‘ವೀರಶೈವ ಬೇಡ’ ಎಂಬ ಪೂರ್ವಾಗ್ರಹ ಪೀಡಿತ ಹೇಳಿಕೆಗೆ ಉಜ್ಜಯಿನಿ, ಶ್ರೀಶೈಲ ಹಾಗೂ ಕಾಶಿ ಜಗದ್ಗುರುಗಳ ಖಂಡನೆ
ಧಾರವಾಡ 09: ವೀರಶೈವ ಧರ್ಮದ ಪ್ರಾಚೀನತೆ, ಸನಾತನ ಶ್ರೇಷ್ಠತೆಯ ಘನತೆ, ಹರವು ಸೀಮಿತವಾಗಿರದೇ ಅದು ಸಮಷ್ಟಿಯಲ್ಲಿ ವಿಸ್ತಾರಗೊಂಡು ವಿಶ್ವತೋಮುಖವಾಗಿದೆ. ಸಪ್ರಮಾಣ ದಾಖಲೆಗಳೆಂದೇ ಪರಿಗಣಿಸಿರುವ ನೂರಾರು ಶಾಸನಗಳಲ್ಲಿ ಹಾಗೂ ಹಲವಾರು ಶರಣರ ವಚನಗಳಲ್ಲಿ ವೀರಶೈವದ ಉಲ್ಲೇಖ ಎದ್ದುಕಾಣುತ್ತಿದ್ದು, ಶಾಸನ-ವಚನೋಕ್ತ ವೀರಶೈವ ಧರ್ಮದ ಬೇರುಗಳು ನಿರಂತರ ಶಾಶ್ವತವಾಗಿವೆ ಎಂದು ವೀರಶೈವ ಧರ್ಮದ ಪಂಚಪೀಠಗಳ ಜಗದ್ಗುರುಗಳು ಸ್ಪಷ್ಟಪಡಿಸಿದ್ದಾರೆ. ಜಂಟಿ ಮಾಧ್ಯಮ ಪ್ರಕಟಣೆ ನೀಡಿರುವ ಉಜ್ಜಯಿನಿ ಸದ್ಧರ್ಮ ಪೀಠದ ಶ್ರೀಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಭಗವತ್ಪಾದರು, ಶ್ರೀಶೈಲ ಸೂರ್ಯ ಪೀಠದ ಶ್ರೀಜಗದ್ಗುರು ಡಾ. ಚೆನ್ನ ಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು, ಕಾಶಿ ಜ್ಞಾನ ಪೀಠದ ಹಿರಿಯ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹಾಗೂ ಕಿರಿಯ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದರು ‘ವೀರಶೈವ ಬೇಡ’ ಎಂಬ ಕೆಲವರ ಪೂರ್ವಾಗ್ರಹ ಪೀಡಿತ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಶಾಸನಗಳಲ್ಲಿ ವೀರಶೈವ : ಕ್ರಿ.ಪೂ.