ ಚಟುವಟಿಕೆಗಳನ್ನು ಮಾಡಿಸುತ್ತಾರೆ.
ಈ ಶಿಶುಪಾಲನಾ ಕೇಂದ್ರವು ಮಕ್ಕಳ ಆರೈಕೆ, ಸುರಕ್ಷತೆ, ಪೌಷ್ಟಿಕ ಆಹಾರ ಹಾಗೂ ಶಾಲಾ ಶಿಕ್ಷಣವನ್ನು ಒದಗಿಸುವ ಉದ್ದೇಶ ಹೊಂದಿದೆ. ಅಷ್ಟೇ ಅಲ್ಲದೆ, ಮಕ್ಕಳನ್ನು ಅತ್ಯಂತ ಕಾಳಜಿಯಿಂದ ನೋಡಿಕೊಳ್ಳಲು ಉತ್ತಮ ಆರೋಗ್ಯ, ಪೌಷ್ಟಿಕ ಆಹಾರ, ಸ್ವಚ್ಛತೆ ಹಾಗೂ ಸುರಕ್ಷತೆಗೆ ವಿಶೇಷ ಗಮನ ವಹಿಸಲಾಗುತ್ತದೆ.
ಮಕ್ಕಳೊಂದಿಗೆ ಪ್ರೀತಿಯಿಂದ ಮತ್ತು ಸಹನೆಯಿಂದ ವರ್ತಿಸಿ, ಅವರಿಗೆ ಭದ್ರ ಮತ್ತು ಸ್ನೇಹಪರ ವಾತಾವರಣವನ್ನು ಒದಗಿಸಲಾಗುತ್ತಿದೆ. ಪ್ರತಿ ಮಗುವಿನಲ್ಲಿ ಇರುವ ಪ್ರತಿಭೆಯನ್ನು ಉತ್ತೇಜಿಸುವುದು, ಆಟದ ಮೂಲಕ ಕಲಿಕೆ, ಬುದ್ದಿವರ್ಧಕ ಆಟಿಕೆಗಳ ಬಳಕೆ ಹಾಗೂ ಸೃಜನಶೀಲ ಚಟುವಟಿಕೆಗಳ ಮೂಲಕ ಅವರ ಬುದ್ಧಿವಿಕಾಸವನ್ನು ಹೆಚ್ಚಿಸಲು ಪ್ರಯತ್ನಿಸಲಾಗುತ್ತಿದೆ.
ಜಿಲ್ಲಾ ಪಂಚಾಯಿತಿಯ ಕಟ್ಟಡ ನಿರ್ಮಾಣ ಹಾಗೂ ನಿರ್ವಹಣೆಯ 30.00 ಲಕ್ಷ ಅನುದಾನವನ್ನು ಬಳಸಿಕೊಂಡು ಈ ಶಿಶುಪಾಲನಾ ಕೇಂದ್ರ ಸ್ಥಾಪಿಸಲಾಗಿದೆ. ಜಿಲ್ಲಾ ಪಂಚಾಯತಿ ಹಾಗೂ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತ (ಕೆ.ಆರ್.ಐ.ಡಿ.ಎಲ್) ಇಲಾಖೆಯ ಸಹಯೋಗದಲ್ಲಿ ಈ ಶಿಶುಪಾಲನಾ ಕೇಂದ್ರವನ್ನು ನಿರ್ಮಾಣ ಮಾಡಲಾಗಿದೆ. ಈ ಕೇಂದ್ರದ ಸ್ಥಾಪನೆಯಿಂದಾಗಿ ಉದ್ಯೋಗಸ್ಥ ಮಹಿಳೆಯರ ಮನೆಗಳಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಯಾರೂ ಇಲ್ಲದಿರುವ ಪರಿಸ್ಥಿತಿಯಲ್ಲಿ ನೌಕರರಿಗೆ ಹೆಚ್ಚು ಅನುಕೂಲವಾಗಿದೆ. ಬೆಳಿಗ್ಗೆ ಕರ್ತವ್ಯಕ್ಕೆ ಬರುವಾಗ ಮಕ್ಕಳನ್ನು ಜೊತೆಗೆ ಕರೆದುಕೊಂಡು ಬಂದು ಈ ಕೇಂದ್ರದಲ್ಲಿ ಬಿಡಬಹುದಾಗಿದೆ. ಮಕ್ಕಳು ಸಣ್ಣವರಾಗಿದ್ದರೆ ತಾಯಂದಿರು ಇಲ್ಲಿ ಹಾಲುಣಿಸಬಹುದಾಗಿದೆ. ಮಕ್ಕಳ ದೈಹಿಕ - ಮಾನಸಿಕ ಬೆಳವಣಿಗೆಗೆ ಸಹಾಯಕ:
