ಲಿಖಿತ ರೂಪದಲ್ಲಿ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದು ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕೆಂದು: ಯಾಸೀರಖಾನ್ ಪಠಾಣ

They should bring their problems to the attention of officials and people's representatives in writ

ಲಿಖಿತ ರೂಪದಲ್ಲಿ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದು ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕೆಂದು: ಯಾಸೀರಖಾನ್ ಪಠಾಣ

ಶಿಗ್ಗಾಂವಿ  19: ಜನಸಾಮಾನ್ಯರ, ಸಾರ್ವಜನಿಕ ಸಮಸ್ಯೆಗಳನ್ನು ಸ್ಥಳೀಯವಾಗಿ ಪರಿಹರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ನಿರ್ದೇಶನದ ಮೇರೆಗೆ ಕ್ಷೇತ್ರದಲ್ಲಿ ಪ್ರತಿ ತಿಂಗಳು ಹೋಬಳಿ ಮಟ್ಟ ಸೇರಿದಂತೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜನತಾದರ್ಶನ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಲಿಖಿತ ರೂಪದಲ್ಲಿ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದು ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕೆಂದು ಶಾಸಕ ಯಾಸೀರಖಾನ್ ಪಠಾಣ ಹೇಳಿದರು.ತಾಲೂಕಿನ ತಡಸ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಮಂಗಳವಾರ ನಡೆದ ಜಿಲ್ಲಾಡಳಿತ ಮತ್ತು ಪಂಚಾಯತ ಹಾಗೂ ತಾಲೂಕಾಡಳಿತ, ತಾಲೂಕಪಂಚಾಯತ ಸಂಯುಕ್ತಾಶ್ರಯದಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮದ ಉದ್ಘಾಟಿಸಿ ಅವರು ಮಾತನಾಡಿ. ಚುಣಾವಣೆ ಪೂರ್ವದಲ್ಲಿ ಕ್ಷೇತ್ರದ ಜನತೆಗೆ ಕೊಟ್ಟ ಮಾತಿನಂತೆ ಜನರ ಕುಂದು ಕೊರತೆಗಳ ಪರಿಹರಿಸಲು ಸರಕಾರದ ಮಟ್ಟದಲ್ಲಿ ಜನತಾ ದರ್ಶನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಆಡಳಿತ ವ್ಯವಸ್ಥೆಯನ್ನು ಜನಸಾಮಾನ್ಯರ ಮನೆಬಾಗಿಲಿಗೆ ತಂದು ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದರು. 

ವಿಶೇಷವಾಗಿ ರೈತರ ನೀರಾವರಿ ಕೃಷಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಈ ತಾಲೂಕಿನ ರೈತರ ನೀರಾವರಿ ಯೋಜನೆಗಾಗಿ, ಬೆಣ್ಣೆ ಹಳ್ಳದ ಅಭಿವೃದ್ಧಿಯು ಸೇರಿದಂತೆ ವಿಶೇಷ 100 ಕೋಟಿ ಅನುದಾನವನ್ನು ಬಿಡುಗಡೆಗೊಳಿಸಲಾಗಿದೆ. ಕ್ಷೇತ್ರದ ಪ್ರತಿ ಗ್ರಾಮ ಪಂಚಾಯತಿಗಳಿಗೂ ತಲಾ ಒಂದು ಕೋಟಿ ಅನುದಾನದಂತೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳ ಕುಡಿಯುವ ನೀರು, ಚರಂಡಿ ಸಮಸ್ಯೆ, ವಿದ್ಯುತ್ ಸಮಸ್ಯೆ ಸೇರಿದಂತೆ ಸ್ಥಳೀಯವಾಗಿ ಉದ್ಭವಿಸುವ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಪ್ರತಿ ಗ್ರಾಮ ಪಂಚಾಯಿತಿಗೆ ಒಂದು ಕೋಟಿ ವಿಶೇಷ ಅನುದಾನದ ಮೂಲಕ ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಲಾಗುತ್ತಿದೆ ಎಂದರು. 

ಜನತಾದರ್ಶನದಲ್ಲಿ ಸಮಸ್ಯೆಗಳ ಮಹಾಪೂರ :ಜನತಾ ದರ್ಶನ ಕಾರ್ಯಕ್ರಮದಲ್ಲಿ ಶಿಗ್ಗಾಂವಿ ತಾಲೂಕಿನ ಕುಂದೂರು ಗ್ರಾಮದಲ್ಲಿ ರೈತರ ಕೃಷಿ ಪಂಪಸೆಟ್ಟಗಳಿಗೆ ಕೇವಲ ಎರಡು ತಾಸು ವಿದ್ಯುತ್ ಮಾತನಾಡು ನೀಡಲಾಗುತ್ತಿದೆ, ಜೊತೆಗೆ ಗ್ರಾಮದಲ್ಲಿ ನಡೆಯುತ್ತಿರುವ ಜೆಜೆಎಮ್ ಕಾಮಗಾರಿಯ ಪೈಪ್ ಲೈನ್ ಅಳವಡಿಸಲು ಅರ್ಧ ಅಡಿಯಷ್ಟು ರಸ್ತೆ ಅಗೆದು ಪೈಪ್ ಲೈನ್ ಹಾಕಲಾಗಿದ್ದು, ಕಾಮಗಾರಿಯು ಇನ್ನು ಪೂರ್ಣಗೊಂಡಿಲ್ಲ ನೆಲದಲ್ಲಿ ಹಾಕಿರುವ ಪೈಪ್ ವಡೆದು ಗ್ರಾಮಸ್ಥರು ನೀರಿಗಾಗಿ ಪರದಾಡುವಂತಾಗಿದೆ. ಗ್ರಾಮದ ಕೆರೆ ಮತ್ತು ಸ್ಮಶಾನ ಜಾಗ ಅತಿಕ್ರಮಣವಾಗಿದ್ದು ಸರ್ವೆ ಇಲಾಖೆಯ ಅಧಿಕಾರಿಗಳಿಗೆ ಮತ್ತು ತಾಲೂಕ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಶಾಸಕರ ಮುಂದೆ ತಮ್ಮ ಅಳಲನ್ನು ಗ್ರಾಮ ಪಂಚಾಯಿತಿ ಸದಸ್ಯರು ಸೇರಿದಂತೆ ಸಾರ್ವಜನಿಕರು ತೋಡಿಕೊಂಡಾಗ, ಹೆಸ್ಕಾಂ ಅಧಿಕಾರಿಗಳನ್ನು ಸ್ಥಳಕ್ಕೆ ಕರೆದು ಎರಡು ದಿನಗಳಲ್ಲಿ ಅಲ್ಲಿನ ರೈತರ ವಿದ್ಯುತ್ ಸಮಸ್ಯೆ ಪರಿಹಾರವಾಗಬೇಕು. ಜೊತೆಗೆ ಸರ್ಕಾರದ ನಿರ್ದೇಶನದಂತೆ ಏಳು ತಾಸು ನೀರಾವರಿಗೆ ವಿದ್ಯುತ್ ಸಂಪರ್ಕ ನೀಡಬೇಕು. ಮುಂದಿನ ತಿಂಗಳು ನಡೆಯುವ ಜನತಾದರ್ಶನ ಕಾರ್ಯಕ್ರಮದ ಒಳಗಾಗಿ ಕುಂದೂರು ಗ್ರಾಮದಲ್ಲಿನ ನೀರಿನ ಸಮಸ್ಯೆ ಸಂಪೂರ್ಣ ನಿವಾರಣೆಯಾಗಬೇಕೆಂದು, ಸರ್ವೆ ನಡೆಸಿ ಒತ್ತುವರಿಯಾಗಿರುವ ಸ್ಮಶಾನ ಮತ್ತು ಕೆರೆ ಜಾಗವನ್ನು ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು. 

