ಮಾಜಿ ಪ್ರಧಾನಿ ಮನಮೋಹನ್ ಸಿಂಗ್‌ರಿಗೆ ಶ್ರದ್ಧಾಂಜಲಿ

Tribute to former Prime Minister Manmohan Singh

ಮಾಜಿ ಪ್ರಧಾನಿ ಮನಮೋಹನ್ ಸಿಂಗ್‌ರಿಗೆ ಶ್ರದ್ಧಾಂಜಲಿ  

ತಾಳಿಕೋಟಿ 28: ಮಾಜಿ ಪ್ರಧಾನಿ ಮನಮೋಹನ್ ಸಿಂಗ್‌ರ ನಿಧನದ ಹಿನ್ನೆಲೆಯಲ್ಲಿ ಇಲ್ಲಿಯ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ಮುಖಂಡರು ಶನಿವಾರ ಪಕ್ಷದ ಕಾರ್ಯಾಲಯದಲ್ಲಿ ಸಭೆ ನಡೆಸಿ ಶ್ರದ್ಧಾಂಜಲಿ ಸಲ್ಲಿಸಿದರು.  

ಪಕ್ಷದ ಮುಖಂಡರಾದ ಪ್ರಭುಗೌಡ ಮದರಕಲ್ಲ ಮಾತನಾಡಿ ಮಾಜಿ ಪ್ರಧಾನಿ ಡಾ.ಮನಮೋಹನ ಸಿಂಗ್ ಅವರು ಈ ದೇಶ ಕಂಡ ಧೀಮಂತ ನಾಯಕ, ಶ್ರೇಷ್ಠ ಆರ್ಥಿಕ ತಜ್ಞರಾಗಿದ್ದು 90ರ ದಶಕದಲ್ಲಿ ಆರ್ಥಿಕ ವ್ಯವಸ್ಥೆ ಸುಧಾರಿಸಲು ಅವರು ನೀಡಿದ ಜನಪರ ಆರ್ಥಿಕ ಯೋಜನೆಗಳು ಇತಿಹಾಸದಲ್ಲಿ ಅಜರಾಮವಾಗಿ ಉಳಿಯುವಂತಹವುಗಳಾಗಿವೆ. ಅವರೊಬ್ಬ ಮಾದರಿ ರಾಜಕಾರಣಿಯಾಗಿದ್ದರು. ಅವರ ಬದುಕಿನ ಆದರ್ಶಗಳನ್ನು ನಾವೆಲ್ಲರೂ ಅನುಸರಿಸುವ ಅಗತ್ಯ ಇದೆ ಎಂದರು.  

ಕಾಂಗ್ರೆಸ್ ಮಜ್ದೂರ್ ಘಟಕದ ತಾಲೂಕ ಅಧ್ಯಕ್ಷ ಸಂಗನಗೌಡ ಅಸ್ಕಿ ಮಾತನಾಡಿ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್‌ರು ಯುಪಿಎ ಸರ್ಕಾರದಲ್ಲಿ ಜಾರಿಗೆ ತಂದಂತಹ ಜನಪರ ಯೋಜನೆಗಳನ್ನು ದೇಶ ಸದಾ ಸ್ಮರಿಸುತ್ತದೆ, ಅದರಲ್ಲಿಯೂ ಅವರು ಗ್ರಾಮೀಣ ಭಾಗದ ಬಡ ಕೂಲಿ ಕಾರ್ಮಿಕರಿಗಾಗಿ ಜಾರಿಗೆ ತಂದ ಮನ್ ನರೇಗಾ ಯೋಜನೆ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಅವರ ನಿಧನ ತುಂಬಲಾರದ ನಷ್ಟವಾಗಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ಹಾಗೂ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸುತ್ತೇನೆ ಎಂದರು.ಆರಂಭದಲ್ಲಿ ಒಂದು ನಿಮಿಷಗಳ ಕಾಲ ಮೌನ ಆಚರಣೆ ಮಾಡಲಾಯಿತು. ಜಿಲ್ಲಾ ಉಪಾಧ್ಯಕ್ಷ ಸಿದ್ದನಗೌಡ ಪಾಟೀಲ ನಾವದಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಿಬೂಬ ಚೋರಗಸ್ತಿ, ರಾಜ್ಯ ಅಲ್ಪಸಂಖ್ಯಾತ ವಿಭಾಗದ ಮಾಜಿ ಕಾರ್ಯದರ್ಶಿ ಮಹೆಬೂಬಶಾ ಮಕಾನದಾರ, ಎಂ.ಎ.ಮೇತ್ರಿ, ಮೋದಿನಸಾ ನಗಾರ್ಚಿ, ಮೆಹಬೂಬ ಕೆಂಭಾವಿ, ಫಯಾಜ್ ಉತ್ನಾಳ, ಸದ್ದಾಮ್ ಹೊನ್ನಳ್ಳಿ, ಆಸೀಫ್ ಕೆಂಭಾವಿ, ರಫೀಕ್ ಬೇಪಾರಿ ಮತ್ತಿತರರು ಇದ್ದರು.