ನಾಳೆ ಪರಮಹಂಸ ಜಗದ್ಗುರು ಸಚ್ಚಿದಾನಂದ ಮಹಾಸ್ವಾಮಿಗಳ ಮಠದ ಜಾತ್ರಾ ಮಹೋತ್ಸವ - ರವಿಕುಮಾರ ರೆಡ್ಡಿ

ನಾಳೆ ಪರಮಹಂಸ ಜಗದ್ಗುರು ಸಚ್ಚಿದಾನಂದ ಮಹಾಸ್ವಾಮಿಗಳ ಮಠದ ಜಾತ್ರಾ ಮಹೋತ್ಸವ - ರವಿಕುಮಾರ ರೆಡ್ಡಿ  Tomorrow is the festival of Paramahamsa Jagadguru Sachidananda Mahaswamygala Mutt - Ravikumar Reddy


ಗದಗ 26: ನಗರದ ಪವಿತ್ರ ಸದ್ಗುರು ಸಚ್ಚಿದಾನಂದ ಮಠದಲ್ಲಿ 1948ನೇ ಪರಾಭವನಾಮ ಸಂವತ್ಸರದ ಚೈತ್ರಮಾಸದ ಅಂಗವಾಗಿ ಇದೇ ಮಾರ್ಚ್‌ 27 ಮತ್ತು 28ರಂದು ವಿಶೇಷ ಜಾತ್ರಾ ಮಹೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಠದ ಪ್ರಧಾನ ಕಾರ್ಯದರ್ಶಿಗಳಾದ ರವಿಕುಮಾರ ರೆಡ್ಡಿ ಅವರು ತಿಳಿಸಿದ್ದಾರೆ.      ಈ ಕುರಿತು ಹಮ್ಮಿಕೊಂಡ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, "ಸದ್ಗುರು ಸಚ್ಚಿದಾನಂದ ಸ್ವಾಮಿಗಳವರ ಕೃಪಾಶೀರ್ವಾದದೊಂದಿಗೆ ಈ ಬಾರಿಯ ಜಾತ್ರಾ ಮಹೋತ್ಸವವು ಅತ್ಯಂತ ವೈಭವದಿಂದ ಜರುಗಲಿದೆ. ಮಾರ್ಚ್‌ 27ರ ಶುಕ್ರವಾರದಂದು ಬೆಳಿಗ್ಗೆಯಿಂದಲೇ ಮಠದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಆರಂಭವಾಗಲಿವೆ.     

   ಬೆಳಿಗ್ಗೆ ಸಕಲ ವಾದ್ಯಗಳೊಂದಿಗೆ ಸದ್ಗುರುಗಳ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಲಿದ್ದು, ಮಧ್ಯಾಹ್ನ 12 ಗಂಟೆಗೆ ಶ್ರೀ ಸಚ್ಚಿದಾನಂದ ಮಠದ ಯೋಗ ಕೇಂದ್ರದ ಮಕ್ಕಳು ಹಾಗೂ ಮಹಿಳೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿತವಾಗಿವೆ" ಎಂದು ವಿವರಿಸಿದರು. *ಪ್ರಮುಖ ಆಕರ್ಷಣೆ ಮಹಾರಥೋತ್ಸವ:* "ಮಾರ್ಚ್‌ 27-3-2026 ರ ಸಂಜೆ 6 ಗಂಟೆಗೆ ರಾಜ್ಯದ ಕಾನೂನು, ನ್ಯಾಯ ಹಾಗೂ ಪ್ರವಾಸೋದ್ಯಮ ಸಚಿವರು ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಹೆಚ್‌. ಕೆ. ಪಾಟೀಲ ಅವರ ಘನ ಉಪಸ್ಥಿತಿಯಲ್ಲಿ ಶಾಸ್ತ್ರೋಕ್ತವಾಗಿ ಮಹಾರಥೋತ್ಸವ ಜರುಗಲಿದೆ.  

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಡಿ. ಆರ್‌. ಪಾಟೀಲರು ಹಾಗೂ ಮಠದ ಟ್ರಸ್ಟ್‌ ಸಮಿತಿಯ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಸಾರ್ವಜನಿಕರಿಗೆ ಮಧ್ಯಾಹ್ನ 1 ಗಂಟೆಯಿಂದ ಪ್ರಸಾದ ವಿನಿಯೋಗದ ವ್ಯವಸ್ಥೆ ಮಾಡಲಾಗಿದೆ" ಎಂದು ರವಿಕುಮಾರ್ ರೆಡ್ಡಿ ಅವರು ಮಾಹಿತಿ ನೀಡಿದರು. ಜಾತ್ರೆಯ ಎರಡನೇ ದಿನವಾದ ಮಾರ್ಚ್‌ 28ರ ಶನಿವಾರ ಮುಂಜಾನೆ ಪವಿತ್ರವಾದ ’ಕೌದಿ ಪೂಜೆ’ಯೊಂದಿಗೆ ಈ ವರ್ಷದ ಜಾತ್ರಾ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿವೆ. "ಭಕ್ತಿ ಮತ್ತು ಸಂಸ್ಕೃತಿಯ ಸಂಗಮವಾದ ಈ ಪವಿತ್ರ ಕಾರ್ಯಕ್ರಮಕ್ಕೆ ಗದಗ ಜಿಲ್ಲೆಯ ಜನತೆ ಹಾಗೂ ಸದ್ಗುರುಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ,

ಗುರುಗಳ ಕೃಪೆಗೆ ಪಾತ್ರರಾಗಬೇಕು" ಎಂದು ಮಠದ ಪ್ರಧಾನ ಕಾರ್ಯದರ್ಶಿಗಳಾದ ರವಿಕುಮಾರ ರೆಡ್ಡಿ ಅವರು ಈ ಮೂಲಕ ವಿನಂತಿಸಿಕೊಂಡಿದ್ದಾರೆ.      ಈ ಸಂದರ್ಭದಲ್ಲಿ ಶ್ರೀಮಠದ ಚೇರ್ಮನಗಳಾದ ಶಿವಮೂರ್ತೆಪ್ಪ ಅಗಸಿಮನಿ ಮಠದ ಪ್ರಮುಖ ಸದಸ್ಯರುಗಳಾದ ಯೋಗೇಶ್ ಮುಳಗುಂದ, ಯಲ್ಲಪ್ಪ ಬಾದಾಮಿ, ಸಿಕಂದರ್ ಬಡೆಖಾನ್, ಸುಮಂಗಲ ಹದ್ಲಿ, ಈಶ್ವರ​‍್ಪ ಲಕ್ಕುಂಡಿ ಸಾ"ಸೋರಟೊರ. ಕೃಷ್ಣಾ ಎಚ್‌. ಹಡಪದ, ದಾವೂದ್ ಮುಲಗುಂದ ಸೇರಿದಂತೆ ಶ್ರೀಮಠದ ಸಮಸ್ತ ಪದಾಧಿಕಾರಿಗಳು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.