ಇಲ್ಲಿ ಮಕ್ಕಳಿಗೆ ಭಾಷಾ ಬೆಳವಣಿಗೆ, ವಸ್ತುಗಳ ಗುರುತಿಸುವಿಕೆ, ಕನ್ನಡ-ಇಂಗ್ಲಿಷ್ ರೈಮ್ಸ್, ಕಥೆಗಳನ್ನು ಹೇಳಿಕೊಡುತ್ತಾರೆ. ಅದೇ ರೀತಿ ಮ್ಯೂಸಿಕಲ್ ಚೇರ್, ಕಣ್ಣಾ ಮುಚ್ಚಾಲೆ, ರೈಲು ಬಂಡಿ, ಜಾರು ಬಂಡಿ, ಚೆಂಡಿನ ಆಟ ಸೇರಿದಂತೆ ದೈಹಿಕ ಮತ್ತು ಮಾನಸಿಕ ಚಟುವಟಿಕೆಗಳನ್ನು ಮಾಡಿಸಲಾಗುತ್ತಿದೆ. ಆಟಿಕೆ ಸಾಮಾನು, ತೊಟ್ಟಿಲು, ಮಕ್ಕಳ ಆಟಿಕೆ ಸಾಮಗ್ರಿಗಳು ಸೇರಿ ಮತ್ತಿತರ ಸಾಮಗ್ರಿಗಳೊಂದಿಗೆ ಮಕ್ಕಳು ಸಖತ್ ಎಂಜಾಯ್ ಮಾಡುತ್ತಿದ್ದು, ಕುಣಿದು, ಕುಪ್ಪಳಿಸುತ್ತಾರೆ. ಇಲ್ಲಿ ಮಕ್ಕಳಿಗೆ ಕಲಿಕೆ ಜೊತೆಗೆ ನಲಿವು ಸಿಗುತ್ತಿದೆ.
ಶಿಶುಪಾಲನಾ ಕೇಂದ್ರದತ್ತ ಸಚಿವರು, ಸಂಸದರು, ಶಾಸಕರು ಹಾಗೂ ಅಧಿಕಾರಿಗಳ ಭೇಟಿ: ಇತ್ತೀಚೆಗೆ ಲೋಕಾರೆ್ಣಗೊಂಡ ಶಿಶುಪಾಲನಾ ಕೇಂದ್ರಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಕರ್ಯಗಳ ಅಭಿವೃದ್ಧಿ ಸಚಿವರು ಮತ್ತು ವಿಜಯಪುರ ಜಿಲ್ಲೆಯ ಉಸ್ತುವಾರಿ ಸಚಿವರಾದ ಡಾ. ಎಂ. ಬಿ. ಪಾಟೀಲ, ಸಂಸದರಾದ ರಮೇಶ ಜಿಗಜಿಣಗಿ, ಶಾಸಕರಾದ ಅಶೋಕ ಮನಗೂಳಿ,ಪರಿಷತ್ ಶಾಸಕರಾದ ರವಿಕುಮಾರ ಎನ್, ಕರ್ನಾಟಕ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ. ಎಸ್.ಆರ್.