ಜನತಾದರ್ಶನ ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಕೊಡುವ ಲ್ಯಾಪ್ಟಾಪ್ ವಿತರಣೆ. ವಿಧವಾ ವೇತನ ಸೇರಿದಂತೆ ಅಂಗವಿಕಲರ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ರಸ್ತೆ ಸಂಪರ್ಕ ಸಮಸ್ಯೆ, ಪಡಿತರ ಚೀಟಿ, ಹೊಲಗಳ ಸರ್ವೆ ಸಮಸ್ಯೆ, ವೃದ್ಧಾಪ್ಯ ವಿಧವಾ ವೇತನ ಸೇರಿದಂತೆ ಒಟ್ಟು   ಅರ್ಜಿಗಳು ಜನತಾದರ್ಶನ ಕಾರ್ಯಕ್ರಮದಲ್ಲಿ ಸ್ವೀಕೃತಗೊಂಡಿದ್ದು ಮುಂದಿನ ತಿಂಗಳು ನಡೆಯುವ ಜನತಾದರ್ಶನ ಕಾರ್ಯಕ್ರಮದ ಒಳಗಾಗಿ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿ ಕೊಡಬೇಕೆಂದು ಶಾಸಕ ಯಾಸೀರಖಾನ್ ಪಠಾಣ ಅಧಿಕಾರಿಗಳಿಗೆ ಸೂಚಿಸಿದರು.ಬಾಕ್ಸ್‌ :ನಾಗರಿಕ ಸಮಾಜದ ತಲೆತಗ್ಗಿಸುವಂತಹ ಪರಿಸ್ಥಿತಿಯಲ್ಲಿ ಜೊಂಡಲಗಟ್ಟಿ ಗ್ರಾಮಸ್ಥರು.ಸ್ವತಂತ್ರವಾಗಿ 75 ವರ್ಷ ಕಳೆದರೂ ಕುಡಿಯುವ ನೀರು ವಿದ್ಯುತ್ ಸಮಸ್ಯೆ ರಸ್ತೆ ಸಂಪರ್ಕ, ಸುಸಜ್ಜಿತವಾದ ಸೂರು ಸೇರಿದಂತೆ ಮೂಲಭೂತ ಸೌಕರ್ಯಗಳಿಲ್ಲದೆ ಶಿಗ್ಗಾಂವಿ ತಾಲೂಕಿನ ಜೊಂಡಲಗಟ್ಟಿ ಗ್ರಾಮಸ್ಥರು ತಮ್ಮ ಬದುಕನ್ನು ಕಳೆಯುತ್ತಿದ್ದಾರೆ. 80 ವರ್ಷದ ಹಿಂದೆ ಉದಯವಾದ ಗ್ರಾಮದಲ್ಲಿ ವಾಸಿಸಲು ಮನೆಯಿದ್ದರೂ ಸಹ ಮನೆಗಳಿಗೆ ಪಟ್ಟಾ ಇಲ್ಲದಿರುವುದು, ಗ್ರಾಮ ಪಂಚಾಯಿತಿ ಮತ್ತು ತಾಲೂಕ ಆಡಳಿತದಲ್ಲಿ ಈ ಗ್ರಾಮಸ್ಥರು ಮನೆಗಳ ಪಟ್ಟಾ ದೊರೆಯದ ಕಾರಣ ಗ್ರಾಮಸ್ಥರು ಕತ್ತಲಯ ಬದುಕನ್ನು ಕಳೆಯುವಂತಾಗಿದೆ. ಜಿಲ್ಲಾಡಳಿತ ಮತ್ತು ತಾಲೂಕಾಡಳಿತದ ಅಧಿಕಾರಿಗಳೊಂದಿಗೆ ಆ ಗ್ರಾಮಕ್ಕೆ ತೆರಳಿ ಅವರ ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸೂಚಿಸಲಾಗಿದ್ದು ಮುಂದಿನ ಜನತಾದರ್ಶನದ ಒಳಗಾಗಿ ಅವರ ಸಮಸ್ಯೆಗಳನ್ನು ಸಂಪೂರ್ಣವಾಗಿ ಪರಿಹರಿಸಲಾಗುವುದು.ಅಪರ ಜಿಲ್ಲಾಧಿಕಾರಿ ಡಾ. ನಾಗರಾಜ ಎಲ್, ಪೋಲಿಸ್ ವರಿಷ್ಟಾಧಿಕಾರಿ ಅಂಶುಕುಮಾರ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಕ್ಷಯ ಶ್ರೀದರ, ತಹಸೀಲ್ದಾರ ರವಿ ಕೊರವರ, ಸವಣೂರು ತಹಸೀಲ್ದಾರ ಭರತಕುಮಾರ್, ತಡಸ ಗ್ರಾಪಂ ಅಧ್ಯಕ್ಷೆ ರಜಿಯಾ ಅರಳಿಕಟ್ಟಿ, ಉಪಾಧ್ಯಕ್ಷ ಪ್ರಭು ನಂಜಪ್ಪನವರ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕುಮಾರ ಮಣ್ಣವಡ್ಡರ, ಗ್ಯಾರಂಟಿ ಯೋಜನೆಯ ಜಿಲ್ಲಾ ಉಪಾಧ್ಯಕ್ಷ ಗುಡ್ಡಪ್ಪ ಜಲದಿ, ತಾಲೂಕು ಅಧ್ಯಕ್ಷ ಶೇಖಪ್ಪ ಮಣಕಟ್ಟಿ, ಕಿರಣಗೌಡ್ರ ಪಾಟೀಲ ಸೇರಿದಂತೆ ಜಿಲ್ಲಾ ಮತ್ತು ತಾಲೂಕ ಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.