ಕಲುಷಿತಗೊಂಡು ಹಸಿರು ಬಣ್ಣಕ್ಕೆ ತಿರುಗಿದ ತುಂಗಭದ್ರಾ ನದಿ ನೀರು
ಹೂವಿನಹಡಗಲಿ 17 : ತಾಲೂಕಿನ ಕಾಗನೂರು.ಕೊಂಬಳಿ.ಮದಲಗಟ್ಟಿ ಮತ್ತು ಮಂಡರಗಿ ಭಾಗದ ಗಂಗಾಪುರ. ಕೊರ್ಲಹಳ್ಳಿ ಭಾಗದ ತುಂಗಭದ್ರಾ ನದಿ ನೀರು ಹಸಿರು ಬಣ್ಣಕ್ಕೆ ತಿರುಗುತ್ತಿದ್ದು ಇದರಿಂದ ನದಿ ನೀರು ಬಳಸುವ ಜನರು ಆತಂಕ ವ್ಯಕ್ತಪಡಿಸಿದ್ದಾರೆ. ನದಿ ಮಧ್ಯಭಾಗದಲ್ಲಿರುವ ನೀರು ಅಷ್ಟೊಂದು ಹಸಿರು ಕಾಣದಿದ್ದರೂ ದಡದಲ್ಲಿ ನೀರು ಪಾಚಿಗೊಂಡು ಹಚ್ಚ ಹಸಿರಿನಿಂದ ಕಾಣುತ್ತಿದೆ. ಸಿಂಗಟಾಲೂರು ಬ್ಯಾರೇಜ್ನಿಂದ ನದಿಗೆ ನೀರು ಹರಿಸುವುದನ್ನು ಸಂಪೂರ್ಣ ನಿಲ್ಲಿಸಲಾಗಿದೆ. ನದಿಯಲ್ಲಿ ನೀರು ಹರಿಯುವಾಗ ಹಸಿರು ಬಣ್ಣದ ನೀರು ಕಾಣುವುದಿಲ್ಲ. ಹರಿವು ನಿಂತಾಗ ನೀರು ಹಸಿರು ಬಣ್ಣಕ್ಕೆ ತಿರುಗುತ್ತಿದೆ.ನದಿಯಿಂದ ಪಂಪ್ಸೆಟ್ಗಳ ಮೂಲಕ ಜಮೀನಿಗೆ ಹರಿದು ಬರುವ ನೀರು ಹಸಿರಾಗಿದೆ. ಇದರಿಂದ ಭತ್ತದ ಸಸಿಗಳು ನಾಶವಾಗುವ ಹಾಗೂ ಇತರ ಬೆಳೆ ಹಾನಿಯಾಗುವ ಆತಂಕವನ್ನು ರೈತರು ವ್ಯಕ್ತಪಡಿಸುತ್ತಿದ್ದಾರೆ. ಪಶುಗಳಿಗೆ ನದಿ ನೀರು ಕುಡಿಸುವುದರಿಂದ ಅನಾರೋಗ್ಯ ಕಾಡುವ ಭಯ ಮನೆ ಮಾಡಿದೆ. ಇನ್ನೂ ಜಲಚರಗಳಿಗೆ ತೊಂದರೆಯಾಗುವ ಸಂಭವ ಹೆಚ್ಚಿದೆ. ಬೇಸಿಗೆ ಆರಂಭಕ್ಕೂ ಪೂರ್ವದಲ್ಲಿಯೇ ನೀರು ಹಸಿರು ಪಾಚಿಯಂತೆ ಕೂಡಿದ್ದು ಚಿಂತೆಗೀಡು ಮಾಡಿದೆ.ಸಿಂಗಟಾಲೂರು ಬ್ಯಾರೇಜ್ ಕೆಳಗಡೆಯ ಈ ಭಾಗದಲ್ಲಿ ನೀರು ಹಸಿರಾಗಿ ಕಾಣುತ್ತಿದೆ. ಬ್ಯಾರೇಜ್ನ ಹಿನ್ನೀರು ಭಾಗದಲ್ಲಿ ಮಾತ್ರ ಹಸಿರು ಆಗಿಲ್ಲ. ಆದ್ದರಿಂದ ಈ ಭಾಗದ ನೀರನ್ನು ಪರೀಕ್ಷಿಸಬೇಕು ಎಂದು ನದಿ ತೀರದ ಮದಲಗಟ್ಟಿ ಗ್ರಾಮದ ಹಾಲೇಶ್ ಒತ್ತಾಯಿಸಿದ್ದಾರೆ.