ದಿಂದ ಮೊದಲ್ಗೊಂಡು ಸುಮಾರು 19ನೆಯ ಶತಮಾನದವರೆಗಿನ ನೂರಾರು ಶಾಸನಗಳಲ್ಲಿ ವೀರಶೈವದ ಪ್ರಸ್ತಾಪವಿದೆ. ಇಲ್ಲಿ ವೀರಭದ್ರ, ವೀರಮಾಹೇಶ್ವರ, ವೀರೇಶ್ವರ ಧರ್ಮ, ವೀರಂಣ, ಕಪಿಲಸಿದ್ಧ, ಸ್ವಯಂಭು, ಮಹೇಶ್ವರ, ಶಿವಲಿಂಗ ಎಂದೆಲ್ಲ ವೀರಶೈವ ಧರ್ಮದ ಪದಗಳೇ ವಿಪುಲವಾಗಿ ಬಳಕೆಯಾಗಿವೆ. ಬಸವಪೂರ್ವ ಕಾಲದ 6, 7, 8, 9 ಮತ್ತು 10ನೆಯ ಶತಮಾನದ ಶಾಸನಗಳಲ್ಲಿ ಲಿಂಗ, ಲಿಂಗೋದ್ಭವ, ರೇವಣ, ಉಜ್ಜಯಿನಿ, ಮಹೇಶ್ವರ, ಓಂ ನಮಃ ಶಿವಾಯ, ಜ್ಞಾನ ಶಿವಾಚಾರ್ಯ, ಶಿವಪೂಜೆ, ಶಿವಜ್ಞಾನ, ಲಕುಳೀಶ, ಕಾಳಾಮುಖ ಜೊತೆಗೆ 10 ನೆಯ ಶತಮಾನದ ಬಳ್ಳಾರಿ ಸಮೀಪದ ಕೊಳಗಲ್ಲು ಗ್ರಾಮದ ಶಾಸನದಲ್ಲಿ ವೀರಶೈವ ಪಂಚಪೀಠಗಳಲ್ಲಿ ಒಂದಾದ ಕಾಶಿ ಜ್ಞಾನ ಪೀಠದ ಗೋತ್ರಪುರುಷ ಕಾರ್ತಿಕೇಯನ, ಶಿವನ ವರ್ಣನೆ ಹಾಗೂ ಮಹೇಶ್ವರಾಗಮ (ಶಿವಾಗಮ)ದ ಉಲ್ಲೇಖಗಳಿವೆ. ಇವೆಲ್ಲವೂ ವೀರಶೈವದ ಸಪ್ರಮಾಣ ಆಕರಗಳು. ಆಂಧ್ರ್ರದೇಶದ ಕಡಪ ಜಿಲ್ಲೆಯ ವುತಕೂರು ಶಾಸನ(ಕ್ರಿ.ಶ. 1370)ದಲ್ಲಿ ‘...ಷಡ್ಡದರ್ಶನ ಸ್ಥಾಪನಾಚಾರ್ಯ ಮೂರುರಾಲ ಪೂಲಿಂಗ ವೀರಶೈವ ಸಿದ್ಧಭಿಕ್ಷಾ...’ ಎಂದಿದೆ. ರಾಜ್ಯದ ಚಾಮರಾಜನಗರ ಜಿಲ್ಲೆಯ ಕೆಂಪನಪುರಗ್ರಾಮದ ಶಾಸನದಲ್ಲಿ ‘ಸಕಲಶಾಸ್ತ್ರಪಾರಾವಾರಾಪಾರಂಗತ ವೀರಶೈವ ಮತ ಸ್ಥಾಪನಾಚಾರ್ಯ ಶೃತಿಸ್ಮೃತೀತಿಹಾಸ ಪುರಾಣಾಗಮ ತಾತ್ಪರ್ಯ ಪ್ರತಿಪಾದಿತಾಲ..’ ಎಂಬ ಉಲ್ಲೇಖವಿದೆ. ಗದಗ ಜಿಲ್ಲೆ ಲಕ್ಷ್ಮೇಶ್ವರದ ಶಾಸನ (ಕ್ರಿ.