ಪಾಟೀಲ (ಬ್ಯಾಡಗಿ),ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿಗಳಾದ ಬಿ. ಎಸ್. ಪಾಟೀಲ, ಕರ್ನಾಟಕ ರಾಷ್ಟ್ರೀಯ ಜೀವನೋಪಾಯ ಅಭಿಯಾನದ ನಿರ್ದೇಶಕರಾದ ಸ್ನೇಹಲ್ ಆರ್, ರಾಜ್ಯ ಸ್ವೀಪ್ ನೋಡಲ್ ಅಧಿಕಾರಿಗಳಾದ ಪಿ. ಎಸ್. ವಸ್ತ್ರದ ಅವರು ಭೇಟಿ ನೀಡಿ ಇಲ್ಲಿನ ವ್ಯವಸ್ಥೆ ಹಾಗೂ ನಿರ್ವಹಣೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಶಿಶುಪಾಲನಾ ಕೇಂದ್ರಕ್ಕೆ 10 ತಿಂಗಳ ಮಗುವಿನ ತಾಯಿ ಹಾಗೂ ಜಿಲ್ಲಾ ಪಂಚಾಯತಿಯ ಉದ್ಯೋಗಸ್ಥ ಮಹಿಳೆ ಹೇಳುವುದೇನೆಂದರೆ,ಎಲ್ಲಾ ಕೆಲಸಕ್ಕೂ ಮಗುವನ್ನು ಜೊತೆಯಲ್ಲಿಯೇ ಕರೆದುಕೊಂಡು ಹೋಗಬೇಕಾಗುತ್ತಿತ್ತು. ಮನೆಯಲ್ಲಿ ಮಗುವನ್ನು ನೋಡಿಕೊಳ್ಳುವವರು ಯಾರೂ ಇಲ್ಲದಿರುವುದರಿಂದ ಕಚೇರಿಯಲ್ಲಿ ಕೆಲಸದ ಸಂದರ್ಭಲ್ಲಿ ಜೊತೆಯಲ್ಲಿಯೇ ಕೂರಿಸಿಕೊಂಡು ಕೆಲಸ ಮಾಡಬೇಕಾದ ಪರಿಸ್ಥಿತಿ ಉಂಟಾಗುತ್ತಿತ್ತು. ಆದರೆ, ವಿಜಯಪುರ ಜಿಲ್ಲಾ ಪಂಚಾಯತಿಯ ಶಿಶುಪಾಲನಾ ಕೇಂದ್ರದಲ್ಲಿ ಮಗುವನ್ನು ಬಿಟ್ಟು ನನ್ನೆಲ್ಲಾ ಕೆಲಸವನ್ನು ಆರಾಮವಾಗಿ ಮುಗಿಸಿಕೊಂಡು ಬಂದು ನನ್ನ ಮಗುವನ್ನು ಕರೆದುಕೊಂಡು ಹೋಗುತ್ತೇನೆ. ಇದರಿಂದ ಎಲ್ಲಾ ಉದ್ಯೋಗಸ್ಥ ತಾಯಂದಿರಿಗೆ ಹೆಚ್ಚು ಅನುಕೂಲವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಜಿ.ಪಂ.ವಿಜಯಪುರದಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ವೈಶಾಲಿ ಕುಂಬಾರ ಮಾತನಾಡಿ, ನಮ್ಮ ಪತಿಯವರು ಬೇರೆ ಊರಿಗೆ ಕೆಲಸಕ್ಕೆ ಹೋಗುತ್ತಾರೆ. ವಯಸ್ಸಾದ ಅತ್ತೆ-ಮಾವ ಮನೆಯಲ್ಲಿದ್ದಾರೆ. ಹಾಗಾಗಿ, ಮಕ್ಕಳೊಂದಿಗೆ ಕಾರ್ಯಹಿಸುವುದು ದೊಡ್ಡ ಸವಾಲಾಗಿತ್ತು. ಶಿಶುಪಾಲನಾ ಕೇಂದ್ರ ಸ್ಥಾಪನೆಗೊಂಡ ನಂತರ ಕೇಂದ್ರದಲ್ಲಿ ಮಗು ಬಿಟ್ಟ ನನಗೆ ನೆಮ್ಮದಿಯಿಂದ ಕಾರ್ಯನಿರ್ವಹಿಸಲು ಸಾಧ್ಯವಾಗಿದೆ. ಕಳೆದ ಎರಡು ವರ್ಷಗಳಿಂದ ನನ್ನ ಮಗುವನ್ನು ಕೇಂದ್ರದಲ್ಲಿ ಬಿಡುತ್ತಿದ್ದೇನೆ. ಇಲ್ಲಿನ ಸಿಬ್ಬಂದಿ ನನ್ನ ಕಂದನ ಪಾಲನೆಯನ್ನು ತುಂಬಾ ಒಳ್ಳೇಯ ರೀತಿಯಲ್ಲಿ ಮಾಡುತ್ತಿದ್ದಾರೆ ಹಾಗೂ ನನ್ನ ಮಗು ಇಲ್ಲಿ ಸುರಕ್ಷಿತವಾಗಿರುವುದರಿಂದ ನಾನು ನಿಶ್ಚಿಂತೆಯಿಂದ ಇದ್ದೇನೆ. ಕಚೇರಿ ಆರಂಭದ ವೇಳೆ ಮಗುವನ್ನು ಬಿಡುತ್ತೇನೆ. ಸಾಯಂಕಾಲ ಕೆಲಸ ಮುಗಿದ ನಂತರ ಕರೆದುಕೊಂಡು ಹೋಗುತ್ತೇನೆ ಇದರಿಂದ ಮಗುವಿನ ಪಾಲನೆಯು ಒಳ್ಳೆಯ ರೀತಿಯಲ್ಲಿ ನಡೆಯುತ್ತಿದೆ ಎಂದು ಹೇಳಿದರು.
ಕೆಲಸದ ಜಾಗದಲ್ಲಿಯೇ ಶಿಶುಪಾಲನಾ ಕೇಂದ್ರ ಆರಂಭಿಸಿದ್ದರಿಂದ ನೌಕರಿ ಮಾಡುವ ಮಹಿಳೆಯರಿಗೆ ಹೆಚ್ಚು ಅನುಕೂಲವಾಗಿದೆ. ನಿತ್ಯ 10 ರಿಂದ 15 ಮಕ್ಕಳು ಕೇಂದ್ರಕ್ಕೆ ಬರುತ್ತಾರೆ. ಇಲ್ಲಿ ಮಕ್ಕಳನ್ನು ಬಿಡುವುದರಿಂದ ತಾಯಂದಿರು ಆತಂಕ ಬಿಟ್ಟು ಕೆಲಸ ಮಾಡುತ್ತಾರೆ. ಅಷ್ಟೊಂದು ಸುರಕ್ಷತೆ ಇದೆ. ಇಲ್ಲಿ ನಾವು ಮಕ್ಕಳೊಂದಿಗೆ ಮಕ್ಕಳಾಗಿದ್ದೇವೆ. ನಮ್ಮ ಇಬ್ಬರು ಸಹಾಯಕಿಯರು ಮಕ್ಕಳಿಗೆ ಊಟ, ಆಟ,ನಿದ್ದೆ ಮಾಡಿಸುವುದು ಸೇರಿ ಎಲ್ಲವನ್ನೂ ನೋಡಿಕೊಳ್ಳುತ್ತಾರೆ. ಮಕ್ಕಳು ನಮ್ಮನ್ನು ಬಿಟ್ಟು ಹೋಗದಂತೆ ನೋಡಿಕೊಳ್ಳುತ್ತಿದ್ದೇವೆ. ಇದು ನಮಗೆ ಬಹಳಷ್ಟು ಖುಷಿ ಕೊಡುತ್ತಿದೆ" ಎನ್ನುತ್ತಾರೆ ಶಿಶುಪಾಲನಾ ಕೇಂದ್ರದ ಶಿಕ್ಷಕಿ ಐಶ್ವರ್ಯ ಗುರುವಿನಮಠ,
