ಹಾಸ್ಯ ಕಲಾವಿದ ಲಫಂಗ್ ರಾಜಾ-ಸ್ಟೆಫೀ ಲೂಯೀಸ್ ಅವರಿಗೆ ಸನ್ಮಾನ
ಗದಗ 19: ತಾಲೂಕಿನ ನಾಗಾವಿ ಗ್ರಾಮದಲ್ಲಿ ಯಲ್ಲಮ್ಮದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಗ್ರಾಮದ ಸಮಾನ ಮನಸ್ಕ ಬಳಗದವರು ಹಮ್ಮಿಕೊಂಡಿದ್ದ ಗಜೇಂದ್ರಗಡದ ಪುನೀತ್ ಮೆಲೋಡಿಜ್ ಅವರ ರಸಮಂಜರಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಜನಮೆಚ್ಚಿದ ಕಲಾವಿದ ಲಫಂಗ ರಾಜಾ ಎಂದು ಪ್ರಚಲಿತವಿರುವ ಗೋಕಾಕದ ರಾಜಣ್ಣ ಅವರನ್ನು ಗ್ರಾಮದ ಸೋಮೇಶ ಹಿರೇಮಠ ಪ್ರತಿಷ್ಠಾನ ಹಾಗೂ ನೂತನವಾಗಿ ಪ್ರಾರಂಭಗೊಂಡಿರುವ ನಾಗಾವಿ ನಾನಾ ಯೂಟ್ಯೂಬ್ ವತಿಯಿಂದ ಸನ್ಮಾನಿಸಿ, ನೆನಪಿನ ಕಾಣಿಕೆ ನೀಡಿ, ಗೌರವಿಸಲಾಯಿತು.
ಪುನೀತ್ ಮೆಲೋಡಿಜ್ ಕಲಾ ತಂಡದ ಮುಖ್ಯಸ್ಥೆಯಾದ ಪಲ್ಲವಿ ಹಾಗೂ ಹುಬ್ಬಳ್ಳಿಯ ಕಲಾವಿದೆ ಕುಮಾರಿ ಸ್ಟೆಫೀ ಲೂಯಿಸ್ ಸೇರಿದಂತೆ ಸಹ ಕಲಾವಿದರನ್ನು ಸಾನ್ನಿಧ ್ಯವಹಿಸಿದ್ದ ಬೆಳಧಡಿ ಗ್ರಾಮದ ಶ್ರೀದೇವಿ ಆರಾಧಕರಾದ ಶಂಭುಲಿಂಗಯ್ಯ ಕಲ್ಮಠ, ಬಿಜೆಪಿ ಮುಖಂಡರಾದ ಮಹೇಶ ದಾಸರ ಅವರು ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿದ ಹಾಸ್ಯ ಕಲಾವಿದರಾದ ರಾಜಣ್ಣ ಅವರು ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಸಂಗೀತ, ಸಾಹಿತ್ಯ, ಕಲೆಗಳು ಹಿಮಾಲಯದಷ್ಟೇ ಎತ್ತರಕ್ಕೆ ಬೆಳೆದಿವೆ. ರಂಗಭೂಮಿಯಲ್ಲಿ ಎಲಿವಾಳ ಸಿದ್ದಯ್ಯನವರು, ವೈಜನಾಥ್ ಬಿರಾದಾರ ಅವರಂತ ಪ್ರಬುದ್ಧ ಹಾಸ್ಯ ನಟರು ಉತ್ತರ ಕರ್ನಾಟಕದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ದಕ್ಷಿಣ ಕರ್ನಾಟಕದಲ್ಲಿ ನಿರ್ಲಕ್ಷಕ್ಕೆ ಒಳಗಾಗಿದ್ದ ನಮ್ಮ ಕಲಾವಿದರು ಈಗ ಬೆಂಗಳೂರಿನಲ್ಲಿ ನೆಲೆಸ ಹಲವಾರು ಚಾನಲ್‌ಗಳಲ್ಲಿ ಮಿಂಚುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಉತ್ತರ ಕರ್ನಾಟಕದ ಸಂಗೀತ ಕಲಾವಿದರಾದ ಪಂ.ಭೀಮಸೇನ್ ಜೋಶಿ, ಗಂಗೂಬಾಯಿ ಹಾನಗಲ್, ಸಂಗೀತದ ಸಿರಿ ಡಾ.ಪಂ. ಪುಟ್ಟರಾಜ ಕವಿ ಗವಾಯಿಗಳು, ಹುಯಿಲಗೋಳ ನಾರಾಯಣ ರಾವ್, ಬೀಚಿ ಕವಿಗಳು ವಿಶ್ವದಾದ್ಯಂತ ರಾಜ್ಯದ ಕೀರ್ತಿಯನ್ನು ಬೆಳಗಿಸಿದ್ದಾರೆ ಎಂದು ಅವರು ಹೇಳಿದರು.
ಸೋಮೇಶ ಹಿರೇಮಠ ಪ್ರತಿಷ್ಠಾನದ ಅಧ್ಯಕ್ಷರಾದ ಬಸವಣ್ಣೆಯ್ಯ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು.
ಮಂಜು ಕಪ್ಪತ್ತನವರ ಸ್ವಾಗತಿಸಿದರು. ಹರೀಶ ಮಾಡಳ್ಳಿ ವಂದಿಸಿದರು. ಧೀರಜ್ ನಂದಿಕೋಲಮಠ ಕಾರ್ಯಕ್ರಮ ನಿರೂಪಿಸಿದರು.