ಶ.1513) ವೀರಶೈವ ಧರ್ಮದ ಪಂಚಾಚಾರ್ಯರು ಲಿಂಗೋದ್ಭವರಾದವರು ಎನ್ನುವುದನ್ನು ಹಾಗೂ ಅವರು ಸಾಕ್ಷಾತ್ ಶಿವನ ಅವತಾರಿಗಳೆಂಬುದನ್ನು ಸಾಕ್ಷೀಕರಿಸುತ್ತದೆ. “ಶಿವಲಿಂಗೋದ್ಭವನಾಗಿ ಸಂಚರಿಸುತಿರ್ದಲೆ ರೇವಣಾಚಾರ್ಯ ಪುಂಗವನೀ ದಾರುಣೆಯಲ್ಲಿ ಸಾಸಿರದ ನಾನೂರ್ವತ್ಸವರಂ ವೀ ಇರಿಽವಽ... ಶ್ರೀಮತ್ಪರಮೇಶ್ವರಾವತಾರ ಮಪ್ಪ ರೇವಣಾಚಾರ್ಯ್ಯ” ಎಂದೆಲ್ಲ ಉಲ್ಲೇಖಗಳಿವೆ. ಕ್ರಿ.ಶ.1779ರ ಕೊಡಗು ಜಿಲ್ಲೆ ಮಾದಾಪೂರದ ಶಾಸನದಲ್ಲಿ ಹಾಗೂ ಅಬ್ಬಿಮಠದ ತಾಮ್ರಶಾಸನದಲ್ಲಿ “ವೀರಶೈವ ಮತಸ್ತರಾದ”ಎಂದಿದೆ. ಮಡಿಕೇರಿಯ ಕ್ರಿ.ಶ.1822ರ ಶಾಸನದಲ್ಲಿ “ವೀರಶೈವ ಮತಧುರೀಣ” ಎಂಬೆಲ್ಲ ಉಲ್ಲೇಖಗಳು ಬಹಳ ಸ್ಪಷ್ಟವಾಗಿವೆ. ವಚನಗಳಲ್ಲಿ ವೀರಶೈವ : ಶಿವಶರಣರ ವಚನ ವಾಙ್ಮಯದಲ್ಲಿ ಬಸವಣ್ಣನವರೂ ಸೇರಿದಂತೆ ಸುಮಾರು 30 ಶರಣರು ತಮ್ಮ 142 ವಚನಗಳಲ್ಲಿ 221 ಬಾರಿ ‘ವೀರಶೈವ’ ಪದಪ್ರಯೋಗ ಮಾಡಿದ್ದಾರೆ. ಆದಯ್ಯ, ಅಕ್ಕಮಹಾದೇವಿ, ಅಲ್ಲಮಪ್ರಭುದೇವರು, ಚೆನ್ನಬಸವಣ್ಣ, ಅಂಬಿಗರ ಚೌಡಯ್ಯ, ತೋಂಟದ ಸಿದ್ಧಲಿಂಗ ಯತಿಗಳು, ಮೋಳಿಗೆಯ ಮಾರಯ್ಯ, ಮಡಿವಾಳ ಮಾಚಿದೇವ, ಸಿದ್ಧರಾಮೇಶ್ವರರು, ಷಣ್ಮುಖ ಶಿವಯೋಗಿಗಳು ವೀರಶೈವ ಮಾರ್ಗ, ವೀರಶೈವ ಸಂಪನ್ನ, ವೀರಶೈವ ಸಿದ್ಧಾಂತ, ವೀರಶೈವರ ಅಚ್ಚು, ವೀರಶೈವ ಲಿಂಗ, ವೀರಶೈವ ಮತ, ವೀರಶೈವಾಚಾರ್ಯ, ವೀರಶೈವೋತ್ತಮತೆಯೊಳ್ಮೂಡಿದ ಇಷ್ಟಲಿಂಗ ಎಂದೆಲ್ಲ ವಚನಗಳಲ್ಲಿ ಉಲ್ಲೇಖಿಸಿದ್ದಾರೆ. ಈ ವಚನಗಳು ಡಾ.ಎಂ. ಎಂ. ಕಲಬುರ್ಗಿಯವರ ಪ್ರಧಾನ ಸಂಪಾದಕತ್ವದಲ್ಲಿ ಕರ್ನಾಟಕ ಸರಕಾರದಿಂದ ಪ್ರಕಟಗೊಂಡ ಎರಡು ಮತ್ತು ಮೂರನೇ ಆವೃತ್ತಿಯ ವಚನ ಸಂಪುಟಗಳಲ್ಲಿ ಸ್ಪಷ್ಟವಾಗಿ ಮುದ್ರಣಗೊಂಡಿವೆ. ‘ಲಿಂಗಾಯತ’ ಪದವು ಬಸವಣ್ಣನವರ ಯಾವ ವಚನದಲ್ಲೂ ಉಲ್ಲೇಖಗೊಂಡಿಲ್ಲ. ವೀರಶೈವ ಧರ್ಮದ ಸಿದ್ಧಾಂತ, ತತ್ವಗಳು, ಆಚರಣೆಗಳ ಕುರಿತು ವೇದ, ಆಗಮ, ಉಪನಿಷತ್ತು ಮತ್ತು ಪುರಾಣಗಳಲ್ಲಿ ಕಾಣಸಿಗುವ ಸಾವಿರಾರು ಸಪ್ರಮಾಣ ಉಲ್ಲೇಖಗಳ ಜೊತೆಗೆ ಸಂಸ್ಕೃತ, ಕನ್ನಡ, ತಮಿಳು, ತೆಲಗು ಭಾಷೆಗಳಲ್ಲಿಯ ಸಾಹಿತ್ಯ ಮತ್ತು ಶಾಸನಗಳನ್ನು ಬಹುಪಾಲು ಸಂಶೋಧಕರು ನಿಖರ ನೆಲೆಯಲ್ಲಿ ಗುರುತಿಸಿದ್ದಾರೆ. ಭಾರತದಲ್ಲಿರುವ ಪಂಚಪೀಠಗಳ ಸಾವಿರಾರು ಶಾಖಾಮಠಗಳ ಹಾಗೂ ವಿರಕ್ತ ಪರಂಪರೆಯ ಅನೇಕ ಮಠಗಳ ದಾಖಲೆಗಳಲ್ಲಿ ‘ವೀರಶೈವ’ ಪದಪ್ರಯೋಗ ವ್ಯಾಪಕವಾಗಿದೆ. ಮೀಸಲಾತಿಗಾಗಿ ‘ವೀರಶೈವ’ಕ್ಕೆ ಧಕ್ಕೆ ಬೇಡ : 1909ರಲ್ಲಿ ಸ್ವಾಮಿ ವಿವೇಕಾನಂದ ಸಮಾಜದ ಆಶ್ರಯದಲ್ಲಿ ಜರುಗಿದ ಭಾರತದ ಪ್ರಥಮ ಧಾರ್ಮಿಕ ಸಮ್ಮೇಳನದಲ್ಲಿ ನಿವೃತ್ತ ನ್ಯಾಯಾಧೀಶರಾದ ದಿ. ಎಚ್. ಕೆ. ವೀರಬಸಯ್ಯ ಅವರು "ಅನ್ಯಧರ್ಮೀಯರು ವೀರಶೈವ ಧರ್ಮವನ್ನು ಸ್ವೀಕರಿಸಿದವರ ಪಟ್ಟಿಯಲ್ಲಿ 12ನೆಯ ಶತಮಾನದ ಬಸವಣ್ಣನವರೂ ಸಹ ಇದ್ದಾರೆ" ಎಂದು ಪ್ರತಿಪಾದಿಸಿದ್ದಾರೆ. ಸ್ವಾತಂತ್ರ್ಯಾನಂತರ ಭಾರತದ ಸಂವಿಧಾನವು ಧಾರ್ಮಿಕ ವಿಚಾರಗಳಲ್ಲಿ ವ್ಯಕ್ತಿಯೋರ್ವನ ಸಂಪೂರ್ಣ ನಂಬಿಕೆಯನ್ನು ಮೂಲಭೂತ ಹಕ್ಕು ಎಂದು ಸಂರಕ್ಷಿಸುತ್ತದೆ. 1955-56ರಲ್ಲಿ ಭಾರತ ಸರಕಾರವು ರಚಿಸಿದ ಹಾಗೂ ಇಂದಿಗೂ ಅನುಷ್ಠಾನದಲ್ಲಿರುವ ನಾಲ್ಕು ಹಿಂದೂ ಕಾಯ್ದೆಗಳ ವ್ಯಾಖ್ಯಾನದಡಿಯಲ್ಲಿ “ಹಿಂದೂ ಇದು ವೀರಶೈವ/ಲಿಂಗಾಯತವನ್ನು ಒಳಗೊಂಡಿದೆ” ಎಂದು ಸ್ಪಷ್ಟಪಡಿಸಿದೆ. ಇದರ ಅರ್ಥ ವೀರಶೈವ/ಲಿಂಗಾಯತ ಎರಡೂ ಹಿಂದೂ ಧರ್ಮದ ಭಾಗವೇ ಎಂದಾಗುತ್ತದೆ. ಇತ್ತೀಚೆಗೆ ಭಾರತದ ಸರ್ವೋಚ್ಚ ನ್ಯಾಯಾಲವು 29-7-2022 ರಂದು “ವೀರಶೈವರು (ಲಿಂಗಾಯತರು) ತಮ್ಮದೇ ಆದ ಧರ್ಮಕ್ಕೆ ಸೇರಿದವರು ಎಂದು ಹೇಳಿಕೊಳ್ಳುತ್ತಾರೆ, ಆದರೂ ಕಾನೂನುಬದ್ಧವಾಗಿ ಅವರನ್ನು ಹಿಂದೂ ಪಂಗಡವೆಂದೇ ಪರಿಗಣಿಸಲಾಗುತ್ತದೆ” ಎಂಬುದನ್ನು ಸಮರ್ಥನೆ ಮಾಡಿದೆ. ಅಷ್ಟಾವರಣ, ಪಂಚಾಚಾರ ಮತ್ತು ಷಟ್ ಸ್ಥಲ ಸಿದ್ಧಾಂತವನ್ನೊಳಗೊಂಡ ಒಂದೇ ವಿಧವಾದ ಆಚಾರ, ವಿಚಾರ, ತತ್ವಗಳ ಅಡಿಯಲ್ಲಿ ಇಷ್ಟಲಿಂಗ ಪೂಜಕರಾದ ಸಮುದಾಯವನ್ನು ‘ವೀರಶೈವ ಮತ್ತು ಲಿಂಗಾಯತ’ ಎಂಬ ಎರಡೂ ಹೆಸರುಗಳಿಂದ ಕರೆಯುತ್ತಾರೆ. 2013ರಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯು ವೀರಶೈವ ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ನಮೂದಿಗೆ ಜನಗಣತಿಯಲ್ಲಿ ಅವಕಾಶ ಕೋರಿ ಸಲ್ಲಿಸಿದ್ದ ಪ್ರಸ್ತಾವವನ್ನು ಭಾರತ ಸರ್ಕಾರದ ಅಂದಿನ ಗೃಹ ಮಂತ್ರಿಗಳಾದ ಶಿವರಾಜ್ ಪಾಟೀಲರು ತಿರಸ್ಕರಿಸಿದ್ದರು. 2018ರಲ್ಲಿ ಕರ್ನಾಟಕ ಸರ್ಕಾರವು ಸ್ವತಂತ್ರ ಅಲ್ಪಸಂಖ್ಯಾತ ಲಿಂಗಾಯತ ಧರ್ಮಕ್ಕೆ ಮಾನ್ಯತೆ ಕೋರಿದ ಪ್ರಸ್ತಾವವನ್ನು ತಿರಸ್ಕರಿಸಿದ್ದು ಸರ್ವರಿಗೂ ತಿಳಿದ ಸಂಗತಿಯೇ ಆಗಿದೆ. ಹೀಗೆ ಹಲವಾರು ಕಾರಣಗಳಿಂದ ಅಸಂಭವವಾದ ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಒಂದು ವೇಳೆ ವಾಮ ಮಾರ್ಗದ ಪ್ರಯತ್ನದಿಂದಾಗಿ ಮಾನ್ಯತೆ ಬಂದರೂ, ಬಸವಣ್ಣನವರು ಅದರಿಂದ ಹೊರಗೆ ಉಳಿಯಬೇಕಾಗುತ್ತದೆ. ಏಕೆಂದರೆ ಬಸವಣ್ಣನವರು ತಮ್ಮ ವಚನದಲ್ಲಿ ತಮ್ಮನ್ನು ತಾವು ‘ನಿಜ ವೀರಶೈವ’ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಇತಿಹಾಸ, ಧರ್ಮ, ಸಾಹಿತ್ಯ, ಸಂವಿಧಾನ, ಕಾನೂನು, ತರ್ಕ ಮತ್ತು ಸಮಾಜ ಒಪ್ಪಿತ ವೀರಶೈವ/ಲಿಂಗಾಯತ ಬೇರೆಯಲ್ಲ ಎಂದಿದ್ದರೂ, ಬೆರಳೆಣಿಕೆಯಷ್ಟು ವ್ಯಕ್ತಿಗಳು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಸಂಸ್ಥೆಯ ಹೆಸರಿನಿಂದ ವೀರಶೈವವನ್ನು ಕೈಬಿಡಬೇಕೆಂಬ ತಾರ್ಕಿಕವಲ್ಲದ ಸಮಾಜ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ. ಕೇವಲ ಮೀಸಲಾತಿಗಾಗಿ ವೀರಶೈವ ಧರ್ಮದ ಸನಾತನ ಮೇರು ಚಾರಿತ್ರಿಕ ಘನತೆಗೆ ಧಕ್ಕೆ ತರುವುದನ್ನು ಎಲ್ಲರೂ ನಿಲ್ಲಿಸಬೇಕು.
ವೀರಶೈವ-ಲಿಂಗಾಯತ : ಈಗಾಗಲೇ ಶಿವಯೋಗ ಮಂದಿರದಲ್ಲಿ ಜರುಗಿದ ಬೃಹತ್ ಧರ್ಮ ಸಮಾವೇಶದಲ್ಲಿ ಹಾನಗಲ್ಲ ಕುಮಾರ ಸ್ವಾಮೀಜಿಯವರು ಸ್ಥಾಪಿಸಿರುವ ಅಖಿಲ ಭಾರತ ವೀರಶೈವ ಮಹಾಸಭೆಯ ಆಶಯಗಳನ್ನು ಎತ್ತಿಹಿಡಿದು, ಧರ್ಮವಾಚಕ ಪದವಾದ ‘ವೀರಶೈವ’ ಮತ್ತು ಸಂಸ್ಕಾರವಾಚಕ ಪದವಾದ ‘ಲಿಂಗಾಯತ’ ವನ್ನು ಸೇರಿಸಿ ಎಲ್ಲೆಡೆ ‘ವೀರಶೈವ- ಲಿಂಗಾಯತ’ ಎಂದೇ ಸಂಬೋಧಿಸಲು ಸರ್ವಾನುಮತದ ನಿರ್ಣಯ ಅಂಗೀಕರಿಸಲಾಗಿದೆ. ಯಾರೂ ಸಹ ದ್ವಂದ್ವ-ವೈರುಧ್ಯಗಳನ್ನು ಹುಟ್ಟುಹಾಕಿ ಸಮಾಜದ ಒಗ್ಗಟ್ಟಿಗೆ ಕೊಡಲಿ ಪೆಟ್ಟು ಹಾಕದೇ ಎಲ್ಲವನ್ನೂ ಮುಕ್ತಮನಸ್ಸಿನಿಂದ ಗಮನಿಸಬೇಕೆಂದು ಉಜ್ಜಯಿನಿ, ಶ್ರೀಶೈಲ ಹಾಗೂ ಕಾಶಿ ಪೀಠಗಳ ಜಗದ್ಗುರುಗಳು ಸಲಹೆ ನೀಡಿದ್ದಾರೆ.