ಮನೆಯಲ್ಲಿ ನಮ್ಮ ಮಕ್ಕಳನ್ನು ಹೇಗೆ ನೋಡಿಕೊಳ್ಳುತ್ತೇವೋ, ಅಷ್ಟೇ ಪ್ರೀತಿಯಿಂದ ಇವರನ್ನು ನೋಡಿಕೊಳ್ಳುತ್ತಿದ್ದೇವೆ. ನಮ್ಮ ಮೇಲೆ ನಂಬಿಕೆ ಇಟ್ಟು ಮಕ್ಕಳನ್ನು ಇಲ್ಲಿ ಬಿಟ್ಟು ಅವರ ಪಾಲಕರು ಹೋಗಿರುತ್ತಾರೆ. ಹಾಗಾಗಿ, ಮಕ್ಕಳ ಲಾಲನೆ-ಪಾಲನೆ ನಮ್ಮ ಕರ್ತವ್ಯ" ಎನ್ನುತ್ತಾರೆ ಕೇಂದ್ರದ ಸಹಾಯಕಿ ಸಂಗೀತಾ ಸಾಳುಂಕೆ ವಿಜಯಪುರ
ಜಿಲ್ಲಾ ಪಂಚಾಯಿತಿಯ ಸಿಇಒ ರಿಷಿ ಆನಂದ ಮಾತನಾಡಿ, ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಈ ಶಿಶುಪಾಲನಾ ಕೇಂದ್ರದಿಂದ ಅನುಕೂಲವಾಗಿದೆ. ಬೆಳಿಗ್ಗೆ 10 ರಿಂದ ಸಂಜೆ 5.30 ಗಂಟೆಯವರೆಗೆ ಮಕ್ಕಳ ಪಾಲನೆ-ಪೋಷಣೆ ಮಾಡಲಾಗುತ್ತದೆ. ಆದ್ದರಿಂದ ಎಲ್ಲಾ ಮಹಿಳಾ ಸರ್ಕಾರಿ ನೌಕರರು ತಮ್ಮ ಮಕ್ಕಳನ್ನು ಈ ಕೇಂದ್ರದಲ್ಲಿ ಬಿಟ್ಟು ನಿಶ್ಚಿಂತೆಯಿಂದ ಕೆಲಸಕ್ಕೆ ಹೋಗಬಹುದಾಗಿದೆ.
ಮಕ್ಕಳಿಗೆ ಮೂಲ ಸೌಕರ್ಯಗಳಾದ ಪೌಷ್ಟಿಕ ಆಹಾರ, ನೀರು, ಶೌಚಾಲಯ, ಮಲಗಲು ವ್ಯವಸ್ಥೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಮಕ್ಕಳ ದೈಹಿಕ ಬೆಳವಣಿಗೆಗೆ ವಿವಿಧ ಚಟುವಟಿಕೆಗಳು, ಬೌದ್ಧಿಕ ಬೆಳವಣಿಗೆಗೆ ವಿವಿಧೆಡೆ ಚಟುವಟಿಕೆಗಳನ್ನು ಮಾಡಿಸಲಾಗುತ್ತದೆ. ವಿಶೇಷವಾಗಿ ಮಕ್ಕಳಿಗೆ ವ್ಯಾಯಾಮ ಮಾಡಿಸಲು ಪ್ರತ್ಯೇಕವಾಗಿ ಯೋಗ ಶಿಕ್ಷಕರನ್ನು ನೇಮಕ ಮಾಡಲಾಗಿದೆ ಹಾಗೂ ಪೌಷ್ಟಿಕ ಕೈತೋಟ ನಿರ್ಮಾಣ ಮಾಡಲಾಗಿದೆ. ಈ ಮೂಲಕ ಮಕ್ಕಳಿಗೆ ಶಾಲಾ ಶಿಕ್ಷಣಕ್ಕೆ ಬೇಕಾಗುವ ಎಲ್ಲಾ ವ್ಯವಸ್ಥೆಗಳನ್ನು ಒದಗಿಸಲಾಗುತ್ತಿದೆ. ಈ ಶಿಶುಪಾಲನಾ ಕೇಂದ್ರವು ಮಾದರಿ ಶಿಶುಪಾಲನಾ ಕೇಂದ್ರವಾಗಿದೆ ಎಂದಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 