ಬ್ಯಾಡಗಿಯಲಿ ಮೂಲಭೂತ ಸೌಲಭ್ಯ ಕಲ್ಪಿಸಲು ವರ್ತಕರ ಆಗ್ರಹ

Traders demand provision of basic facilities in Byadagiyali

ಬ್ಯಾಡಗಿಯಲಿ ಮೂಲಭೂತ ಸೌಲಭ್ಯ ಕಲ್ಪಿಸಲು ವರ್ತಕರ ಆಗ್ರಹ

ಬ್ಯಾಡಗಿ: ಬ್ಯಾಡಗಿ ಕಾಗಿನೆಲೆ ರಸ್ತೆ ಬದಿಯಲ್ಲಿ ಪಟ್ಟಣಕ್ಕೆ ಹೊಂದಿಕೊಂಡಿರುವ ಜಾಗದಲ್ಲಿ ಅನೇಕ ಉದ್ಯಮಗಳಿದ್ದು, ಈ ಪ್ರದೇಶವನ್ನು ಅಭಿವೃದ್ಧಿ ಪಡಿಸಿ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡುವಂತೆ ಆಗ್ರಹಿಸಿ ಸ್ಥಳೀಯ ಮೆಣಸಿನ ಕಾಯಿ ವರ್ತಕರುಶಾಸಕ ಬಸವರಾಜ ಶಿವಣ್ಣನವರ ಹಾಗೂ ಪುರಸಭೆ ಅಧ್ಯಕ್ಷ ಬಾಲಚಂದ್ರಗೌಡ ಪಾಟೀಲ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು. ಮಂಗಳವಾರ ಪಟ್ಟಣದ ಪುರಸಭೆಯಲ್ಲಿ ನಡೆದ ಪುರಸಭೆ ಸದಸ್ಯರ ಸಾಮಾನ್ಯ ಸಭೆಯಲ್ಲಿ ವರ್ತಕರು ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ  ವರ್ತಕರ ಸಂಘದ ಕಾರ್ಯದರ್ಶಿ ರಾಜು ಮೋರಿಗೇರಿ ಮಾತನಾಡಿ ಪಟ್ಟಣದ ಕಾಗಿನೆಲೆ ಹೋಗುವ ರಸ್ತೆಯ ಬದಿಗೆ ಹೊಂದಿಕೊಂಡಿರುವ ಸುಂಕಾಪುರ ಸ್ಪೈಸ್ ಪ್ರೋಡಕ್ಟ ಪ್ರೈವೆಟ್ ಲಿಮಿಟೆಡ್ ಹತ್ತಿರದ ಪ್ರದೇಶದಲ್ಲಿ 100 ಕ್ಕೂ ಹೆಚ್ಚು ಕಾರದ ಪುಡಿ ಅಂಗಡಿಗಳು, ಕೊಲ್ಡ್‌ ಸ್ಟೋರೆಜ್ ಗಳು ಹಾಗೂ ಮೆಣಸಿನ ಕಾಯಿ ತುಂಬು ತೆಗೆಯುವುದು, ಒಣಗಿಸುವ ಕಣಗಳನ್ನು ನಿರ್ಮಾಣ ಮಾಡಿಕೊಳ್ಳಲಾಗಿದೆ. ದಿನ ನಿತ್ಯ ನೂರಾರು ಜನರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಪ್ರದೇಶವು ಯಾವುದೇ ತೆರನಾಗಿ  ಅಭಿವೃದ್ಧಿ ಕಂಡಿಲ್ಲ, ಅಭಿವೃದ್ಧಿಯ ದೃಷ್ಟಿಯಿಂದ ಬಹಳ ಹಿಂದುಳಿದ ಪ್ರದೇಶವಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಆಳುವವರಿಗೆ ಮೌಖಿಕವಾಗಿ ತಿಳಿಸಿದ್ದಾಗಿದೆ. ಆದರೂ ಇಲ್ಲಿಯವರೆಗೂ ಈ ಪ್ರದೇಶದ ಅಭಿವೃದ್ಧಿ ಮಾಡಲು ಹಿಂದೇಟು ಹಾಕುತ್ತಿರುವುದು ನೋವಿನ ವಿಚಾರವೆಂದರು.ಮೆಣಸಿನ ಕಾಯಿ ಆಹಾರ ವಸ್ತುವಾಗಿದ್ದು,  ಮೆಣಸಿನ ಕಾಯಿ ಸ್ವಚ್ಚತೆ ಕಾಯ್ದುಕೊಳ್ಳಲು ಇಲ್ಲಿನ ರಸ್ತೆಗಳು ಸ್ವಚ್ಚತೆ ಯಿಂದ ಕೂಡಿರಬೇಕಾಗಿರುವುದು ಬಹಳ ಅವಶ್ಯಕವಾಗಿದೆ. ಇಲ್ಲಿಯ ಅಂಗಡಿಗಳಿಗೆ ಜನರು ರಾತ್ರಿ ಸಂಚರಿಸುತ್ತಿದ್ದು, ಪುರಸಭೆಯಿಂದ ಯಾವುದೇ ಬೀದಿ ದೀಪಗಳನ್ನು ಅಳವಡಿಸದೇ ಇರುವುದರಿಂದ ಬಹಳ ತೊಂದರೆಯಾಗಿದೆ. ಕಾರ್ಮಿಕರಿಗೆ ವಿಷ ಜಂತುಗಳ ಕಾಟ ಹೆಚ್ಚಾಗಿದೆ. ಆದ್ದರಿಂದ ಈ ಕೂಡಲೇ ಇಲ್ಲಿನ ಪ್ರದೇಕ್ಕೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಒತ್ತಾಯಿಸಿದರಲ್ಲದೇ ಒಂದು ವೇಳೆ ನಮ್ಮ ಮನವಿಗೆ ಸ್ಪಂದಿಸಿದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರಿಸಿದರು.ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಬಸಣ್ಣ ಚತ್ರದ, ಬಸವರಾಜ ಸುಂಕಾಪುರ, ಎ.ವಿ.ಸೊರಟೂರ, ಕೆ.ಎಂ.ಬೊಗಲ್ಡಿ, ಎಂ.ಜಿ.ಕಬ್ಬೂರ, ಬಸವರಾಜ ಗಡಾದ, ಆರ್‌.ಎಂ.ಸದಾರಾಧ್ಯಮಠ, ಪ್ರವೀಣ ಆಲದಗೇರಿ, ರಾಜಣ್ಣ ಮಾಗನೂರು, ಎನ್‌.ಎಂ.ಕಬ್ಬೂರ, ಜೆ.ಜೆ.ಪಾಟೀಲ, ಎಂ.ಎಫ್‌.ಗುತ್ತಲ. ಎಂ.ಎಚ್‌.ಬಂಕಾಪುರ ಸೇರಿದಂತೆ ಇತರರಿದ್ದರು.